ಸಿದ್ದರಾಮಯ್ಯ ಸಿಎಂ ಆಗಿ ಪೂರ್ಣಾವಧಿ ಪೂರೈಸಲಿ: ಸಚಿವ ಡಾ.ಎಚ್.ಸಿ.ಮಹದೇವಪ್ಪ

ಕೆ.ಶಿವಕುಮಾರ್ ಅವರಿಗೆ ಅಭಿನಂದನಾ ಸಮಾರಂಭದ
ಕೆ.ಶಿವಕುಮಾರ್ ಅವರಿಗೆ ಅಭಿನಂದನಾ ಸಮಾರಂಭದ
Published on

ಪ್ರಮುಖ ಮುಖ್ಯಾಂಶಗಳು

  • ಸಿದ್ದರಾಮಯ್ಯ ಸಿಎಂ ಆಗಿ ಪೂರ್ಣಾವಧಿ ಪೂರೈಸಬೇಕು
  • ಸಿದ್ದರಾಮಯ್ಯ ರಾಜಕೀಯವಾಗಿ ಮುಳುಗಿದರೆ ಕಾಂಗ್ರೆಸ್ ಮತ್ತು ಅದರೊಂದಿಗೆ ‘ಅಹಿಂದ’ ಸಹ ಮುಳುಗುತ್ತದೆ.
  • ಸಿದ್ದರಾಮಯ್ಯ ನಾಯಕತ್ವ ಇನ್ನಷ್ಟು ಗಟ್ಟಿಗೊಳಿಸಬೇಕು.
  • ಅದನ್ನು ಅಲುಗಾಡಿಸಲು ಕೆಲವರು ಪ್ರಯತ್ನ ಮಾಡಿದ್ದರು.
ಮೈಸೂರು: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ 5 ವರ್ಷದ ಅವಧಿಯನ್ನು ಪೂರ್ಣ ಮಾಡಲೇಬೇಕು. ಅವರು ಅಧಿಕಾರದಲ್ಲಿ ಮುಂದುವರಿಯದಿದ್ದರೆ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ಉಳಿಯುವುದು ಕಷ್ಟಕರ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ನಗರದ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಎಂಎಲ್‌ಸಿ ಕೆ.ಶಿವಕುಮಾರ್ ಅವರಿಗೆ ಅಭಿನಂದನಾ ಸಮಾರಂಭದದಲ್ಲಿ ಮಾತನಾಡಿ, ಯಾವಾಗಲೂ ಯೋಗ್ಯರ ಕೈಗೆ ಅಧಿಕಾರ ಕೊಡಬೇಕೆಂದು ಅಂಬೇಡ್ಕರ್ ಹೇಳಿದ್ದಾರೆ. 
ಎಷ್ಟು ಜನರನ್ನು ಸಿಎಂ ಮಾಡೋದು? ಇರುವುದು ಒಂದೇ ಸ್ಥಾನ. ಜೈಕಾರ ಕೂಗುವವರು ನನಗೂ, ಪರಮೇಶ್ವರ್ ಸೇರಿ ಎಲ್ಲರಿಗೂ ಕೂಗುತ್ತಾರೆ. ಆದರೆ, ಸಿದ್ದರಾಮಯ್ಯ ಸಿಎಂ ಆಗಿ ಪೂರ್ಣಾವಧಿ ಪೂರೈಸಬೇಕು ಎಂದು ಸಿದ್ದರಾಮಯ್ಯರ ಪರ ಬ್ಯಾಟ್ ಬೀಸಿದರು. 
ಸಿದ್ದರಾಮಯ್ಯ ರಾಜಕೀಯವಾಗಿ ಮುಳುಗಿದರೆ ಕಾಂಗ್ರೆಸ್ ಮತ್ತು ಅದರೊಂದಿಗೆ ‘ಅಹಿಂದ’ ಸಹ ಮುಳುಗುತ್ತದೆ. ಹೀಗಾಗಿ, ಅಹಿಂದ ಸಮುದಾಯದವರು ಹುಷಾರಾಗಿರಬೇಕು. 
ಶೇ.80ರಷ್ಟಿರುವ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ದಲಿತರು ಪರಸ್ಪರ ಸಹಬಾಳ್ವೆ ನಡೆಸುವ ಮೂಲಕ ವ್ಯೆಹ ರಚಿಸಿಕೊಳ್ಳಬೇಕು. 
ಸಂಘಟನೆಯೊಂದಿಗೆ ಶಕ್ತಿಯಾಗುವ ಮೂಲಕ ‘ಅಹಿಂದ’ ರಾಜಕೀಯವನ್ನು ನಿಯಂತ್ರಿಸಬೇಕು. ನಂಬಿಕಾರ್ಹ ವ್ಯಕ್ತಿಯಾಗಿರುವ ಸಿದ್ದರಾಮಯ್ಯ ನಾಯಕತ್ವದ ಮೇಲೆ ನಂಬಿಕೆ ಇಡಬೇಕು. ಅವರ ಮೇಲೆ ಈವರೆಗೆ ಒಂದೂ ದೂರಗಳಿಲ್ಲ. ಭ್ರಷ್ಟಾಚಾರದ ಆರೋಪಗಳೂ ಇಲ್ಲ ಎಂದು ಸಿಎಂ ಪರ ವಕಾಲತ್ತು ವಹಿಸಿದರು.
ಸುದೀರ್ಘ ಅವಧಿಗೆ ಸಿಎಂ ಆಗುವ ಮೂಲಕ ಡಿ.ದೇವರಾಜ ಅರಸು ದಾಖಲೆಯನ್ನು ಸಿದ್ದರಾಮಯ್ಯ ಮುರಿದಿದ್ದಾರೆ. ಅವರು ಕೊಟ್ಟಿರುವ 16 ಬಜೆಟ್‌ಗಳ ಕುರಿತು ವಿಶ್ಲೇಷಣೆ ಮಾಡಿದರೆ ಸಿದ್ದರಾಮಯ್ಯ ಅವರ ರಾಜಕೀಯ, ಸಾಮಾಜಿಕ, ಜನಪರ ಬದ್ಧತೆ ಗೊತ್ತಾಗುತ್ತದೆ. ಅವರಿಗೆ ವ್ಯಕ್ತಿಗತ ಅಜೆಂಡಾವೇ ಇಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ನಾಯಕತ್ವ ಇನ್ನಷ್ಟು ಗಟ್ಟಿಗೊಳಿಸಬೇಕು. ಅದನ್ನು ಅಲುಗಾಡಿಸಲು ಕೆಲವರು ಪ್ರಯತ್ನ ಮಾಡಿದ್ದರು. ಆದರೆ, ಬೆಟ್ಟ ಅಗೆದು ಇಲಿ ಹಿಡಿದಂತಾಯಿತು ಎಂದು ಪರೋಕ್ಷವಾಗಿ ಮುಡಾ ನಿವೇಶನ ಹಂಚಿಕೆ ಪ್ರಕರಣವನ್ನು ಪ್ರಸ್ತಾಪಿಸಿ ವಿರೋಧಿಗಳಿಗೆ ಕುಟುಕಿದರು.
ಇತ್ತೀಚೆಗೆ ‘ಮತ್ತೆ ಮುಖ್ಯಮಂತ್ರಿ’ ನಾಟಕ ನೋಡಿದೆ. ಅದರಲ್ಲಿ ರಾಜಕೀಯವನ್ನು ಚೆನ್ನಾಗಿ ಪ್ರತಿಬಿಂಬಿಸಲಾಗಿದೆ. ಅದನ್ನು ನೋಡಿದ ಬಳಿಕ ರಾಜಕೀಯದಲ್ಲಿ ಯಾರನ್ನು ನಂಬಬೇಕು, ಯಾರನ್ನು ಬಿಡಬೇಕೆಂಬುದೇ ಗೊತ್ತಾಗುತ್ತಿಲ್ಲ. ಸಿಎಂಗೆ ಈ ನಾಟಕ ನೋಡಲು ತಿಳಿಸಿರುವೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ.ವೆಂಕಟೇಶ್, ಶಾಸಕರಾದ ತನ್ವೀರ್ ಸೇಠ್, ಎ.ಆರ್.ಕೃಷ್ಣಮೂರ್ತಿ, ದರ್ಶನ್ ಧ್ರುವನಾರಾಯಣ್, ಕೆ.ಹರೀಶ್‌ಗೌಡ, ರವಿಶಂಕರ್ ಇತರರಿದ್ದರು.
"

ದಲಿತರು ಬಹಳ ಬುದ್ಧಿವಂತರಾಗಿದ್ದಾರೆ. ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಬದಲಿಸುವುದಾದರೆ ದಲಿತರಿಗೆ ಅವಕಾಶ ಕೊಡಬೇಕೆಂದು ಪರೋಕ್ಷವಾಗಿ ಕೇಳುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರಬೇಕು. ಅವರ ನಾಯಕತ್ವ ಗಟ್ಟಿಗೊಳಿಸಲು ಮುಂದಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net