ನನೆಗುದಿಗೆ ಬಿದ್ದಿದ್ದ ರಾಜಕಾಲುವೆ ಅಭಿವೃದ್ಧಿಗೆ ಚಾಲನೆ

ಪಿರಿಯಾಪಟ್ಟಣದ ಬೆಟ್ಟದಪುರ ರಸ್ತೆಯಿಂದ ಅರಸನಕೆರೆವರೆಗಿನ ರಾಜಕಾಲುವೆ ಅಭಿವೃದ್ಧಿ ಕಾಮಗಾರಿ ಆರಂಭವಾಗಿರುವುದು.
ಪಿರಿಯಾಪಟ್ಟಣದ ಬೆಟ್ಟದಪುರ ರಸ್ತೆಯಿಂದ ಅರಸನಕೆರೆವರೆಗಿನ ರಾಜಕಾಲುವೆ ಅಭಿವೃದ್ಧಿ ಕಾಮಗಾರಿ ಆರಂಭವಾಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ನನೆಗುದಿಗೆ ಬಿದ್ದಿದ್ದ
  • ರಾಜಕಾಲುವೆ ಅಭಿವೃದ್ಧಿ ಕಾಮಗಾರಿ
ಪಿರಿಯಾಪಟ್ಟಣ: ಹಲವು ದಿನಗಳಿಂದ ನನೆಗುದಿಗೆ ಬಿದ್ದಿದ್ದ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗೆ ಪುರಸಭೆ ಮುಖ್ಯಾಧಿಕಾರಿ ಎಚ್.ಪಿ.ಮಧು ಮರುಚಾಲನೆ ನೀಡಿದರು.
ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿನ ಬೆಟ್ಟದಪುರ ರಸ್ತೆಯಿಂದ ಅರಸನಕೆರೆವರೆಗಿನ ರಾಜಕಾಲುವೆ ಅಭಿವೃದ್ಧಿ ಕಾಮಗಾರಿ ಆರಂಭವಾಗಿದೆ.
ಹಾಲಿ ಇರುವ ರಾಜಕಾಲುವೆ ಬಹುತೇಕ ಮಣ್ಣಿನಿಂದ ಮುಚ್ಚಿ ಹೋಗಿದ್ದು ಮಳೆಗಾಲದಲ್ಲಿ ಕಾಲುವೆ ಪಕ್ಕದಲ್ಲಿರುವ ಕೆಲವು ಬಡಾವಣೆಗಳಿಗೆ ನೀರು ನುಗ್ಗಿ ತೊಂದರೆಯಾಗುತ್ತಿತ್ತು. ಕೆಲವೊಮ್ಮೆ ಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಾಗಿ ಬೆಟ್ಟದಪುರ ಮುಖ್ಯರಸ್ತೆ ಜಲಾವೃತವಾಗುವುದರ ಜತೆಗೆ ಮುಖ್ಯ ರಸ್ತೆಯ ಅಕ್ಕಪಕ್ಕದ ವಾಣಿಜ್ಯ ಮಳಿಗೆಗಳ ವ್ಯಾಪಾರಸ್ಥರು ತೊಂದರೆ ಅನುಭವಿಸುವಂತಾಗಿತ್ತು. ಈ ಬಗ್ಗೆ ಸಾರ್ವಜನಿಕರು ಸಚಿವ ಕೆ.ವೆಂಕಟೇಶ್ ಅವರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ರಾಜ್ಯ ವಿಪತ್ತು ಉಪಶಮನ ನಿಧಿಯಿಂದ ಒಂದು ಕೋಟಿ ರೂ. ವಿಶೇಷ ಅನುದಾನವನ್ನು ಸಚಿವ ವೆಂಕಟೇಶ್ ಬಿಡುಗಡೆಗೊಳಿಸಿ ಪುರಸಭೆ ಮೂಲಕ ಟೆಂಡರ್ ಮಾಡಿಸಿ ಕೆಲಸ ಆರಂಭಿಸಿದ್ದಾರೆ.
ಪಟ್ಟಣದ ಸಂತೆಪೇಟೆಯಲ್ಲಿರುವ ವಾಸವಿ ಪ್ಯಾಲೇಸ್ ಹಿಂಭಾಗದಿಂದ ರಾಜಕಾಲುವೆ ಮುಂದುವರಿದ ಅಭಿವೃದ್ಧಿ ಕಾಮಗಾರಿ ಆರಂಭಿಸಲಾಗಿತ್ತು. ಬೆಟ್ಟದಪುರ ರಸ್ತೆ ದಾಟಿ ಮುಂದೆ ಹೋಗುತ್ತಿದ್ದಂತೆ ರಾಜಕಾಲುವೆಯ ಅಕ್ಕಪಕ್ಕದ ಜಮೀನು ಮತ್ತು ನಿವೇಶನದಾರರು ಕಾಮಗಾರಿಗೆ ಆಕ್ಷೇಪವ್ಯಕ್ತಪಡಿಸಿ ಕಾಮಗಾರಿ ನಡೆಸದಂತೆ ಸ್ಥಗಿತಗೊಳಿಸಿದ್ದರು. ಬೆಟ್ಟದಪುರ ರಸ್ತೆಗೆ ಹೊಂದಿಕೊಂಡಂತಿರುವ ಕೆಲವು ನಿವೇಶನದಾರರು ನ್ಯಾಯಾಲಯದ ಮೊರೆ ಹೋಗಿದ್ದರು. ಇದರಿಂದಾಗಿ ನನೆಗುದಿಗೆ ಬಿದ್ದ ರಾಜಕಾಲುವೆ ಕಾಮಗಾರಿ ಮರು ಆರಂಭ ಯಾವಾಗ ಎಂಬುದು ಎಲ್ಲರ ಪ್ರಶ್ನೆಯಾಗಿತ್ತು. ಪುರಸಭೆಯಲ್ಲಿ ಮುಖ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಎಚ್.ಪಿ.ಮಧು ಸರ್ವೇ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳ ನೇತೃತ್ವದಲ್ಲಿ ಮಾತುಕತೆ ನಡೆಸಿ ಕಾಮಗಾರಿ ಆರಂಭಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ರಾಜಕಾಲುವೆ ನಿರ್ಮಾಣಕ್ಕೆ ಸಚಿವರು ವಿಶೇಷ ಅನುದಾನ ತಂದಿದ್ದಾರೆ. ಇದು ಸದ್ಬಳಕೆಯಾಗಬೇಕು. ಸಾರ್ವಜನಿಕ ಹಿತಾಸಕ್ತಿಯ ಕೆಲಸ ನಡೆಯುವಾಗ ಸ್ವಹಿತಾಸಕ್ತಿಗಾಗಿ ಅಡಚಣೆ ಮಾಡಬಾರದು. ಸರ್ವೇ ಇಲಾಖೆ ಅಧಿಕಾರಿಗಳು ಸ್ಥಳ ಗುರುತಿಸಿರುವಂತೆ ಆ ಸ್ಥಳದಲ್ಲಿಯೇ ಕಾಲುವೆ ಕೆಲಸ ಆರಂಭಿಸಲಾಗಿದ್ದು, ಎಲ್ಲರೂ ಇದಕ್ಕೆ ಸಹಕಾರ ನೀಡಬೇಕು.
ಎಚ್.ಪಿ.ಮಧು ಪುರಸಭೆ ಮುಖ್ಯಾಧಿಕಾರಿ, ಪಿರಿಯಾಪಟ್ಟಣ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net