ಪಿರಿಯಾಪಟ್ಟಣದಲ್ಲಿ ಕುಂಡೆ ಹಬ್ಬ ಸಡಗರ

ಕುಂಡೆ ಹಬ್ಬದ ಅಂಗವಾಗಿ ಪಿರಿಯಾಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಗಿರಿಜನರು ವಿಚಿತ್ರ ವೇಷ ಭೂಷಣಗಳನ್ನು ತೊಟ್ಟು ನರ್ತಿಸಿದರು.
ಕುಂಡೆ ಹಬ್ಬದ ಅಂಗವಾಗಿ ಪಿರಿಯಾಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಗಿರಿಜನರು ವಿಚಿತ್ರ ವೇಷ ಭೂಷಣಗಳನ್ನು ತೊಟ್ಟು ನರ್ತಿಸಿದರು.
Published on
ಪಿರಿಯಾಪಟ್ಟಣ: ಆದಿವಾಸಿ ಗಿರಿಜನರ ಸಂಪ್ರದಾಯದ ಹಬ್ಬವಾದ ಕುಂಡೆ ಹಬ್ಬದ ಅಂಗವಾಗಿ ತಾಲೂಕಿನ ವಿವಿಧ ಹಾಡಿಗಳ ಗಿರಿಜನರು ವಿಚಿತ್ರ ವೇಷ ಭೂಷಣಗಳನ್ನು ತೊಟ್ಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾ ದೇವರನ್ನು ಅವಾಚ್ಯ ಪದಗಳಿಂದ ನಿಂದಿಸುತ್ತಾ ಸಂಭ್ರಮಿಸಿದರು.
ಕೊಡಗಿನ ತಿತಿಮತಿ ಸಮೀಪ ಹೆಬ್ಬಾಲೆ ಅಯ್ಯಪ್ಪ ಸ್ವಾಮಿ ಹಾಗೂ ಭದ್ರಕಾಳಿ ದೇವಾಲಯದಲ್ಲಿ ಕುಂಡೆ ಹಬ್ಬ (ಕುದುರೆ ಹಬ್ಬ)ಜಾತ್ರೆಯು ಗುರುವಾರ ಜರುಗಲಿದೆ. ತಾಲೂಕಿನ ವಿವಿಧ ಹಾಡಿಗಳಲ್ಲಿ ವಾಸವಿರುವ ಗಿರಿಜನರು ಬುಧವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತಮಟೆ, ಡೋಲು ವಾದ್ಯಗಳೊಂದಿಗೆ ನರ್ತಿಸುತ್ತಾ ಸಾರ್ವಜನಿಕರನ್ನು ರಂಜಿಸಿದರು.
ತಾಲೂಕಿನ 40ಕ್ಕೂ ಹೆಚ್ಚು ಗಿರಿಜನ ಹಾಡಿಗಳಿಂದ ಬೆಟ್ಟಕುರುಬ, ಜೇನುಕುರುಬ ಸೇರಿದಂತೆ ವಿವಿಧ ಬುಡಕಟ್ಟು ಜನಾಂಗಗಳ ಜನರು ತಂಡೋಪತಂಡವಾಗಿ ಅರಣ್ಯವಾಸಿಗಳ ಸಾಂಪ್ರದಾಯಿಕ ವೇಷ ಭೂಷಣಗಳನ್ನು ತೊಟ್ಟು ಬಂದಿದ್ದರು. ಕಾಡಿನಲ್ಲಿ ಸಿಗುವ ವಿವಿಧ ಜಾತಿಯ ಮರಗಳ ಸೊಪ್ಪು, ಹರಿದ ಬಟ್ಟೆಗಳು, ಗೋಣಿ ಚೀಲಗಳನ್ನು ಧರಿಸಿ ದೇಹಕ್ಕೆ ಬಣ್ಣ ಹಚ್ಚಿಕೊಂಡಿದ್ದರು. ಒಣಗಿದ ಸೋರೆಕಾಯಿ ಬುರುಡೆ, ಪ್ಲಾಸ್ಟಿಕ್ ಡಬ್ಬ ಹಾಗೂ ಟಿನ್‌ಗಳನ್ನು ಬಳಸಿ ವಾದ್ಯಗಳನ್ನು ಮಾಡಿಕೊಂಡು ಕುಣಿಯುತ್ತಾ, ಹಾದಿ-ಬೀದಿಯಲ್ಲಿ ಸಿಕ್ಕ ಸಿಕ್ಕವರನ್ನು ನಿಂದಿಸುತ್ತಾ ಭಿಕ್ಷಾಟನೆ ನಡೆಸಿ ಹಣ, ದವಸ-ಧಾನ್ಯಗಳನ್ನು ಸಂಗ್ರಹಿಸಿದರು.
ಸಾರ್ವಜನಿಕರಿಂದ ವಸೂಲಿ ಮಾಡಿದ ಹಣ, ದವಸ-ಧಾನ್ಯಗಳನ್ನು ಗೋಣಿಕೊಪ್ಪ ರಸ್ತೆಯ ತಿತಿಮತಿ ಬಳಿ ಇರುವ ದೇವರಪುರದ ಶ್ರೀ ಭದ್ರಕಾಳಿ ಹಾಗೂ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಕೊಂಡೊಯ್ದು ದೇವರಿಗೆ ಸಮರ್ಪಸಿ ಕುದುರೆ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ನಂತರ ನಿಂದನಾತ್ಮಕ ಮಾತುಗಳಿಗಾಗಿ ದೇವರ ಮುಂದೆ ಕ್ಷಮೆಯಾಚಿಸಿ ಪೂಜೆ ಸಲ್ಲಿಸುತ್ತಾರೆ.
---------------------
27.ಥಿಠಿ. 01 02:
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net