ನಗರದ ಇಂಜಿನಿಯರ್‌ಗಳ ಸಂಸ್ಥೆಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯ ಮಟ್ಟದ ವಿಚಾರಸಂಕಿರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಪುಷ್ಪ ನಮನ ಸಲ್ಲಿಸಿದರು. ಚಿಕ್ಕಮಗಳೂರಿನ ಭವಾನಿ, ರಾಜಶೇಖರ್, ನಿಂಗರಾಜು ಮಲ್ಲಾಡಿ, ನಂಜಪ್ಪ ಬಸವನಗುಡಿ, ತರೀಕೆರೆ ಎನ್.ವೆಂಕಟೇಶ್, ಆದಿ ನಾರಾಯಣಪ್ಪ ಇತರರಿದ್ದರು.
ಸಾಮಾಜಿಕ ನ್ಯಾಯ, ಒಳ ಮೀಸಲಾತಿ ಪರಿಕಲ್ಪನೆ ರಾಜ್ಯ ಮಟ್ಟದ ವಿಚಾರಸಂಕಿರಣ
ಒಳ ಮೀಸಲಾತಿ ಹೋರಾಟಕ್ಕೆ ನೂರು ವರ್ಷಗಳ ಚರಿತ್ರೆ
ಊಟ ಇಲ್ಲದಿದ್ದರೂ ಪರವಾಗಿಲ್ಲ, ಉತ್ತಮ ವಿದ್ಯಾಭ್ಯಾಸ ನೀಡಿ
ಮೈಸೂರು: ಮೂಲಸೌಕರ್ಯವಿಲ್ಲದೆ ಬದುಕುತ್ತಿರುವ ಕಾಯಕ ಸಮಾಜಗಳ ಜನರ ಸಂಕಷ್ಟ ಪರಿಹಾರಕ್ಕಾಗಿ ದಲಿತ ಸಂಘರ್ಷ ಸಮಿತಿ ಹೋರಾಟ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ಇಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಾಮಾಜಿಕ ನ್ಯಾಯ, ಒಳ ಮೀಸಲಾತಿ ಪರಿಕಲ್ಪನೆ ರಾಜ್ಯ ಮಟ್ಟದ ವಿಚಾರಸಂಕಿರಣದಲ್ಲಿ ಮಾತನಾಡಿದರು.
ಪರಿಶಿಷ್ಟ ಜಾತಿಯಲ್ಲೇ 60ರಿಂದ 70 ಜಾತಿಗಳ ಜನರು ಅಸಂಘಟಿತರಾಗಿದ್ದಾರೆ. ಅವರಿಗೆ ಸ್ವಂತ ಸೂರು ಇಲ್ಲ. ಕನಿಷ್ಠ ಮೂಲಸೌಕರ್ಯವೂ ಇಲ್ಲದೇ ಜೀವನ ನಡೆಸುತ್ತಿದ್ದಾರೆ. ಕಾಯಕ ಸಮಾಜಗಳ ಜನರು ತೊಂದರೆಯಲ್ಲಿದ್ದಾರೆ. ಇವೆಲ್ಲದರ ಬಗ್ಗೆ ಹೋರಾಟ ಮಾಡಬೇಕು ಎಂದು ಹೇಳಿದರು.
1970ರಲ್ಲಿ ದಲಿತ ಸಂಘರ್ಷ ಸಮಿತಿ ಶುರುವಾಯಿತು. ಹಿಂದುಳಿದ ವರ್ಗಗಳ ಹರಿಕಾರ ಡಿ.ದೇವರಾಜ ಅರಸು ದಸಂಸಗೆ ಬೆಂಬಲ ಕೊಟ್ಟರು. ಹೋರಾಟಕ್ಕೆ ಚೈತನ್ಯ ತುಂಬಿದರು. ಅವರು ನೆಟ್ಟ ಬೀಜ ಇದೀಗ ಹೆಮ್ಮರವಾಗಿ ಬೆಳೆದಿದೆ. ದಲಿತರ ಅನೇಕ ಸಮಸ್ಯೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಪರಿಹರಿಸುತ್ತೇನೆ ಎಂದು ಭರವಸೆ ನೀಡಿದರು.
ಪರಿಶಿಷ್ಟ ಜಾತಿಗಳ 101 ಜಾತಿಗೆ ಒಳಮೀಸಲಾತಿ ಹಂಚಿಕೆಯಲ್ಲಿ ವ್ಯತ್ಯಾಸವನ್ನು ಸರಿಪಡಿಸುವಂತೆ ವಿವಿಧ ಸಂಘಟನೆಗಳು ಆಗ್ರಹಿಸುತ್ತಿದ್ದು, ಸರ್ಕಾರ ಸಹ ಈ ಕುರಿತು ಆದ್ಯತೆ ನೀಡಬೇಕು ಎಂದು ಹೇಳಿದರು.
ಒಳ ಮೀಸಲಾತಿ ಹೋರಾಟಕ್ಕೆ ನೂರು ವರ್ಷಗಳ ಚರಿತ್ರೆ ಇದೆ. ಕಳೆದ ಮೂರು ದಶಕಗಳಿಂದ ಹೋರಾಟ ತೀವ್ರತೆ ಪಡೆದುಕೊಂಡಿತು. ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬದ್ಧತೆಯಿಂದ ದಲಿತರ ಬೇಡಿಕೆ ಈಡೇರಿಸಿದರು.
ರಾಜ್ಯಾದ್ಯಂತ ಸಮೀಕ್ಷೆ ನಡೆಸಿ ಹೊಲಯ-ಮಾದಿಗರಿಗೆ ಶೇ.6ರಷ್ಟು ಹಂಚಿಕೆ ಮಾಡಲಾಗಿದೆ. ಉಳಿದ 98 ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಿದ್ದು, ಇದರಲ್ಲಿ ಉಂಟಾಗಿರುವ ವ್ಯತ್ಯಾಸವನ್ನು ಸರಿಪಡಿಸುವಂತೆ ಕೇಳಬೇಕಿದೆ ಎಂದು ತಿಳಿಸಿದರು.
ಚಿಕ್ಕಮಗಳೂರಿನ ಭವಾನಿ ಮಾತನಾಡಿ, ಶೋಷಿತ ಸಮುದಾಯದ ಹೆಣ್ಣು ಮಕ್ಕಳ ಮೇಲೆ ಏಕೆ ಅತ್ಯಾಚಾರಗಳು ಆಗುತ್ತವೆ? ಈ ಬಗ್ಗೆ ದಲಿತರು ಗಂಭೀರವಾಗಿ ಚಿಂತಿಸಬೇಕು. ಅನಕ್ಷರಸ್ಥರಾದರೆ ಅನ್ಯಾಯ, ದೌರ್ಜನ್ಯ ಮತ್ತು ತುಳಿತಕ್ಕೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ದಲಿತರು ತಮ್ಮ ಮಕ್ಕಳಿಗೆ ಊಟ ಇಲ್ಲದಿದ್ದರೂ ಪರವಾಗಿಲ್ಲ, ಉತ್ತಮ ವಿದ್ಯಾಭ್ಯಾಸ ನೀಡಬೇಕು. ಐಎಎಸ್, ಐಪಿಎಸ್ ಹುದ್ದೆ ಗಿಟ್ಟಿಸಿಕೊಳ್ಳುವಂತೆ ಉತ್ತೇಜನ ನೀಡಬೇಕು. ಅಂಬೇಡ್ಕರ್ ಅವರನ್ನು ಸ್ಫೂರ್ತಿಯಾಗಿ ಸ್ವೀಕರಿಸುವಂತೆ ತಿಳಿಸಬೇಕು ಎಂದರು.
ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ಪರಿಕಲ್ಪನೆ ವಿಷಯ ಕುರಿತು ಮಾತನಾಡಿದ ಮುಖಂಡ ರಾಜಶೇಖರ್ ಅವರು, ಹೊಲೆಯ-ಮಾದಿಗರು ಭಿನ್ನಾಭಿಪ್ರಾಯ ಬಿಟ್ಟು ಒಂದಾಗಬೇಕು. ಅಂಬೇಡ್ಕರ್ ಸಂವಿಧಾನ ಬರೆಯದಿದ್ದರೆ ನಾವು ಎಲ್ಲಿರುತ್ತಿದ್ದೆವು ಎಂಬುದರ ಕುರಿತು ಚಿಂತಿಸಬೇಕು. ಹಕ್ಕುಗಳಿಗಾಗಿ ಸಂಘಟಿತರಾಗಿ ಹೋರಾಟ ಮಾಡಲೇಬೇಕು ಎಂದರು.
ಪರಿಶಿಷ್ಟ ಜಾತಿಯ ಕೊನೆಯಲ್ಲಿರುವ ಜಾತಿಗಳ ಜನರಿಗೆ ಅವಕಾಶ ಸಿಗುತ್ತಿಲ್ಲ. ಒಳ ಮೀಸಲಾತಿ ಹಂಚಿಕೆಯೂ ಕೆಲವು ಜಾತಿಗಳಿಗೆ ಸೀಮಿತವಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುವಂತೆ ಸರ್ಕಾರವನ್ನು ಒತ್ತಾಯಿಸಬೇಕು ಎಂದು ತಿಳಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ವೆಂಕಟೇಶ್, ಮುಖಂಡರಾದ ನಿಂಗರಾಜ್ ಮಲ್ಲಾಡಿ, ನಂಜಪ್ಪ ಬಸವನಗುಡಿ, ತರೀಕೆರೆ ಎನ್.ವೆಂಕಟೇಶ್, ಆದಿ ನಾರಾಯಣಪ್ಪ, ವಿಜಯಪುರದ ತಮ್ಮಣ್ಣ ಕಾನಾಗಡ್ಡಿ, ಬೆಳಗಾವಿಯ ಬಿ.ಆರ್.ದೊಡ್ಡಮನಿ, ಶಿವಮೊಗ್ಗದ ಸಿ.ವಿಜಯಲಕ್ಷ್ಮೀ ಗೋಪಾಲ್, ಪ್ರವೀಣ್ ಕುಮಾರ್ ಇನ್ನಿತರರಿದ್ದರು.
ಹಕ್ಕುತ್ತೊಯಗಳು
ದಲಿತ ಸಂಘರ್ಷ ಸಮಿತಿಯ ಮುಖಂಡ ನಿಂಗರಾಜು ಮಲ್ಲಾಡಿ ಹಕ್ಕೊತ್ತಯಗಳನ್ನು ಮಂಡಿಸಿದರು.
ಒಳ ಮೀಸಲಾತಿ ಶೀಘ್ರವೇ ವೈಜ್ಞಾನಿಕವಾಗಿ ಜಾರಿಯಾಗಬೇಕು.
ಹಂದಿ ಜೋಗಿ, ಶಿಳ್ಳೆಕ್ಯಾತ, ಕೋಲೆ ಬಸವ, ಕೊರಮ, ಸುಡುಗಾಡು ಸಿದ್ದ, ಚೆನ್ನದಾಸ, ಬೈರ, ನಾಗ, ದೊಂಬರ ಜಾತಿಗಳು ಪರಿಶಿಷ್ಟ ಜಾತಿಗಳ ನಡುವೆ ಪೈಪೋಟಿ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಒಳ ಮೀಸಲಾತಿಯಲ್ಲಿ ಶೇ.2ರಷ್ಟು ಮೀಸಲಾತಿ ನೀಡಬೇಕು.