ಶಾರದಾ ವಿಲಾಸ ಕಾನೂನು ಕಾಲೇಜಿನ ಹಿರಿಯ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮ
ಮೈಸೂರು: ಪ್ರತಿಯೊಬ್ಬ ನ್ಯಾಯವಾದಿ ವೃತ್ತಿಧರ್ಮ ಅನುಸರಿಸುವ ಮೂಲಕ ವಕೀಲ ವೃತ್ತಿಯ ಘನತೆ, ಗೌರವ ಎತ್ತಿಹಿಡಿಯಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಇ.ಎಸ್.ಇಂದ್ರೇಶ್ ಹೇಳಿದರು.
ನಗರದ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಶುಕ್ರವಾರ ಶಾರದಾ ವಿಲಾಸ ಕಾನೂನು ಕಾಲೇಜಿನ ಹಿರಿಯ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಕೀಲರು ಮೊದಲು ತಮ್ಮ ವೃತ್ತಿಗೆ ಗೌರವ ಕೊಡಬೇಕು. ಆಗ ಸಮಾಜವೇ ಇಡೀ ವಕೀಲರಿಗೆ ಗೌರವ ಕೊಡುತ್ತದೆ. ಜತೆಗೆ, ವೃತ್ತಿ ಧರ್ಮ ಪಾಲನೆ ಮಾಡಿದರೆ, ಅದು ನಮ್ಮ ರಕ್ಷಣೆಗೆ ಬರುತ್ತದೆ. ಇದರಿಂದ ಸಮಾಜ ಮತ್ತು ಜನರಿಗೂ ಅನುಕೂಲವಾಗುತ್ತದೆ ಎಂದರು.
ನ್ಯಾಯಾಧೀಶರು ಜವಾಬ್ದಾರಿ ಹಾಗೂ ಎಚ್ಚರಿಕೆಯಿಂದ ಸಂವಿಧಾನ ಬದ್ಧವಾಗಿ ತೀರ್ಪು ಪ್ರಕಟಿಸಬೇಕು. ಇದರಲ್ಲಿ ಸ್ವಲ್ಪ ಲೋಪವಾದರೂ ಸಂತ್ರಸ್ತ ಕುಟುಂಬಕ್ಕೆ ದೊಡ್ಡ ನಷ್ಟವಾಗುತ್ತದೆ. ಸಮಾಜದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದ್ದರಿಂದ ನ್ಯಾಯಾಲಯದ ಆದೇಶಕ್ಕೆ ಹೆಚ್ಚಿನ ಮಹತ್ವ ಇರುತ್ತದೆ ಎಂದರು.
ಸಮಾಜದಲ್ಲಿ ಒಳ್ಳೆಯವರು, ಕೆಟ್ಟವರು ಇರುತ್ತಾರೆ. ಆದರೆ, ಒಳ್ಳೆಯತನ ರೂಢಿಸಿಕೊಳ್ಳಬೇಕು. ಮಾನವೀಯ ಗುಣ ಅಳವಡಿಸಿಕೊಳ್ಳಬೇಕು. ಜ್ಞಾನವನ್ನು ಸಮಾಜಕ್ಕೆ ಧಾರೆ ಎರೆಯಬೇಕು ಎಂದರು
ಎಐ ಸೇರಿದಂತೆ ವಿವಿಧ ತಂತ್ರಜ್ಞಾನಗಳಿಗೆ ಅವಲಂಬಿತವಾಗಬಾರದು. ಸ್ವಯಂ ಅಧ್ಯಯನ, ಶೋಧ ಮತ್ತು ಸಂಶೋಧನೆ ಕೈಗೊಳ್ಳಬೇಕು. ಆಗಲೇ ಪರಿಪೂರ್ಣ ಜ್ಞಾನ ದೊರೆಯಲು ಸಾಧ್ಯ ಎಂದು ಹೇಳಿದರು.
ನ್ಯಾಯಮೂರ್ತಿ ಇ.ಎಸ್.ಇಂದ್ರೇಶ್, ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಹಾಗೂ ಲಾ ಗೈಡ್ ಕನ್ನಡ ಕಾನೂನು ಮಾಸ ಪತ್ರಿಕೆಯ ಎಚ್.ಎನ್.ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು.
ಲಾ ಗೈಡ್‌ನ ಎಚ್.ಎನ್.ವೆಂಕಟೇಶ್ ಅವರು ತಾವು ವ್ಯಾಸಂಗ ಮಾಡಿದ ಶಾರದಾ ವಿಲಾಸ ಕಾನೂನು ಕಾಲೇಜಿಗೆ ಒಂದು ಲಕ್ಷ ರೂ. ದತ್ತಿ ಬಹುಮಾನ ಘೋಷಿಸಿದರು. ಶಾರದಾ ವಿಲಾಸ ಶಿಕ್ಷಣ ಸಂಸ್ಥೆಯ ಹಿರಿಯ ಆಡಳಿತ ಮಂಡಳಿ ಸದಸ್ಯ ಎಸ್.ಎಲ್.ರಾಮಚಂದ್ರ, ಗೌರವ ಕಾರ್ಯದರ್ಶಿ ಆರ್.ದಿನೇಶ್, ಮಹೇಶ್, ಡಾ.ದೇವಿಕಾ ಇತರರಿದ್ದರು.