ಉಕ್ಕಲಗೆರೆಯಲ್ಲಿ ಚಿರತೆ ಸಂಚಾರ ಗ್ರಾಮಸ್ಥರಲ್ಲಿ ಆತಂಕ

ತಿ.ನರಸೀಪುರ ತಾಲೂಕಿನ ಉಕ್ಕಲೆಗೆರೆ ಗ್ರಾಮದಲ್ಲಿ ಬುಧವಾರ ತಡರಾತ್ರಿ ಕಾಣಿಸಿಕೊಂಡಿರುವ ಚಿರತೆ.
ತಿ.ನರಸೀಪುರ ತಾಲೂಕಿನ ಉಕ್ಕಲೆಗೆರೆ ಗ್ರಾಮದಲ್ಲಿ ಬುಧವಾರ ತಡರಾತ್ರಿ ಕಾಣಿಸಿಕೊಂಡಿರುವ ಚಿರತೆ.
Published on

ಪ್ರಮುಖ ಮುಖ್ಯಾಂಶಗಳು

  • Leopard

ತಿ.ನರಸೀಪುರ:

ತಾಲೂಕಿನ ಉಕ್ಕಲಗೆರೆ ಗ್ರಾಮದಲ್ಲಿ ಹಲವು ದಿನಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಗ್ರಾಮದಲ್ಲಿ ಕಳೆದ ಬುಧವಾರ ತಡರಾತ್ರಿ ಸುಮಾರು 1 ಗಂಟೆಯ ಸಮಯದಲ್ಲಿ ಡೇರಿ ಕಾರ್ಯದರ್ಶಿ ಶುಭಾಷ್ ಅವರ ಮನೆ ಮುಂಭಾಗ ನಾಯಿಗಳು ಬೊಗಳುತ್ತಿರುವ ಶಬ್ದ ಕೇಳಿ ಬಂದಿದೆ. ಕಿಟಕಿ ಬಾಗಿಲು ತೆರೆದು ನೋಡಿದಾಗ ಚಿರತೆ ಮನೆ ಮುಂಭಾಗ ಸಂಚರಿಸುತ್ತಿರುವುದು ಕಂಡು ಬಂದಿದೆ. ಕೂಡಲೇ ಚಿರತೆ ಓಡಾಟದ ದೃಶ್ಯವನ್ನು ಶುಭಾಷ್ ಅವರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ಮನೆ ಸಮೀಪವೇ ಚಿರತೆ ಸಂಚರಿಸುವುದರಿಂದ ಮನೆಯವರು ಹಾಗೂ ಸುತ್ತಮುತ್ತಲಿನ ನಿವಾಸಿಗಳು ಭಯಭೀತರಾಗಿದ್ದಾರೆ. ಒಂದು ತಿಂಗಳಿನಿಂದಲೂ ಗ್ರಾಮದಲ್ಲಿ ಚಿರತೆ ಸಂಚರಿಸುತ್ತಿದ್ದು, ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಗ್ರಾಮಸ್ಥರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಬೋನು ಇರಿಸಿ ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಸಂಬಂಧ ಗ್ರಾಮದ ಮುಖಂಡ ಬಸವಣ್ಣ ಅವರು ಮಾತನಾಡಿ, ಗ್ರಾಮದಲ್ಲಿ ಚಿರತೆ ಸಂಚರಿಸುತ್ತಿದೆ ಎಂಬ ಮಾಹಿತಿಯನ್ನು ಅರಣ್ಯ ಇಲಾಖೆಗೆ ನೀಡಲಾಗಿದೆ. ಅವರೂ ಗ್ರಾಮಕ್ಕೆ ಭೇಟಿ ನೀಡಿ ಚಿರತೆ ಚಲನವಲನದ ಬಗ್ಗೆ ಪರಿಶೀಲಿಸುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ ಚಿರತೆ ಸೆರೆಯಾಗದೇ ಇರುವುದು ನಮ್ಮ ಆತಂಕವನ್ನು ಹೆಚ್ಚಿಸಿದೆ ಎಂದು ತಿಳಿಸಿದ್ದಾರೆ.
ವಲಯ ಅರಣ್ಯಾಧಿಕಾರಿ ಎಚ್.ಉಮೇಶ್ ಮಾತನಾಡಿ, ಉಕ್ಕಲಗೆರೆ ಗ್ರಾಮದಲ್ಲಿ ಕಾಣಿಸಿಕೊಂಡಿರುವ ಚಿರತೆಯನ್ನು ಸೆರೆ ಹಿಡಿಯಲು ಈಗಾಗಲೇ ಅರಣ್ಯ ಇಲಾಖೆಯಿಂದ ಒಂದು ಬೋನು ಇರಿಸಲಾಗಿದೆ. ಅಲ್ಲದೆ ಚಿರತೆಯ ಚಲನವಲನ ಮೇಲೆಯೂ ನಿಗಾ ವಹಿಸಿದ್ದೇವೆ. ಚಿರತೆಯ ಸಂಚಾರ ತೀವ್ರಗೊಂಡಲ್ಲಿ ಮತ್ತೊಂದು ದೊಡ್ಡ ಬೋನು ಇರಿಸಿ, ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net