ಪ್ರಕೃತಿ ಸಂರಕ್ಷಣೆ ಎಲ್ಲರ ಸಂಕಲ್ಪವಾಗಲಿ

 ಕಾವೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ  ನಾಗರಾಜ ಸಿದ್ದಪ್ಪ ಅಂಕಸದೊಡ್ಡಿ ಮಕ್ಕಳೊಂದಿಗೆ ಉದ್ಘಾಟಿಸಿದರು. ಪ್ರೊ.ಶರಣಪ್ಪ ವಿ.ಹಲಸೆ, ಪ್ರೊ.ಎಸ್.ಕೆ.ನವೀನ್‌ಕುಮಾರ್,  ಡಾ.ಜೆ.ಎಸ್.ಚಂದ್ರಶೇಖರ್, ಡಿ.ಉದಯಕುಮಾರ್, ಪ್ರೊ.ಬಿ.ಎಂ.ಸದಾಶಿಮೂರ್ತಿ ಇನ್ನಿತರರಿದ್ದರು.
ಕಾವೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ನಾಗರಾಜ ಸಿದ್ದಪ್ಪ ಅಂಕಸದೊಡ್ಡಿ ಮಕ್ಕಳೊಂದಿಗೆ ಉದ್ಘಾಟಿಸಿದರು. ಪ್ರೊ.ಶರಣಪ್ಪ ವಿ.ಹಲಸೆ, ಪ್ರೊ.ಎಸ್.ಕೆ.ನವೀನ್‌ಕುಮಾರ್, ಡಾ.ಜೆ.ಎಸ್.ಚಂದ್ರಶೇಖರ್, ಡಿ.ಉದಯಕುಮಾರ್, ಪ್ರೊ.ಬಿ.ಎಂ.ಸದಾಶಿಮೂರ್ತಿ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಾಗರಾಜ ಸಿದ್ದಪ್ಪ ಅಂಕಸದೊಡ್ಡಿ ಆಶಯ
  • ಕರಾಮುವಿದಲ್ಲಿ ವಿಶ್ವ ಪರಿಸರ ದಿನಾಚರಣೆ
ಮೈಸೂರು: ಪರಿಸರ ಕಾಳಜಿ ಸಾರ್ವಜನಿಕ ಪ್ರದರ್ಶನವಲ್ಲ. ಅದು ಮನೆಯಿಂದಲೇ ಶುರು ಆಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಾಗರಾಜ ಸಿದ್ದಪ್ಪ ಅಂಕಸದೊಡ್ಡಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಕರಾಮುವಿಯ ಕಾವೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪರಿಸರದ ಕಳಕಳಿ ಮನೆಯಿಂದಲೇ ಪ್ರಾರಂಭವಾಗಲಿ. ಹಸಿ ಕಸ, ಒಣ ಕಸವನ್ನು ವಿಂಗಡನೆ ಮಾಡಿ ನೀಡಬೇಕು. ಔಷಧ ಇನ್ನಿತರ ಅಪಾಯಕಾರಿ ಕೆಂಪು ತ್ಯಾಜ್ಯವನ್ನೂ ಪ್ರತ್ಯೇಕವಾಗಿ ವಿಭಜನೆ ಮಾಡಿ ಸ್ಥಳೀಯ ಸಂಸ್ಥೆಯ ಪೌರಕಾರ್ಮಿಕರಿಗೆ ಕೊಡಬೇಕು. ಹೀಗೆ ಪರಿಸರವನ್ನು ಸ್ವಚ್ಛವಾಗಿ ಇಡುವಂತಹ ಸಣ್ಣ ಸಣ್ಣ ಕೆಲಸವನ್ನು ಮಾಡಬೇಕು ಎಂದರು.
ಪರಿಸರ ಅಸಮತೋಲದ ಕುರಿತು ಭೂಮಿ ಯಾವತ್ತೂ ಸಂವಾದ ಮಾಡಲ್ಲ. ಅದು ಉಗ್ರ ಸಂದೇಶವನ್ನೇ ಕೊಡುತ್ತದೆ. ಬಿರುಗಾಳಿ, ಭೂಕಂಪ, ಪ್ರವಾಹ, ಭೂಕುಸಿತ...ಹೀಗೆ ವಿವಿಧ ರೂಪದಲ್ಲಿ ಅದು ರವಾನಿಸುತ್ತದೆ. ನಾವು ಪರಿಸರವನ್ನು ಕಾಯ್ದುಕೊಂಡರೆ, ಅದಕ್ಕೆ ಪ್ರತಿಯಾಗಿ ಅನೇಕ ಅನುಕೂಲವನ್ನೂ ಅದುವೇ ಉಣಬಡಿಸುತ್ತದೆ. ಇದನ್ನು ಮೊದಲು ಅರ್ಥೈಸಿಕೊಳ್ಳಬೇಕಿದೆ ಎಂದರು.
ಪರಿಸರದ ಜಾಗೃತಿ ಜೀವನ ಶೈಲಿಯ ಭಾಗವಾಗಬೇಕು. ಮೊಬೈಲ್ ಅನ್ನು ಹೇಗೆ ನಾವುಗಳು ಮರೆಯುವುದಿಲ್ಲವೋ ಅದೇ ರೀತಿ ಪರಿಸರವನ್ನು ನಿರ್ಲಕ್ಷಿಸಬಾರದು. ಹಾನಿ ಮತ್ತು ಮಾಲಿನ್ಯವಾಗದಂತೆ ಪರಿಸರವನ್ನು ಸುಸ್ಥಿರವಾಗಿ ನಿರ್ವಹಿಸಬೇಕಿದೆ ಎಂದರು.
ಪ್ರಕೃತಿ ಸಂರಕ್ಷಣೆ ಪ್ರತಿಯೊಬ್ಬರ ಜೀವನ ಸಂಕಲ್ಪವಾಗಬೇಕು. ಹೀಗಾದರೆ ಮಾತ್ರ ಪರಿಸರವನ್ನು ಸುಂದರ, ಸ್ವಚ್ಛವಾಗಿ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಪರಿಸರಕ್ಕೆ ತೊಂದರೆಯಾದರೆ, ಮನುಷ್ಯನಿಗೆ ನಿಶ್ಚಿತವಾಗಿ ಕಂಟಕ ಎದುರಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಪರಿಸರವನ್ನು ಉಳಿಸಿ ಬೆಳೆಸಲು ಕಾರ್ಯೋನ್ಮುಖವಾಗಬೇಕು. ಇಲ್ಲವಾದರೆ, ಮನುಷ್ಯರಿಗೆ ಉಳಿಗಾಲವೇ ಇರುವುದಿಲ್ಲ ಎಂದು ಎಚ್ಚರಿಸಿದರು.
ಪರಿಸರ ಪೂರ್ವಜರ ಸ್ವತ್ತು ಅಲ್ಲ. ಅದು ಸಾಲ. ಮುಂದಿನ ತಲೆಮಾರಿಗೆ ಬಡ್ಡಿ ಸಹಿತ ಕೊಟ್ಟು ಹೋಗಬೇಕು. ಪ್ರಕೃತಿ ರಕ್ಷಣೆ ಪ್ರತಿಯೊಬ್ಬರ ಮೂಲ ಕರ್ತವ್ಯವಾಗಿದೆ ಎಂದರು.
ನಾಡಗೀತೆಯಲ್ಲೇ ನಾಡಿನ ನಿಸರ್ಗದ ಕುರಿತು ಕಾಳಜಿ ಅಡಗಿದೆ. ‘ಜಯ ಸುಂದರ ನದಿ ವನಗಳ ನಾಡೇ, ಜಯ ಹೇ ರಸ ಋಷಿಗಳ ಬೀಡೆ!..’ ಹೀಗೆ ವರ್ಣನೆ ಇರುವ ನಾಡಿನ ಸಮೃದ್ಧಿ, ಸಂಪನ್ಮೂಲವನ್ನು ಉಳಿಸಿಬೇಕಾಗಿದೆ ಎಂದೂ ಹೇಳಿದರು.
ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಕುಲಸಚಿವ ಪ್ರೊ.ಎಸ್.ಕೆ.ನವೀನ್‌ಕುಮಾರ್, ಕರಾಮುವಿ ಪರಿಸರ ವಿಭಾಗದ ಅಧ್ಯಕ್ಷ ಡಾ.ಜೆ.ಎಸ್.ಚಂದ್ರಶೇಖರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಿ.ಉದಯಕುಮಾರ್, ಎಸ್‌ಜೆಸಿಇ ಪರಿಸರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಬಿ.ಎಂ.ಸದಾಶಿಮೂರ್ತಿ, ತೋಟಗಾರಿಕೆ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಜಿ.ಮಂಜುನಾಥ್, ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್.ಲೋಕೇಶ್, ಕರಾಮಾನಿಮಂ ಹಿರಿಯ ಪರಿಸರ ಅಧಿಕಾರಿ ಎಸ್.ಕೆ.ವಾಸುದೇವ, ಪರಿಸರ ಅಧಿಕಾರಿ ವಿ.ಎಸ್.ಕುಮಾರ್, ವಿ.ಸುನಿಲ್, ಡಾ.ಎಂ.ಶ್ರುತಿ, ಮಡಿಲು ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಶ್ರೀನಿವಾಸ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net