ಮೈಸೂರು: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಆ.3ರಂದು ಸೌಹಾರ್ದಯುತ ಮಾತುಕತೆಗೆ ಬೆಂಗಳೂರಿಗೆ ಆಗಮಿಸುತ್ತಿರುವುದು ಸ್ವಾಗತಾರ್ಹ.
ದಶಕಗಳ ಕಾವೇರಿ ನೀರು ಹಂಚಿಕೆ ವಿವಾದ ಸಂಘರ್ಷದ ಹಾದಿಗಿಂತ ಸೌಹಾರ್ದಯುತ ಸಂವಾದದ ಮೂಲಕ ಪರಿಹಾರ ಕಂಡುಕೊಳ್ಳುವುದು ಉಭಯ ರಾಜ್ಯಗಳ ಹಿತದೃಷ್ಟಿಯಿಂದ ಅಗತ್ಯವಾಗಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ. ಹಾಗೂ ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ಮಳೆಯ ಅಭಾವ ಉಂಟಾಗುವ ವರ್ಷಗಳಲ್ಲಿ ಕಾವೇರಿ ಜಲಾಶಯಗಳಲ್ಲಿನ ನೀರಿನ ನೈಜ ಸಂಗ್ರಹಣೆಯನ್ನು ಆಧರಿಸಿ, ವೈಜ್ಞಾನಿಕ ಹಾಗೂ ನ್ಯಾಯಸಮ್ಮತ ಅಭಾವ ಹಂಚಿಕೆ ಸೂತ್ರವನ್ನು ರೂಪಿಸಲು ಒತ್ತು ನೀಡಬೇಕು.
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳ ಕುಡಿಯುವ ನೀರಿನ ಭದ್ರತೆ ಮತ್ತು ತಮಿಳುನಾಡಿನ ಕಾವೇರಿ ಅಚ್ಚುಕಟ್ಟು ಪ್ರದೇಶದ ಕುಡಿಯುವ ನೀರಿನ ಅಗತ್ಯತೆ ರಾಜಕೀಯದಿಂದ ಹೊರತಾಗಿ ಮೊದಲ ಆದ್ಯತೆಯಾಗಿ ಪರಿಗಣಿಸಬೇಕು ಎಂದು ಪ್ರಕಟಣೆಯಲ್ಲಿ ಸಲಹೆ ನೀಡಿದ್ದಾರೆ
ಉಭಯ ರಾಜ್ಯಗಳ ನೀರಾವರಿ ತಜ್ಞರು, ಹವಾಮಾನ ತಜ್ಞರು ಕಾನೂನು ಪರಿಣತರು ಮತ್ತು ಅಧಿಕಾರಿಗಳನ್ನೊಳಗೊಂಡ ಸಕ್ರಿಯ ‘ಜಂಟಿ ತಾಂತ್ರಿಕ ಸಮಿತಿ’ ರಚಿಸಬೇಕು. ಜತೆಗೆ, ಉಪಗ್ರಹ ಆಧಾರಿತ ಮಾಹಿತಿ, ಜಲಾಶಯಗಳ ನೈಜ ಸ್ಥಿತಿಗತಿ ಆಧರಿಸಿ ನಿರ್ಧಾರ ಕೈಗೊಳ್ಳುವ ವ್ಯವಸ್ಥೆ ಜಾರಿಯಾಗಬೇಕು ಎಂದು ಹೇಳಿದ್ದಾರೆ.
ಮೇಕೆದಾಟು ಸಮತೋಲನ ಜಲಾಶಯ ಯೋಜನೆಯು ಮಳೆಯ ಅಭಾವದ ಸಂದರ್ಭದಲ್ಲಿ ತಮಿಳುನಾಡಿಗೂ ಹೆಚ್ಚುವರಿ ನೀರನ್ನು ಹಂಚಿಕೆ ಮಾಡಿಕೊಳ್ಳಲು ನಿಯಂತ್ರಿತವಾಗಿ ಹರಿಸಲು ಸಹಕಾರಿಯಾಗುತ್ತದೆ. ಇದನ್ನು ಮನವರಿಕೆ ಮಾಡಿಕೊಟ್ಟು, ಯೋಜನೆಯ ಅನುಷ್ಠಾನಕ್ಕೆ ಸಕಾರಾತ್ಮಕ ಬೆಂಬಲ ಪಡೆಯಬೇಕು. ಎರಡೂ ರಾಜ್ಯಗಳಲ್ಲಿ ಲಭ್ಯವಿರುವ ನೀರಿಗೆ ತಕ್ಕಂತೆ ಕಡಿಮೆ ನೀರು ಬಳಸುವ ಆಧುನಿಕ ಕೃಷಿ ಪದ್ಧತಿ ಹಾಗೂ ಕೃಷಿ ತಂತ್ರಜ್ಞಾನಕ್ಕೆ ಪ್ರೋತ್ಸಾಹ ನೀಡಲು ಜಂಟಿ ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದ್ದಾರೆ.
ಕಾವೇರಿ ಜೀವ ನದಿಯು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳನ್ನು ಬೆಸೆಯುವ ಸೌಹಾರ್ದದ ಸಂಕೇತವಾಗಬೇಕು.
ಕೋರ್ಟ್-ಕಚೇರಿಗಳ ಸುದೀರ್ಘ ವ್ಯಾಜ್ಯಗಳಿಗಿಂತ, ಎರಡು ರಾಜ್ಯಗಳ ನಾಯಕರು ಪರಸ್ಪರ ಗೌರವ ಮತ್ತು ಸೌಹಾರ್ದತೆಯಿಂದ ಕೈಗೊಳ್ಳುವ ನಿರ್ಧಾರ ರೈತರ ಮತ್ತು ನಾಗರಿಕರ ಜೀವನದಲ್ಲಿ ನೆಮ್ಮದಿ ತರಬಲ್ಲವು. ಇದನ್ನು ಗಂಭೀರವಾಗಿ ಅರಿತುಕೊಂಡು ಆ.3ರ ಸೌಹಾರ್ದ ಸಭೆಯು ಕೇವಲ ಔಪಚಾರಿಕ ಭೇಟಿಯಾಗದೆ, ಕಾವೇರಿ ಜಲಾನಯನ ಪ್ರದೇಶದಲ್ಲಿ ಹೊಸ ಪರಸ್ಪರ ಸಹಕಾರದ ಅಧ್ಯಯಕ್ಕೆ ಮುನ್ನುಡಿಯಾಗಲಿ ಎಂದು ಹೇಳಿದ್ದಾರೆ.