ಕುವೆಂಪು ಕನ್ನಡದ ಅಸ್ಮಿತೆ

ಹುಣಸೂರು ತಾಲೂಕು ಕಟ್ಟೆಮಳಲವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕುವೆಂಪು ಜಯಂತಿ ಸಮಾರಂಭದಲ್ಲಿ ಕ್ರೀಡೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬಿಇಒ ಎಸ್.ಪಿ.ಮಹದೇವ, ಕಸಾಪ ಅಧ್ಯಕ್ಷ ಎಚ್.ಮಹದೇವ್, ಜಗದೀಶ್, ವಾಸುಕಿ, ಯೋಗೀಶ್, ನಾಗವೇಣಿ, ಪದ್ಮಾ ಇತರರಿದ್ದಾರೆ.
ಹುಣಸೂರು ತಾಲೂಕು ಕಟ್ಟೆಮಳಲವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕುವೆಂಪು ಜಯಂತಿ ಸಮಾರಂಭದಲ್ಲಿ ಕ್ರೀಡೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬಿಇಒ ಎಸ್.ಪಿ.ಮಹದೇವ, ಕಸಾಪ ಅಧ್ಯಕ್ಷ ಎಚ್.ಮಹದೇವ್, ಜಗದೀಶ್, ವಾಸುಕಿ, ಯೋಗೀಶ್, ನಾಗವೇಣಿ, ಪದ್ಮಾ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಕಸಾಪ ತಾಲೂಕು ಅಧ್ಯಕ್ಷ ಹರವೆ ಮಹದೇವ್ ಅಭಿಪ್ರಾಯ
  • ಕುವೆಂಪುರ ಮೌಲ್ಯಯುತ ಜೀವನಾದರ್ಶಗಳು ವಿದ್ಯಾರ್ಥಿಗಳ ಬದುಕಿನ ದಾರಿದೀಪ
ಹುಣಸೂರು: ಕುವೆಂಪು ಕನ್ನಡದ ಅಸ್ಮಿತೆಯಾಗಿದ್ದು, ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಕುವೆಂಪುರ ಮೌಲ್ಯಯುತ ಜೀವನಾದರ್ಶಗಳು ವಿದ್ಯಾರ್ಥಿಗಳ ಬದುಕಿನ ದಾರಿದೀಪವಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್(ಕಸಾಪ)ತಾಲೂಕು ಅಧ್ಯಕ್ಷ ಹರವೆ ಮಹದೇವ್ ಅಭಿಪ್ರಾಯಪಟ್ಟರು.
ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕಶಾಲೆಯಲ್ಲಿ ಕಸಾಪ ಮತ್ತು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯಪರಿಷತ್ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಕುವೆಂಪು ಜಯಂತಿ ಸಮಾರಂಭದಲ್ಲಿ ಮಾತನಾಡಿದರು.
ಕುವೆಂಪು ಕೇವಲ ಸಾಹಿತ್ಯಲೋಕದ ದಿಗ್ಗಜ ಮಾತ್ರವಲ್ಲ, ಅವರ ಸರಳ, ಸ್ವಚ್ಛ ಮತ್ತು ನೇರನಡೆಯ ಬದುಕು ಕೂಡ ಮಕ್ಕಳಿಗೆ ಸ್ಫೂರ್ತಿಯ ಸೆಲೆಯಾಗಬಲ್ಲದು. ಕುವೆಂಪು ನಿತ್ಯ ಜೀವನವನ್ನು ಸರಳವಾಗಿ ಮತ್ತು ಬಹು ಉತ್ಸಾಹದಿಂದ ನಡೆಸಿದರು. ಆಡಂಬರ ಅವರ ಬಳಿ ಸುಳಿಯಲಿಲ್ಲ. ಸಾಹಿತ್ಯದ ಮೂಲಕ ಸಮಾಜಕ್ಕೆ ಕೊಡಬೇಕಾದ ಸಂದೇಶಗಳನ್ನು ನೀಡುತ್ತಲೇ ಹೋದರು. ಅವರು ನಡೆದ ದಾರಿ ಮತ್ತು ನೀಡಿದ ಸಂದೇಶಗಳೇ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಬೇಕೆಂದರು.
ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷೆ ಮಹದೇವಮ್ಮ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪಠ್ಯದಲ್ಲಿ ಮಾತ್ರವಲ್ಲದೇ ಕ್ರೀಡೆಯಲ್ಲೂ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಪರಿಪೂರ್ಣ ವ್ಯಕ್ತಿತ್ವ ಗಳಿಸಿಕೊಳ್ಳಬೇಕೆಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ಮಹದೇವ, ಐಒಬಿ ಬ್ಯಾಂಕ್ ಮ್ಯಾನೇಜರ್ ಕೆ.ಎಂ.ಗಣೇಶ್ ಮಾತನಾಡಿದರು. ಸಂದರ್ಭದಲ್ಲಿ ರಾಷ್ಟ್ರಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆಗೈದ ಕ್ರೀಡಾಪಟು ಕಟ್ಟೆಮಳಲವಾಡಿ ಗ್ರಾಮದ ನಂದನ್‌ರನ್ನು ಹಾಗು ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಸಾಧನೆಗೈದ ಶಾಲೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಮುಖ್ಯ ಶಿಕ್ಷಕಿ ಲೂಸಿ ಪ್ರೇಮ, ಶಿಕ್ಷಕರಾದ ಜಗದೀಶ್, ಯೋಗೇಶ್, ಸಾವಿತ್ರಿ ಬಾಯಿ ಫುಲೆ ಸಂಘದ ಅಧ್ಯಕ್ಷೆ ನಾಗವೇಣಿ, ಕಸಾಪ ಸದಸ್ಯ ವಾಸುಕಿ, ಪದ್ಮಾ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net