ನಮ್ಮಲ್ಲಿ ನೀರಿಲ್ಲ ಎಂದು ಕಾವೇರಿ ನೀರು ನಿಯಂತ್ರಣ ಸಮಿತಿಗೆ ಮೇಲ್ಮನವಿ ಸಲ್ಲಿಸಿ, ಮನವರಿಕೆ ಮಾಡುವ ಕೆಲಸವನ್ನು ಕರ್ನಾಟಕ ಮಾಡಬೇಕು
ಮೇಕೆದಾಟು ಪಾದಯಾತ್ರೆ ಮಾಡಿದ ಶಿವಕುಮಾರ್ ಅವರು, ಈಗ ಯಾಕೆ ಮೇಕೆದಾಟು ಯೋಜನೆ ಕುರಿತು ಪ್ರಸ್ತಾಪಿಸುತ್ತಿಲ್ಲ
ಮೈಸೂರು:
ರಾಜ್ಯದಲ್ಲೇ ನೀರಿಲ್ಲದ ಪರಿಸ್ಥಿತಿ ಇರುವುದರಿಂದ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬುದ್ಧಿ ಹೇಳಲಿ ಎಂದು ಮಾಜಿ ಸಂಸದ ಪ್ರತಾಪಸಿಂಹ ಹೇಳಿದರು.
ನಮ್ಮಲ್ಲಿ ಅಣೆಕಟ್ಟು ತುಂಬಿಲ್ಲ. ಆದ್ದರಿಂದ ರೈತರು ಬೆಳೆ ಬೆಳೆಯುವುದನ್ನು ಕಡಿಮೆ ಮಾಡಿ ಎಂದು ಮುಖ್ಯಮಂತ್ರಿಗಳು ನಮ್ಮ ರೈತರಿಗೆ ಹೇಳುತ್ತಾರೆ. ಆದರೆ ತಮಿಳುನಾಡಿಗೆ ಬುದ್ಧಿ ಹೇಳುತ್ತಿಲ್ಲ ಎಂದು ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದರು.
ನಮ್ಮಲ್ಲಿ ನೀರಿಲ್ಲ ಎಂದು ಕಾವೇರಿ ನೀರು ನಿಯಂತ್ರಣ ಸಮಿತಿಗೆ ಮೇಲ್ಮನವಿ ಸಲ್ಲಿಸಿ, ಮನವರಿಕೆ ಮಾಡುವ ಕೆಲಸವನ್ನು ಕರ್ನಾಟಕ ಮಾಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಕಾಂಗ್ರೆಸ್ ಪಾಲಿಗೆ ಕಾಮಧೇನುವಾಗಿದ್ದು, ರಿಯಲ್ ಎಸ್ಟೇಟ್ ದಂಧೆ ಸೇರಿದಂತೆ ಹೈಕಮಾಂಡ್‌ನ ಎಲ್ಲ ಆಸೆ, ಆಕಾಂಕ್ಷೆ ಪೊರೈಸಲು ಇದೆ. ಆದರೆ ತಮಿಳುನಾಡಿನಲ್ಲಿ ಯಾವುದೇ ಬಲ ಇಲ್ಲದ ಕಾಂಗ್ರೆಸ್ ಜೋಕರ್ ಕಾರ್ಡ್ ಇದ್ದಂತೆ ಇದೆ ಎಂದು ವ್ಯಂಗ್ಯವಾಡಿದರು.
ನಮ್ಮ ನೀರು ನಮ್ಮ ಹಕ್ಕು ಅಂಥ ತೂರಾಡಿಕೊಂಡೇ ಮೇಕೆದಾಟು ಪಾದಯಾತ್ರೆ ಮಾಡಿದ ಶಿವಕುಮಾರ್ ಅವರು, ಈಗ ಯಾಕೆ ಮೇಕೆದಾಟು ಯೋಜನೆ ಕುರಿತು ಪ್ರಸ್ತಾಪಿಸುತ್ತಿಲ್ಲ ಎಂದು ಟೀಕಿಸಿದರು.
ನನ್ನನ್ನು ಹೊರಗಿನವರು ಎಂದು ಟೀಕಿಸುವ ಶಾಸಕ ಕೆ.ಹರೀಶ್‌ಗೌಡ ಅವರು, ಕಾಂಗ್ರೆಸ್‌ಗೆ ಹೊರಗಿನವರಾಗಿದ್ದು, ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಹೋಗಿದ್ದನ್ನು ಮರೆತಿದ್ದಾರೆ. ಅಷ್ಟೇ ಅಲ್ಲ ಕಾಂಗ್ರೆಸ್ ಅದಿನಾಯಕಿ ಇಟಲಿಯಲ್ಲಿ ಹುಟ್ಟಿದ್ದರೂ ಬಳ್ಳಾರಿಗೆ ಬಂದು ಯಾಕೆ ಚುನಾವಣೆಗೆ ನಿಂತರು. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಕೇರಳಕ್ಕೆ ಹೋಗಿ ಸ್ಪರ್ಧಿಸಿರುವುದನ್ನು ಅವರು ಮರೆತಿದ್ದಾರೆಯೇ ಎಂದು ಪ್ರಶ್ನಿಸಿದರು.
ಅಭಿವೃದ್ಧಿ ವಿಚಾರದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಎಲ್ಲರನ್ನೂ ಟೀಕೆ ಮಾಡುತ್ತೇನೆ. ಎದುರು ಸಿಕ್ಕಾಗ ಅವರ ವಯಸ್ಸಿಗೆ, ಅನುಭವಕ್ಕಾಗಿ ಕಾಲಿಗೆ ಬಿದ್ದು ಗೌರವ ಕೊಡುತ್ತೇನೆ. ಗೌರವ, ಸ್ನೇಹ ಬೇರೆ ಅಭಿವೃದ್ಧಿ ಮಾಡಿಲ್ಲದಿದ್ದರೆ ಟೀಕೆ ಮಾಡುವುದು ಬೇರೆ ಎಂದು ಹರೀಶ್‌ಗೌಡ ಅವರ ಸ್ನೇಹದ ಕುರಿತ ಪ್ರಶ್ನೆಗೆ ಉತ್ತರಿಸಿದರು.