ನಗರದ ಟಿಎಪಿಸಿಎಂಎಸ್ ಸಹಕಾರ ಸಂಘದಲ್ಲಿ ಅಧ್ಯಕ್ಷರಾಗಿ ಕುರಹಟ್ಟಿ ಮಹೇಶ್, ಉಪಾಧ್ಯಕ್ಷರಾಗಿ ಮಹದೇವ್ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಬೆಂಬಲಿಗರು ಅಭಿನಂದನೆ ಸಲ್ಲಿಸಿದರು. ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಪರಶಿವಮೂರ್ತಿ, ಪ್ರಕಾಶ್ ಇತರರು ಇದ್ದರು.
ನಂಜನಗೂಡು: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತಕ್ಕೆ ಅಧ್ಯಕ್ಷರಾಗಿ ಕುರಹಟ್ಟಿ ಮಹೇಶ್, ಉಪಾಧ್ಯಕ್ಷರಾಗಿ ಆರ್. ಮಹದೇವು ಅವಿರೋಧವಾಗಿ ಆಯ್ಕೆಯಾದರು.
ಟಿಎಪಿಸಿಎಂಎಸ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಬುಧವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಕುರಹಟ್ಟಿ ಮಹೇಶ್, ಉಪಾಧ್ಯಕ್ಷ ಸ್ಥಾನಕ್ಕೆ ಆರ್. ಮಹದೇವ್ ಬಿಟ್ಟು ಬೇರೆ ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ. ಹೀಗಾಗಿ ಇವರಿಬ್ಬರ ಆಯ್ಕೆಯನ್ನು ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು ಘೋಷಣೆ ಮಾಡಿದರು.
ಬಳಿಕ ನೂತನ ಅಧ್ಯಕ್ಷ ಕುರಹಟ್ಟಿ ಮಹೇಶ್ ಮಾತನಾಡಿ, ಸಿಎಂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪ, ಶಾಸಕರಾದ ದರ್ಶನ್ ಧ್ರುವನಾರಾಯಣ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಸಂಸದರಾದ ಸುನೀಲ್ ಬೋಸ್, ವಿಧಾನಸಭಾ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ರಂಗಸ್ವಾಮಿ ಅವರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಮುಂದಿನ ಐದು ವರ್ಷಗಳ ಅವಧಿಗೆ ನನ್ನನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ತಿಳಿಸಿದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಿರ್ದೇಶಕರಾದ ಪರಶಿವಮೂರ್ತಿ, ಜಿ.ಕೆ. ಪ್ರಕಾಶ್, ಕೆ.ಎನ್. ಮಲ್ಲೇಶ್, ಟಿ.ಎನ್. ಗುರುಮಲ್ಲೇಶ್, ವಿಜಯಕುಮಾರ್, ಶಿವಕುಮಾರ್, ಶ್ರೀನಿವಾಸ್, ಎಚ್.ಎಂ. ಮಂಜುಳಾ, ಪವಿತ್ರ, ಸರ್ವೇಶ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.