ದೇಶಭಕ್ತಿ ಒಂದು ದಿನಕ್ಕೆ ಸೀಮಿತವಾಗದೆ ನಮ್ಮೊಳಗೆ ಆವರಿಸಿಕೊಳ್ಳಲಿ:ಆರ್.ವಾಸುದೇವಭಟ್ ಅಭಿಮತ
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮೈಸೂರು ಜಿಲ್ಲಾ ಸಮಿತಿಯಿಂದ ವಿಜಯವಿಠಲ ಕಾಲೇಜಿನ ಆವರಣದಲ್ಲಿ ಆಯೋಜಿಸಿರುವ ಎರಡು ದಿನಗಳ ಬಹುಭಾಷಾ ದೇಶಭಕ್ತಿ ಗೀತ ಗಾಯನ ಸ್ಪರ್ಧೆಯನ್ನು ಆರ್.ವಾಸುದೇವಭಟ್ ಉದ್ಘಾಟಿಸಿದರು. ಜಯಲಕ್ಷ್ಮೀ, ಎಸ್.ಸುಬ್ರಹ್ಮಣ್ಯ, ಡಾ.ವಿ.ರಂಗನಾಥ್, ಡಾ. ಪಿ.ಎಚ್.ರಾಘವೇಂದ್ರ ಶೆಟ್ಟಿ, ಗಾಯತ್ರಿ ಸುಂದರೇಶ್ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ದೇಶಭಕ್ತಿಗೀತೆಯನ್ನು ಯಾವುದೇ ಭಾಷೆಯಲ್ಲಿ ಹಾಡಿದರೂ ಅದರ ಭಾವದಿಂದ ನಮಗೆ ಅರ್ಥವಾಗುತ್ತದೆ
ಚಿಕ್ಕ ವಯಸ್ಸಿನಿಂದಲೇ ಮಕ್ಕಳಲ್ಲಿ ದೇಶಭಕ್ತಿಯ ಬಗ್ಗೆ ಅರಿವು ಮೂಡಿಸುವ ಇಂತಹ ಕೆಲಸಗಳು ಶ್ಲಾಘನೀಯ
ಮೈಸೂರು:
ದೇಶಭಕ್ತಿ ಎಂಬುದು ಕೇವಲ ಒಂದೆರೆಡು ದಿನ ಅಥವಾ ತಿಂಗಳಿಗೆ ಮಾತ್ರ ಸೀಮಿತವಾಗಿರದೆ ಪ್ರತಿದಿನವೂ ನಮ್ಮೊಳಗೆ ಆವರಿಸಿಕೊಳ್ಳಬೇಕು ಎಂದು ವಿಜಯವಿಠಲ ವಿದ್ಯಾಸಂಸ್ಥೆಯ ಗೌರವಾಧ್ಯಕ್ಷ ಆರ್.ವಾಸುದೇವಭಟ್ ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮೈಸೂರು ಜಿಲ್ಲಾ ಸಮಿತಿಯಿಂದ ಸರಸ್ವತಿಪುರಂನಲ್ಲಿರುವ ವಿಜಯವಿಠಲ ಕಾಲೇಜಿನ ಆವರಣದಲ್ಲಿ ಎರಡು ದಿನ ಆಯೋಜಿಸಿರುವ ಬಹುಭಾಷಾ ದೇಶಭಕ್ತಿ ಗೀತ ಗಾಯನ ಸ್ಪರ್ಧೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶಭಕ್ತಿ ಗೀತೆಗಳನ್ನು ಹಾಡುವಂತ ವಿದ್ಯಾರ್ಥಿಗಳು ನಿಜಕ್ಕೂ ದೇಶದ ಹೆಮ್ಮೆ, ಬಹುಮಾನಕ್ಕೆ ಹಾಡುವುದಕ್ಕಿಂತ ದೇಶಭಕ್ತಿಯನ್ನು ಹೊರಹೊಮ್ಮುವಂತಹ ಹಾಡನ್ನು ಹಾಡುವುದು ನಿಜವಾದ ದೇಶಭಕ್ತಿಯನ್ನು ತೋರುತ್ತದೆ ಎಂದರು.
ಒಂದು ದಿನ ಅಥವಾ ತಿಂಗಳಿಗೆ ಮಾತ್ರ ದೇಶಭಕ್ತಿ ಸೀಮಿತಗೊಳ್ಳಬಾರದು. ಅದು ನಮ್ಮ ಮನಸ್ಸು, ಆಚರಣೆಯಲ್ಲಿ ನಿತ್ಯ ಪ್ರಜ್ವಲಿಸಬೇಕು. ಎಲ್ಲ ಜನ, ಭಾಷೆಗಳಲ್ಲಿ ದೇಶಭಕ್ತಿ, ಐಕ್ಯತೆ ಮೂಡಿಸಲು ಬಹುಭಾಷಾ ಗೀತಗಾಯನ ದೇಶದೆಲ್ಲೆಡೆ ನಡೆಯುವಂತಾದರೆ ಉತ್ತಮ. ದೇಶಭಕ್ತಿಗೀತೆಯನ್ನು ಯಾವುದೇ ಭಾಷೆಯಲ್ಲಿ ಹಾಡಿದರೂ ಅದರ ಭಾವದಿಂದ ನಮಗೆ ಅರ್ಥವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪತ್ರಕರ್ತೆ ಜಯಲಕ್ಷ್ಮಿಮಾತನಾಡಿ, ಎಲ್ಲ ಭಾಷೆಗಳ ದೇಶಭಕ್ತಿಗೀತೆಗಳನ್ನು ಒಂದೇ ಸೂರಿನಡಿ ಕೇಳುವುದು ಸಂತಸದ ವಿಷಯ. ಈ ದೇಶಭಕ್ತಿಗೀತೆಗಳನ್ನು ಕೇಳುತ್ತಿದ್ದರೆ ಪುಟ್ಟ ಭಾರತವೇ ಮೇಳೈಸಿದೆ ಎಂಬ ಭಾವನೆ ಮೂಡುತ್ತಿದೆ. ಚಿಕ್ಕ ವಯಸ್ಸಿನಿಂದಲೇ ಮಕ್ಕಳಲ್ಲಿ ದೇಶಭಕ್ತಿಯ ಬಗ್ಗೆ ಅರಿವು ಮೂಡಿಸುವ ಇಂತಹ ಕೆಲಸಗಳು ಶ್ಲಾಘನೀಯ ಎಂದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಜಿಲ್ಲಾ ಅಧ್ಯಕ್ಷ ಎಸ್.ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು. ಪರಿಷದ್‌ನ ರಾಜ್ಯ ಸಂಪರ್ಕ ಹಾಗೂ ವಲಯ ಪ್ರಮುಖ್ ಡಾ.ವಿ.ರಂಗನಾಥ್, ವೈದ್ಯ ಡಾ. ಪಿ.ಎಚ್.ರಾಘವೇಂದ್ರ ಶೆಟ್ಟಿ, ಗಾಯತ್ರಿ ಸುಂದರೇಶ್ ಇತರರು ಇದ್ದರು.
ಮೊದಲ ದಿನದ ಸ್ಪರ್ಧೆಯಲ್ಲಿ 10 ರಿಂ 18 ರ ವಯೋಮಾನದ ಒಟ್ಟು 59 ವಿದ್ಯಾರ್ಥಿಗಳು, ಮೇಘಾಲಯ, ಮಣಿಪುರಿ, ಅಸ್ಸಾಮಿ, ಕನ್ನಡ, ಹಿಂದಿ ಸೇರಿದಂತೆ ವಿವಿಧ ಹನ್ನೆರಡು ಭಾಷೆಯ ದೇಶಭಕ್ತಿ ಗೀತೆಗಳನ್ನು ಹಾಡಿದರು. ಭಾನುವಾರ 19ರಿಂದ 59 ವರ್ಷ ಹಾಗೂ 60 ವರ್ಷ ಹಾಗೂ ಮೇಲ್ಪಟ್ಟವರ ವಿಭಾಗದಲ್ಲಿ ಗಾಯನ ಸ್ಪರ್ಧೆ ಆಯೋಜಿಸಲಾಗಿದೆ.