ತಾಲೂಕಿನ ಹೆಬ್ಬಲಗುಪ್ಪೆ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸೈಕಲ್ ವಿತರಣಾ ಕಾರ್ಯಕ್ರಮದಲ್ಲಿ ಅನೀಲ್ ಚಿಕ್ಕಮಾದು, ಶ್ರೀನಿವಾಸ್, ಎನ್.ಎಸ್. ಮಂಜುನಾಥ್, ಶಿವನಾಗಶೆಟ್ಟಿ, ಅಶೋಕ್, ಅಜರುದ್ದೀನ್, ಸುಮಂತ್ ಇತರರಿದ್ದರು.
ಎಚ್.ಡಿ. ಕೋಟೆ : ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸ್ಥಳೀಯರು ಕೈಜೋಡಿಸಿಕೊಂಡಾಗ ಮಾತ್ರ ಶಾಲೆಗಳು ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ತಾಲೂಕಿನ ಹೆಬ್ಬಲಗುಪ್ಪೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ರವೀಂದ್ರ ಶಾಲೆ, ಆದರ್ಶ ವಿದ್ಯಾಲಯ, ಯರಳ್ಳಿ ಶಾಲೆ, ಯರಳ್ಳಿ ಕಾವಲ್ ಶಾಲೆ ಸೇರಿದಂತೆ ಇತರ ಶಾಲೆಯ ವಿದ್ಯಾರ್ಥಿಗಳಿಗೆ ಕೆನರಾ ರೊಬ್ಯಾಕೋ ಮ್ಯುಚುವಲ್ ಫಂಡ್ ಮತ್ತು 24 ಮನೆ ತೆಲಗು ಶೆಟ್ಟರ ಸಮುದಾಯದ ವತಿಯಿಂದ ನೀಡಿರುವ 113 ಸೈಕಲ್‌ಗಳ ವಿತರಣಾ ಕಾರ್ಯಕ್ರಮದಲ್ಲಿ ಸೈಕಲ್ ವಿತರಣೆ ಮಾಡಿ ಮಾತನಾಡಿದರು.
ನಮ್ಮ ತಾಲೂಕಿನಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಿದ ಪ್ರತಿಭೆಗಳು ಇದ್ದಾರೆ. ಅವರಂತೆ ವಿದ್ಯಾರ್ಥಿಗಳು ಎಲ್ಲ ಕ್ಷೇತ್ರದಲ್ಲೂ ಬೆಳೆಯಬೇಕು ಎಂದರು.
ಶಾಲೆಗೆ ಶೌಚಗೃಹದ ಅಗತ್ಯ ಇರುವುದನ್ನು ಗಮನಿಸಿದ್ದು ಮುಂದಿನ ದಿನಗಳಲ್ಲಿ ಶೌಚಗೃಹ ನಿರ್ಮಾಣಕ್ಕೆ ಹಣ ಮಂಜೂರು ಮಾಡಲಾಗುವುದು. ಸರಗೂರು ಮತ್ತು ಎಚ್.ಡಿ. ಕೋಟೆ ತಾಲೂಕಿನ ವಿವಿಧ ಶಾಲೆಗೆ 16 ಕೊಠಡಿಗಳು ಮಂಜೂರಾಗಿದೆ. ತಾಲೂಕಿಗೆ ಕೆಪಿಎಸ್‌ಸಿಯ ಎರಡು ಶಾಲೆಗಳು ಮಂಜೂರಾಗಿದ್ದು ಮುಂದಿನ ದಿನಗಳಲ್ಲಿ ಕಾಮಗಾರಿ ಭೂಮಿಪೂಜೆ ನೆರವೇರಿಸಲಾಗುವುದು ಎಂದರು.
ಕೆನರಾ ರೊಬ್ಯಾಕೋ ಮ್ಯುಚುಯಲ್ ಫಂಡ್‌ನ ಪ್ರತಿನಿಧಿ ಸುಮಂತ್ ಮಾತನಾಡಿ, ಸಮಾಜದಲ್ಲಿ ಅಂಕು ಡೊಂಕುಗಳನ್ನು ತಿದ್ದುವ ಸಲುವಾಗಿ ಕೆನರಾ ರೋಬ್ಯಾಕ್ ಫಂಡ್ ಮೂಲಕ ಸಮಾಜ ಸೇವೆಗಳನ್ನು ಮಾಡುತ್ತಾ ಬಂದಿದ್ದು ಭಾರತದಾಧ್ಯಂತ 6000 ವಿದ್ಯಾರ್ಥಿಗಳಿಗೆ ಸೈಕಲ್‌ಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು.
ತಹಸೀಲ್ದಾರ್ ಶ್ರೀನಿವಾಸ್, ತೆಲಗುಶೆಟ್ಟಿ ಸಮಾಜದ ಅಧ್ಯಕ್ಷ ಎನ್.ಎಸ್. ಮಂಜುನಾಥ್, ಶಿವನಾಗಶೆಟ್ಟಿ, ಅಶೋಕ್, ಅಜರುದ್ದೀನ್, ಸೌಮ್ಯಾ, ಶೇಖರ್, ಚಿಕ್ಕದಾಸನಾಯಕ, ಮಹದೇವನಾಯಕ, ನಾಗರಾಜು, ಚಿಕ್ಕನಾಯಕ, ಭೈರನಾಯಕ, ಮಹದೇವಶೆಟ್ಟಿ, ಮೃತ್ಯುಂಜಯ, ಜಗದೀಶ್, ಗಣೇಶ್, ನಾಗೇಶ್, ಸುಶೀಲಾ ಇದ್ದರು.