ಕೆ.ಆರ್. ನಗರ ಜೋಡಿ ಕೊಲೆ ಪ್ರಕರಣ, 10 ಆರೋಪಿಗಳ ವಿರುದ್ಧ ಎಫ್‌ಐಆರ್

ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ
ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ
Published on
ಮೈಸೂರು: ಕೆ.ಆರ್. ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅರ್ಜುನಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದ ಇಬ್ಬರು ಸಹೋದರರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಮುಖ ಆರೋಪಿ ರೋಹಿತ್‌ನನ್ನು ಬಂಧಿಸಲಾಗಿದ್ದು, ಮತ್ತಿಬ್ಬರು ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆಸ್ತಿ ಹಂಚಿಕೆಯ ವಿಚಾರದಲ್ಲಿ ಈ ಹತ್ಯೆ ನಡೆದಿದೆ. ಅರ್ಜುನಹಳ್ಳಿ ಗ್ರಾಮದ ದಿ. ರಮೇಶ್ ರಾಜು ಇಬ್ಬರನ್ನು ವಿವಾಹವಾಗಿದ್ದು, ಈ ಇಬ್ಬರು ಪತ್ನಿಯರ ಮಕ್ಕಳ ನಡುವೆ ಆಸ್ತಿಗೆ 2015ರಿಂದ ಜಗಳ ನಡೆಯುತಿತ್ತು. ಇದೀಗ ಹತ್ಯೆಗೀಡಾದ ರಾಘವೇಂದ್ರ ಹಾಗೂ ಇಬ್ಬರು ಸೇರಿಕೊಂಡು 2022ರಲ್ಲಿ ತಂದೆ ರಮೇಶ್ ರಾಜು ಅವ ರನ್ನು ಹತ್ಯೆ ಮಾಡಿದ್ದರು ಎಂದು ಮಾಹಿತಿ ನೀಡಿದರು.
ಜಾಗದ ವಿಚಾರವಾಗಿ ಮೇ 1ರ ನಂತರ ಸಾಕಷ್ಟು ಬಾರಿ ರಾಜಿಪಂಚಾಯಿತಿ ನಡೆದಿದೆ. ಬುಧವಾರ ರಾಜಿಪಂಚಾಯಿತಿಗೆ ಕರೆಯಿಸಿ ಸಹೋದರರಾದ ರಾಘವೇಂದ್ರ ಹಾಗೂ ಹರ್ಷವರ್ಧನ್ ಅವರನ್ನು ಹತ್ಯೆ ಮಾಡಲಾಗಿದೆ. ಹತ್ಯೆಗೀಡಾದ ರಾಘವೇಂದ್ರ, ಹರ್ಷವರ್ಧನ್ ಅವರ ತಾಯಿ ಕಾಮಾಕ್ಷಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
‘ದಿ. ರಮೇಶ್ ರಾಜು ಮೊದಲ ಪತ್ನಿ ಸುಧಾ ಪುತ್ರ, ಪ್ರಮುಖ ಆರೋಪಿ ರೋಹಿತ್ ಹಾಗೂ ಇಬ್ಬರು ಸೇರಿಕೊಂಡು ಹತ್ಯೆ ಮಾಡಿದ್ದಾರೆ. ಈ ಕೃತ್ಯಕ್ಕೆ 5 ಜನರು ಪ್ರಚೋದನೆ ನೀಡಿದ್ದಾರೆ’ ಎಂದು ಕಾಮಾಕ್ಷಿ ದೂರು ನೀಡಿದ್ದಾರೆ. ಒಟ್ಟು 10 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದರು.
ಮೃತದೇಹ ಹಸ್ತಾಂತರ: ಹತ್ಯೆಗೀಡಾದ ರಾಘವೇಂದ್ರ, ಹರ್ಷವರ್ಧನ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಮೈಸೂರು ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net