ಮಳೆ ಕೊರತೆ: ಪರ್ಯಾಯ ಬೆಳೆ ಪದ್ಧತಿ ಅನುಸರಿಸಿರಿ

ಕೃಷಿ
ಕೃಷಿ
Published on

ಪ್ರಮುಖ ಮುಖ್ಯಾಂಶಗಳು

  • ರೈತರಿಗೆ ಹಿರಿಯ ವಿಜ್ಞಾನಿ ಡಾ.ಬಿ.ಎನ್.ಜ್ಞಾನೇಶ್ ಸಲಹೆ
ಮೈಸೂರು: ಮಳೆ ಕೊರತೆ ಹಿನ್ನೆಲೆಯಲ್ಲಿ ಪರ್ಯಾಯ ಬೆಳೆ ಪದ್ಧತಿ ಹಾಗೂ ಸೂಕ್ತ ಬೇಸಾಯ ಕ್ರಮ ಅನುಸರಿಸಲು ಸುತ್ತೂರಿನ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ ರೈತರಿಗೆ ಸಲಹೆ ನೀಡಿದೆ.
ವಾಡಿಕೆಯಂತೆ  ಜಿಲ್ಲೆಯಲ್ಲಿ ಜೂನ್-ಜುಲೈ ತಿಂಗಳಲ್ಲಿ ಮಳೆಯ ಆಗಮನವಾಗುತ್ತಿತ್ತು. ಪ್ರಸಕ್ತ ಸಮಯದಲ್ಲಿ ಮಳೆಯು ಬಾರದ ಕಾರಣ ಬರದ ವಾತಾವರಣ ಸೃಷ್ಟಿಯಾಗಿದೆ. 
ಇಂತಹ ಪರಿಸ್ಥಿತಿಯಲ್ಲಿ ರೈತರು ಬೆಳೆ ಪರಿವರ್ತನೆ, ಮಣ್ಣು ಮತ್ತು ನೀರು ಸಂರಕ್ಷಣೆ ಕ್ರಮ, ರಕ್ಷಣಾತ್ಮಕ ನೀರಾವರಿ ಅಳವಡಿಸಿಕೊಳ್ಳುವುದು ಮುಂತಾದ ಕ್ರಮ ಅನುಸರಿಸುವುದು ಅವಶ್ಯವಾಗಿದೆ ಎಂದು ಕೇಂದ್ರ ಮುಖ್ಯಸ್ಥ, ಹಿರಿಯ ವಿಜ್ಞಾನಿ ಡಾ.ಬಿ.ಎನ್.ಜ್ಞಾನೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಳೆಯಾಶ್ರಿತ ಪ್ರದೇಶದಲ್ಲಿ ಈಗಾಗಲೇ ಬಿತ್ತನೆ ಮಾಡಿರುವ ಮುಸುಕಿನ ಜೋಳ, ರಾಗಿ, ಅವರೆ, ಹರಳು, ತೊಗರಿ, ಹತ್ತಿ, ನೆಲಗಡಲೆ ಇತ್ಯಾದಿ ಬೆಳೆಗಳಿಗೆ ತುಂತುರು ನೀರಾವರಿ ಪದ್ಧತಿಯಿಂದ ರಕ್ಷಣಾತ್ಮಕ ನೀರಾವರಿಯನ್ನು ಅನುಸರಿಸಬೇಕಾಗುತ್ತದೆ. ಮುಸುಕಿನ ಜೋಳ ಬೆಳೆಯ ಗಿಡಗಳ ಸಂಖ್ಯೆಯನ್ನು ವಿರಳಗೊಳಿಸುವುದು, ಪೋಷಕಾಂಶಗಳ ಸಿಂಪಡಣೆಯ ಮೂಲಕ ಹಾಗೂ ನೀರಿನಲ್ಲಿ ಕರಗುವ ಗೊಬ್ಬರವನ್ನು ಗಿಡಗಳಿಗೆ ನೀಡುವುದು ಸೂಕ್ತ ಎಂದೂ ಸಲಹೆ ನೀಡಿದ್ದಾರೆ.
ಜಮೀನು ಉಳುಮೆ ಮಾಡಿ, ಭೂಮಿ ಸಿದ್ಧತೆ ಮಾಡಿಕೊಂಡು ಮಳೆ ಬಂದ ತಕ್ಷಣ ಅಲ್ಪಾವಧಿ ಬೆಳೆಗಳಾದ ಹೆಸರು, ಉದ್ದು, ಅಲಸಂದೆ, ಹುರಳಿ, ರಾಗಿ ಹಾಗೂ ಸಿರಿಧಾನ್ಯ ಬೆಳೆಯಬಹುದಾಗಿದೆ.
ಒಣ ಬೇಸಾಯದ ಪ್ರದೇಶದಲ್ಲಿ ಪೂರ್ಣ ಮಳೆಯಾಶ್ರದಲ್ಲಿ ಬೆಳೆಗಳನ್ನು ಬೆಳೆಯುವುದರಿಂದ ಮೇವಿನ ಬೆಳೆಗಳಿಗೆ ಹೆಚ್ಚಿನ ಆದ್ಯತೆ ನೀಡಿ, ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಹೆಚ್ಚಿನ ಗಮನ ಹರಿಸಬೇಕು. ಮಳೆಯಾದ ಸಂದರ್ಭದಲ್ಲಿ ರಾಗಿ, ಹುರಳಿ, ಅಲಸಂದೆ, ಮೇವಿನ ಜೋಳ ಬಿತ್ತನೆ ಮಾಡಬೇಕು ಎಂದು ತಿಳಿಸಿದ್ದಾರೆ.
ಬಿತ್ತನೆ ಬೀಜವನ್ನು ಕ್ಯಾಲಿಯಂ ಕ್ಲೊರೈಡ್ ಶೇ.2 ದ್ರಾವಣದೊಂದಿಗೆ ಉಪಚರಿಸಿ ಬಿತ್ತುವುದರಿಂದ ಬರ ನಿರೋಧಕ ಶಕ್ತಿ ಬೆಳೆಗಳಿಗೆ ಬರುತ್ತದೆ. ಇಳಿಜಾರಿಗೆ ಅಡ್ಡಲಾಗಿ ಎಡೆಕುಂಟೆ ಮೂಲಕ ಬಿತ್ತನೆ ಮಾಡಬೇಕು. ಕಪ್ಪು-ಜೇಡಿಮಣ್ಣಿನಂತ ಜಮೀನಿನಲ್ಲಿ ಚೌಕಾಕಾರದ ಗುಂಡಿಗಳನ್ನು ನಿರ್ಮಿಸುವ ಮೂಲಕ ಹೆಚ್ಚು ದಿನಗಳ ಕಾಲ ನೀರನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡಬಹುದು. 
ಹಿಂಗಾರು ಬೆಳೆಗಳಾದ ಜೋಳ, ಹುರಳಿ ಅಥವಾ ಹಸಿಕಡಲೆ ಬಿತ್ತನೆ ಇದರಿಂದ ಅನುಕೂಲವಾಗುತ್ತದೆ. ಕೆಂಪು ಮರಳಿನಂತಹ ಜಮೀನಿನಲ್ಲಿ ಇಂಗು ಗುಂಡಿಗಳನ್ನು ತೆಗೆಯುವುದರಿಂದ ಅಂತರ್ಜಲದ ಮಟ್ಟವನ್ನು ಹೆಚ್ಚಿಸಿ, ಬೋರ್‌ವೆಲ್ ಅನ್ನು ಮರುಪೂರ್ಣ ಸಹ ಮಾಡಬಹುದಾಗಿದೆ ಎಂದು ಮಾರ್ಗದರ್ಶನ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net