ಮನೆಗೆ ನುಗ್ಗಿದ ಚಿರತೆ: ಭಯ ಓಡಿಸಿದ ಬದುಕಿನ ಆಸೆ

ಮನೆಗೆ ನುಗ್ಗಿದ ಚಿರತೆ
ಮನೆಗೆ ನುಗ್ಗಿದ ಚಿರತೆ
Published on

ಪ್ರಮುಖ ಮುಖ್ಯಾಂಶಗಳು

  • ಚಿರತೆ ನುಗ್ಗಿದ ಮನೆ ಒಡತಿಯ ವಿವರಣೆ
  • ಧೈರ್ಯದಿಂದ ಅತ್ತೆ ರಕ್ಷಿಸಿದ ಸೊಸೆ
ಮೈಸೂರು: ನನಗೆ ಭಯ ಆಗಲಿಲ್ಲ. ಬದುಕಬೇಕಲ್ಲ ಎಂದು ಅತ್ತೆಯನ್ನು ಧೈರ್ಯದಿಂದ ಹೊರಗೆ ಕರೆದುಕೊಂಡು ಬಂದುಬಿಟ್ಟೆ...! 
ಇದು ಚಿರತೆ ನುಗ್ಗಿದ ಮನೆಯ ಮಾಲೀಕರಾದ ಸುಜಾತಾ ಸುರೇಶ್ ನುಡಿ. 
ಸಿದ್ಧಾರ್ಥನಗರದಲ್ಲಿ ತಮ್ಮ ಮನೆಗೆ ಚಿರತೆ ನುಗ್ಗಿರುವ ಘಟನೆಯನ್ನು ವಿವರಿಸಿದ ಅವರು, ‘ಮನೆಯ ಮುಂಬಾಗಿಲನ್ನು ಯಾವಾಗಲೂ ಬಂದ್ ಮಾಡಿರುತ್ತೇವೆ. ಶುಕ್ರವಾರ ಬೆಳಗ್ಗೆ 5 ನಿಮಿಷವಷ್ಟೇ ಬಾಗಿಲು ತೆರೆಯಲಾಗಿತ್ತು. ಆದರೆ ಚಿರತೆ ಮನೆಯೊಳಗೆ ಬಂದಿರುವುದು ನಮಗೆ ಗೊತ್ತಿರಲಿಲ್ಲ. ಮನೆ ಕೆಲಸದವರು ಕಸ ಗುಡಿಸಲು ಅತ್ತೆ ಶೈಲಜಾ ಅವರು ಮಲಗಿದ್ದ ಕೊಠಡಿಗೆ ಹೋದಾಗ ಚಿರತೆಯನ್ನು ನೋಡಿ, ಮಂಚದ ಕೆಳಗೆ ಅದೇನೋ ಮಲಗಿದೆ ಎಂದು ನನಗೆ ಹೇಳಿದರು. ನಾನು ಬಂದು ನೋಡಿದಾಗ ಚಿರತೆ ಕಣ್ಣು ಮುಚ್ಚಿ ಕುಳಿತಿತ್ತು’ ಎಂದು ಹೇಳಿದರು.
‘ನಾನು ಗೊಂಬೆ ಇರಬಹುದು ಎಂದು ಭಾವಿಸಿ ಮತ್ತೊಮ್ಮೆ ನೋಡಿದಾಗ ಅದು ಚಿರತೆ ಎಂದು ಗೊತ್ತಾಯಿತು. ಕೂಡಲೇ ಮಂಚದ ಮೇಲಿದ್ದ ಅತ್ತೆಯನ್ನೆ ಎತ್ತಿಕೊಂಡು ರೂಂನಿಂದ ಹೊರಗೆ ಕರೆದುಕೊಂಡು ಬಂದೆ. ಆದರೂ ಮತ್ತೊಮ್ಮೆ ಬಾಗಿಲ ಬಳಿ ನಿಂತುಕೊಂಡು ಮಂಚದ ಕೆಳಗೆ ನೋಡಿದಾಗ ಚಿರತೆ ತಲೆ ಅಲುಗಾಡಿಸಿತು. ಇದರಿಂದ ನಾನು ಬಾಗಿಲು ಹಾಕಿಕೊಂಡೆ. ಅಷ್ಟರಲ್ಲಾಗಲೇ ನಮ್ಮ ಯಜಮಾನರು ಬಂದರು. ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದರು’ ಎಂದು ತಿಳಿಸಿದರು.
‘ಅರಣ್ಯ ಸಿಬ್ಬಂದಿ ಚಿರತೆ ಎಂದರೆ ನಂಬಲಿಲ್ಲ. ಪುನಗು ಬೆಕ್ಕು ಇರಬಹುದು ಎಂದು ಅಭಿಪ್ರಾಯಪಟ್ಟರು. ಆದರೆ ನಾನು ಚಿರತೆ ಎಂದೇ ದೃಢವಾಗಿ ಹೇಳಿದೆ. ಕಿಟಕಿಯಿಂದ ಕಡ್ಡಿಗೆ ಮೊಬೈಲ್ ಕಟ್ಟಿ ವಿಡಿಯೋ ಮಾಡಿಕೊಂಡ ನಂತರ ಅವರಿಗೆ ಚಿರತೆ ಇರುವಿಕೆ ಮನವರಿಕೆಯಾಯಿತು’ ಎಂದು ಸುಜಾತಾ ಹೇಳಿದರು.
ಸುಜಾತಾ ಅತ್ತೆ ವೃದ್ಧೆ ಶೈಲಜಾ ಮಾತನಾಡಿ, ‘ರೂಂಗೆ ಚಿರತೆ ಬಂದಿರುವುದು ನನಗೆ ಗೊತ್ತಾಗಲಿಲ್ಲ. ಸೊಸೆ ನನ್ನನ್ನು ತಪ್ಪಿಕೊಂಡು ಹೊರಗೆ ಕರೆದುಕೊಂಡು ಬಂದಾಗವಷ್ಟೇ ಮಂಚದ ಕೆಳಗೆ ಚಿರತೆ ಇರುವುದಾಗಿ ಹೇಳಿದರು. ನನಗೆ ಭಯವೂ ಆಗಲಿಲ್ಲ. ಗಾಬರಿಯೂ ಆಗಲಿಲ್ಲ. ಜತೆಯಲ್ಲಿ ಮಗ, ಸೊಸೆ ಇದ್ದುದ್ದರಿಂದ ಧೈರ್ಯ ಇತ್ತು. 35 ವರ್ಷದಿಂದ ಇಲ್ಲಿ ವಾಸಿಸುತ್ತಿದ್ದು, ಒಮ್ಮೆಯೂ ಚಿರತೆ ನೋಡಿರಲಿಲ್ಲ’ ಎಂದು ಹೇಳಿದರು.

ಬೆಳಗ್ಗೆ 6ಕ್ಕೆ ಮಾಹಿತಿ, ಪತ್ತೆಯಾಗಿದ್ದು 11.30ಕ್ಕೆ

ಸಿದ್ಧಾರ್ಥನಗರದಲ್ಲಿ ಬೆಳಗ್ಗೆ 6ಕ್ಕೆ ಚಿರತೆ ನೋಡಿರುವುದಾಗಿ ಸ್ಥಳೀಯರು ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಚಿರತೆ ಕಾರ್ಯಪಡೆ ಸಿಬ್ಬಂದಿ ಪರಿಶೀಲಿಸಿದರೂ ಎಲ್ಲಿಯೂ ಚಿರತೆ ಹೆಜ್ಜೆ ಗುರುತಾಗಲಿ, ಸಿಸಿ ಕ್ಯಾಮರಾದಲ್ಲಿ ಸೆರೆ ಸಿಕ್ಕಿರುವ ದೃಶ್ಯವಾಗಲಿ ಪತ್ತೆಯಾಗಿರಲಿಲ್ಲ. ಇದರಿಂದ ಪುನುಗು ಬೆಕ್ಕು ನೋಡಿರಬಹುದು ಎಂದು ತಿಳಿದು ಕಾರ್ಯಾಚರಣೆ ಸ್ಥಗಿತಗೊಳಿಸಿ ವಾಪಸಾಗಿದ್ದರು. ಆದರೆ ಮತ್ತೆ ಬೆಳಗ್ಗೆ 11.30ಕ್ಕೆ ಚಿರತೆ ಮನೆ ಹೊಕ್ಕಿರುವ ಮಾಹಿತಿ ಬಂದ ಬಳಿಕವೇ ಸ್ಥಳಕ್ಕೆ ಆಗಮಿಸಿದರು.

 ಕೋತಿಗಳ ಕಿರುಚಾಟ:

ಬೆಳಗ್ಗೆಯೇ ಅರಣ್ಯ ವ್ಯಾಪ್ತಿಯಿಂದ ಚಿರತೆ ಸಿದ್ಧಾರ್ಥನಗರಕ್ಕೆ ಬಂದಿದೆ. ವಾಹನ, ಜನ ಸಂಚಾರ ಹೆಚ್ಚಾದ ಹಿನ್ನೆಲೆಯಲ್ಲಿ ಗಾಬರಿಗೊಂಡ ಚಿರತೆ ಎಲ್ಲೋ ಅವಿತುಕೊಂಡಿದೆ. ಆದರೂ ಜಾಗ ಬದಲಿಸುವ ವೇಳೆ ಮನೆಗಳ ತಾರಸಿ ಮೇಲೆ ರಕ್ಷಣೆ ಪಡೆದುಕೊಂಡಿದೆ. ತಾರಸಿ ಮೇಲೆ ಚಿರತೆ ಓಡಾಟ ಗಮನಿಸಿದ ಕೋತಿಗಳು ಬೆಳಗಿನಿಂದಲೇ ಕಿರುಚಾಡತೊಡಗಿವೆ. ಆದರೆ ಆ ಸೂಕ್ಷ್ಮತೆ ಯಾರ ಗಮನಕ್ಕೂ ಬಂದಿಲ್ಲ. ಚಿರತೆ ಮನೆ ಪ್ರವೇಶಿಸುವ ಸಂದರ್ಭದಲ್ಲೂ ಅಕ್ಕಪಕ್ಕದ ಮನೆ ಬಳಿ ಕೋತಿಗಳು ಚೀರಾಡುತ್ತಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ.

ಚಾ.ಬೆಟ್ಟದಿಂದ ಬಂದ ಚಿರತೆ

‘ಚಾಮುಂಡಿಬೆಟ್ಟದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಾಗಿದ್ದು, ತಾವರೆಕಟ್ಟೆ, ಲಲಿತಾದ್ರಿಪುರದ ರಸ್ತೆ ಭಾಗದಲ್ಲಿ ಮೇಲಿಂದ ಮೇಲೆ ಚಿರತೆ ಕಾಣಿಸಿಕೊಳ್ಳುತ್ತಿವೆ. ಬೆಟ್ಟದ ತಪ್ಪಲಿನ ಕೆಲ ಫಾರ್ಮ್, ತೋಟಗಳಲ್ಲಿ ರಾತ್ರಿ ವೇಳೆ ಚಿರತೆ ನೀರು ಕುಡಿದು, ಬೀದಿ ನಾಯಿಗಳನ್ನು ಎಳೆದೊಯ್ಯುತ್ತಿರುವ ದೃಶ್ಯಗಳು ಕೆಲವೆಡೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದವು. ಅಲ್ಲಿದ್ದ ಚಿರತೆಯೇ ದಾರಿ ತಪ್ಪಿ, ಸಿದ್ಧಾರ್ಥನಗರಕ್ಕೆ ಬಂದಿರಬಹುದು’ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಬಂದ ನಿದರ್ಶನ ಇಲ್ಲ:

ಈ ಬಡಾವಣೆಯಲ್ಲಿ ಯಾವುದೇ ಖಾಲಿ ನಿವೇಶನವಿಲ್ಲ. ದಟ್ಟ ಪೊದೆಗಳಿಲ್ಲ. ಚಿರತೆ ಆವಾಸಕ್ಕೆ ಬೇಕಾದ ಯಾವುದೇ ಪೂರಕ ವಾತಾವರಣವೂ ಇಲ್ಲ. ಆ ಕಾರಣದಿಂದ ಈ ವರೆಗೂ ಚಿರತೆ ಹಾವಳಿ ಈ ಭಾಗದಲ್ಲಿ ಕಂಡು ಬಂದಿರಲಿಲ್ಲ. ಆದರೆ 18 ವರ್ಷದ ಹಿಂದೆ ಜಾಕಿ ಕ್ವಾಟ್ರರ್ಸ್‌ನಲ್ಲಿ ಚಿರತೆಯೊಂದು ಪತ್ತೆಯಾಗಿತ್ತು. ಸೆರೆ ಹಿಡಿಯಲು ಹೋದ ಸಿಬ್ಬಂದಿ ಹಾಗೂ ಛಾಯಾಗ್ರಾಹಕರೊಬ್ಬರ ಮೇಲೆ ದಾಳಿ ನಡೆಸಿ ಗಾಯಗೊಳಿಸಿತ್ತು. ಆ ಪ್ರಕರಣ ಹೊರತುಪಡಿಸಿದರೆ ಈ ಭಾಗದಲ್ಲಿ ಚಿರತೆ ಉಪಟಳ ಕಂಡು ಬಂದಿರಲಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net