ಕೆ.ಆರ್.ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆ ಉದ್ಘಾಟನಾ ಸಮಾರಂಭ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಂದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಕಾಲೇಜು ಪ್ರಾಂಶುಪಾಲ ಎಚ್.ಕೃಷ್ಣಯ್ಯ ಉದ್ಘಾಟಿಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಸುನೀತಾ, ಅರ್ಥಶಾಸ್ತ್ರ ಹಿರಿಯ ಉಪನ್ಯಾಸಕ ಡಿ.ಶ್ರೀನಿವಾಸ್, ಉಪನ್ಯಾಸಕರಾದ ಎಸ್.ಕೆ.ಮಂಜು, ಎಚ್.ಕೆ.ಜಗದೀಶ್, ಮೋಹನ್ ಮತ್ತಿತರರಿದ್ದರು.
ಕೆ.ಆರ್.ನಗರ:ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗೂ ಆದ್ಯತೆ ನೀಡಬೇಕು. ಜತೆಗೆ ಮಾನವೀಯ ಮೌಲ್ಯ ಅಳವಡಿಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳು ಕಲಿತ ವಿದ್ಯೆಗೆ ಸಾರ್ಥಕತೆ ಬರುತ್ತದೆ ಎಂದು ಕಾಲೇಜಿನ ಅರ್ಥಶಾಸ್ತ್ರ ಹಿರಿಯ ಉಪನ್ಯಾಸಕ ಡಿ.ಶ್ರೀನಿವಾಸ್ ಹೇಳಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆ ಉದ್ಘಾಟನಾ ಸಮಾರಂಭ , ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಾನವೀಯ ಮೌಲ್ಯಗಳು ನಶಿಸುತ್ತಿರುವುದು ಬೇಸರ ತಂದಿದೆ ಎಂದರು.
ವಿದ್ಯಾರ್ಥಿಗಳು ಒಳ್ಳೆಯ ಮನಸ್ಸಿನಿಂದ ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಕಲಿಕೆಗೆ ಕೊನೆಯಿಲ್ಲ. ಜ್ಞಾನ ಗಳಿಕೆಗೆ ನಿರಂತರ ಪ್ರಯತ್ನ ಪಟ್ಟಾಗ ಮಾತ್ರ ಉಜ್ವಲ ಭವಿಷ್ಯ ರೂಪಿಸಿಕೊಳ್ಳ ಬಹುದಾಗಿದೆ ಎಂದು ಸಲಹೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಒಂದು ಮಾಯೆಯಾಗಿಬಿಟ್ಟಿದೆ. ವಿದ್ಯಾರ್ಥಿಗಳು ಮನಸ್ಸನ್ನು ಬೇರೆಡೆಗೆ ಕೊಂಡೊಯ್ಯುತ್ತಿದೆ. ಇದರಿಂದ ಓದಿನ ಕಡೆಗೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ವಿದ್ಯಾರ್ಥಿಗಳು ಅರಿತು ಮೊಬೈಲ್‌ನಿಂದ ದೊರೆಯುವ ಶಿಕ್ಷಣಕ್ಕೆ ಉಪಯುಕ್ತವಾದ ಮಾಹಿತಿಯನ್ನು ಮಾತ್ರ ಪಡೆಯಬೇಕೆಂದು ಕಿವಿಮಾತು ಹೇಳಿದರು.
ಪ್ರತಿಭಾವಂತ ವಿರ್ದ್ಯಾಥಿಗಳಿಗೆ ನೋಟ್ ಪುಸ್ತಕ ಮತ್ತು ಪೆನ್‌ಗಳನ್ನು ವಿತರಿಸಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಸುನೀತಾ, ಪ್ರಾಂಶುಪಾಲ ಎಚ್.ಕೆ.ಕೃಷ್ಣಯ್ಯ, ಉಪನ್ಯಾಸಕರಾದ ಎಸ್.ಕೆ.ಮಂಜು, ಎಚ್.ಕೆ.ಜಗದೀಶ್, ಮೋಹನ್ ಮತ್ತಿರರು ಹಾಜರಿದ್ದರು.