ಹುಣಸೂರು ತಾಲೂಕು ಕೊಮ್ಮೇಗೌಡನಕೊಪ್ಪಲು ಗ್ರಾಮದ ದೇವಾಲಯದ ಸ್ವಚ್ಛತಾ ಕಾರ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು. ಶುಭದೇವಿ, ಮಹೇಶ್, ಪೂಜಾ ಇತರರು ಇದ್ದರು.
ಧಾರ್ಮಿಕ ಶ್ರದ್ಧಾ ಕೇಂದ್ರಗಳು ಸಮಾಜಮುಖಿ ಕಾರ್ಯಗಳ ವೇದಿಕೆಗಳಾದರೆ ಜನರಿಗೆ ಅನುಕೂಲವಾಗಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಚಿಕ್ಕಹುಣಸೂರು ಘಟಕದ ಯೋಜನಾಧಿಕಾರಿ ಶುಭದೇವಿ ಅಭಿಪ್ರಾಯಪಟ್ಟರು.
ತಾಲೂಕಿನ ಕೊಮ್ಮೇಗೌಡನಕೊಪ್ಪಲು ಗ್ರಾಮದ ಶ್ರೀ ಮಲೆ ಮಹದೇಶ್ವರಸ್ವಾಮಿ ದೇಗುಲವನ್ನು ಗ್ರಾಮಸ್ಥರೊಂದಿಗೆ ಸ್ವಚ್ಛತೆ ಕೈಗೊಂಡು ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರ ಆಶಯದಂತೆ ಸ್ವಾತಂತ್ರ್ಯ ದಿನಾಚರಣೆ ವೇಳೆ ಎಲ್ಲ ಧಾರ್ಮಿಕ ಪೂಜಾ ಕೇಂದ್ರಗಳನ್ನು ಸ್ವಚ್ಛತೆಗೊಳಿಸಿ ಜನರಲ್ಲಿ ಪೂಜ್ಯ ಭಾವನೆ ಮೂಡಿಸುವ ಕಾರ್ ನಡೆಸಲಾಗುತ್ತದೆ. ಈ ಕಾರ್ಯವನ್ನು ಸಂಕ್ರಾಂತಿ ಮತ್ತು ಸ್ವಾತಂತ್ರ್ಯ ದಿನಾಚರಣೆಯಂದು (ವರ್ಷಕ್ಕೆರಡು ಬಾರಿ) ಕೈಗೊಳ್ಳಲಾಗುತ್ತದೆ. ಧಾರ್ಮಿಕ ಕೇಂದ್ರಗಳು ಕೇವಲ ಪೂಜಾ ಕೇಂದ್ರಗಳಾಗದೇ ಗ್ರಾಮೀಣ ಜನರಲ್ಲಿ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲು ಪ್ರೇರೇಪಿಸುವ ಕೇಂದ್ರಗಳಾಗಬೇಕೆಂಬುದೇ ಯೋಜನೆಯ ಮೂಲ ಉದ್ದೇಶವಾಗಿದೆ. ಈ ದಿಶೆಯಲ್ಲಿ ತಾಲೂಕಿನ ಎಲ್ಲ ಗ್ರಾಮೀಣ ಭಾಗಗಳಲ್ಲಿನ ಧಾರ್ಮಿಕ ಕೇಂದ್ರಗಳನ್ನು ಶುಚಿಗೊಳಿಸುವ ಕಾರ್ಯವನ್ನು ಯೋಜನೆ ವತಿಯಿಂದ ನಡಸಲಾಗುತ್ತದೆ ಎಂದರು.
ಈ ವೇಳೆ ಯೋಜನೆಯ ಕೃಷಿ ಮೇಲ್ವಿಚಾರಕ ಮಹೇಶ್, ಸೇವಾ ಪ್ರತಿನಿಧಿಗಳಾದ ಪೂಜಾ ಮತ್ತು ಪದ್ಮಮ್ಮ ಹಾಗೂ ಕೊಮ್ಮೇಗೌಡನ ಕೊಪ್ಪಲು ಗ್ರಾಮದ ಪ್ರಜ್ಞಾ ನವಜೀವನ ಸಮಿತಿ ಸದಸ್ಯರು, ದೇವಾಲಯದ ಅರ್ಚಕರು ಮತ್ತು ಗ್ರಾಮಸ್ಥರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.