ಮೈಸೂರಿನಲ್ಲಿ ‘ಮೂಕ ಸ್ಪಂದನೆ’

ಮೈಸೂರು ನಗರದಲ್ಲಿ ಪ್ರಾಣಿ, ಪಕ್ಷಿಗಳಿಗೆ ನೀರು ಒದಸಗಿಸುವ ಕಾರ್ಯದಲ್ಲಿ ತೊಡಗಿರುವ  ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಸದಸ್ಯರು
ಮೈಸೂರು ನಗರದಲ್ಲಿ ಪ್ರಾಣಿ, ಪಕ್ಷಿಗಳಿಗೆ ನೀರು ಒದಸಗಿಸುವ ಕಾರ್ಯದಲ್ಲಿ ತೊಡಗಿರುವ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಸದಸ್ಯರು
Published on

ಪ್ರಮುಖ ಮುಖ್ಯಾಂಶಗಳು

  • ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರು, ಆಹಾರ
  • ಕೆಎಂಪಿಕೆ ಚಾರಿಟಬಲ್ ಟ್ರಸ್ಟ್‌ನಿಂದ ಸೇವೆ
ಸದೇಶ್ ಕಾರ್ಮಾಡ್ ಮೈಸೂರು
ನಗರದಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪಮಾನದಿಂದ ಪ್ರಾಣಿ, ಪಕ್ಷಿಗಳು ಕಂಗಾಲಾಗಿದ್ದು, ಕುಡಿಯುವ ನೀರು, ಆಹಾರಕ್ಕೆ ಪ್ರಾಣಿಗಳು ಪರದಾಡುತ್ತಿವೆ. ಈ ಸಮಸ್ಯೆಯನ್ನು ಮನಗಂಡ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ‘ಮೂಕ ಸ್ಪಂದನೆ’ ಹೆಸರಿನಲ್ಲಿ ಪ್ರಾಣಿ, ಪಕ್ಷಿಗಳಿಗೆ ನೀರು ಹಾಗೂ ಆಹಾರ ಒದಗಿಸುವ ಸೇವಾ ಕಾರ್ಯ ಕೈಗೊಂಡಿದೆ.
ಮನುಷ್ಯರಾದರೆ ನೀರು, ಆಹಾರ ಕೇಳಿ ಪಡೆಯಬಹುದು. ಆದರೆ, ಮೂಕ ಪ್ರಾಣಿ, ಪಕ್ಷಿಗಳು ನೀರು, ಆಹಾರ ಕೇಳಿ ಪಡೆಯಲು ಸಾಧ್ಯವಿಲ್ಲ. ಗ್ರಾಮೀಣ ಭಾಗದಲ್ಲಿ ಜಾನುವಾರುಗಳ ದಾಹ ನೀಗಿಸುವ ಸಲುವಾಗಿ ಸರ್ಕಾರ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಆದರೆ, ನಗರ ಪ್ರದೇಶದಲ್ಲಿ ಪ್ರಾಣಿ, ಪಕ್ಷಿಗಳ ದಾಹ ನೀಗಿಸಲು ಇಂತಹ ವ್ಯವಸ್ಥೆಗಳು ಇಲ್ಲ. ಪ್ರಾಣಿ, ಪಕ್ಷಿಗಳ ಬಗ್ಗೆ ಪ್ರೀತಿ ಹೊಂದಿರುವ ಕೆಲವು ಜನರು ಮನೆಗಳ ಮುಂದೆ ತಾವೇ ತೊಟ್ಟಿಗಳನ್ನು ನಿರ್ಮಿಸಿ ನೀರು ತುಂಬಿರುತ್ತಾರೆ. ಆದರೆ, ವಾಣಿಜ್ಯ ಪ್ರದೇಶದಲ್ಲಿ ಇಂತಹ ವ್ಯವಸ್ಥೆ ಕಾಣಲು ಸಾಧ್ಯವಿಲ್ಲ. ಹೀಗಾಗಿ ನಗರದ ಹೃದಯ ಭಾಗದಲ್ಲಿ ಪ್ರಾಣಿ, ಪಕ್ಷಿಗಳಿಗೆ ನೀರು, ಆಹಾರ ಒದಗಿಸಲು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಕ್ರಮ ವಹಿಸಿದೆ. ಕಳೆದ 12 ವರ್ಷಗಳಿಂದ ಈ ಸೇವಾ ಕಾರ್ಯವನ್ನು ಸಾರ್ವಜನಿಕರ ಸಹಕಾರದೊಂದಿಗೆ ಟ್ರಸ್ಟ್ ಕೈಗೊಂಡಿದೆ.
ನಗರದ ಮಹಾರಾಜ ಕಾಲೇಜು ಮೈದಾನ, ಓವಲ್ ಮೈದಾನ, ಹಳೇ ಜಿಲ್ಲಾಧಿಕಾರಿ ಕಚೇರಿ ಆವರಣ, ಕೃಷ್ಣರಾಜ ಬುಲೇವಾರ್ಡ್ ರಸ್ತೆ, ಚಾಮುಂಡಿಪುರಂ, ನಂಜು ಮಳಿಗೆಯಲ್ಲಿ ಪಕ್ಷಿಗಳಿಗೆ ನೀರು ಮತ್ತು ಆಹಾರ ಒದಗಿಸಲು ಬಟ್ಟಲು ಇರಿಸಿ ನೀರು, ಆಹಾರ ನೀಡಲಾಗುತ್ತಿದೆ. ಈ ಸೇವಾ ಕಾರ್ಯವನ್ನು ಕೇವಲ ಟ್ರಸ್ಟ್ ಪದಾಧಿಕಾರಿಗಳಿಂದ ಮಾತ್ರ ಕೈಗೊಳ್ಳಲು ಸಾಧ್ಯವಿಲ್ಲ. ಕನಿಷ್ಠ 2 ದಿನಗಳಿಗೊಮ್ಮೆಯಾದರೂ ನೀರಿನ ಬಟ್ಟಲು, ತೊಟ್ಟಿಗಳನ್ನು ಶುಚಿಗೊಳಿಸಿ ಶುದ್ಧ ನೀರನ್ನು ತುಂಬಿಸಬೇಕು. ಬೇಸಿಗೆ ಕಳೆದ ತಕ್ಷಣ ಈ ತೊಟ್ಟಿಗಳು ಹಾಗೂ ಬಟ್ಟಲುಗಳನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ ನೀರಿನಲ್ಲಿ ಸೊಳ್ಳೆಗಳು ಮೊಟ್ಟೆ ಇಟ್ಟು ಮರಿ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಪ್ರಾಣಿ, ಪಕ್ಷಿಗಳ ಕುರಿತು ವಿಶೇಷ ಕಾಳಜಿ ಇರುವವರನ್ನು ಗುರುತಿಸಿ ಅವರಿಗೆ ನೀರಿನ ತೊಟ್ಟಿ ಮತ್ತು ಬಟ್ಟಲು ಗಳನ್ನು ನೀಡಲಾಗುತ್ತಿದೆ.
ಪ್ರತಿನಿತ್ಯ ಎಲ್ಲ ಕಡೆಗಳಿಗೆ ಟ್ರಸ್ಟ್‌ನವರು ತೆರಳಿ ನೀರು, ಆಹಾರ ನೀಡಲು ಕಷ್ಟಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ಜನರಲ್ಲಿ ಜಾಗೃತಿ ಮೂಡಿಸಿ ಅವರಿಗೆ ನೀರು ಮತ್ತು ಆಹಾರ ನೀಡುವ ಜವಾಬ್ದಾರಿ ವಹಿಸಲಾಗಿದೆ. ಸಾರ್ವಜನಿಕರು ಜವಾಬ್ದಾರಿ ವಹಿಸಿಕೊಳ್ಳದೆ ಇರುವ ಜಾಗದಲ್ಲಿ ಟ್ರಸ್ಟ್ ವತಿಯಿಂದ ನೀರು, ಆಹಾರ ನೀಡಲಾಗುತ್ತಿದೆ. ಪಕ್ಷಿಗಳು, ಅಳಿಲು ಮುಂತಾದ ಸಣ್ಣ ಪ್ರಾಣಿಗಳು ಈ ಬಟ್ಟಲಿನಲ್ಲಿರುವ ನೀರು, ಆಹಾರವನ್ನು ಸೇವಿಸುತ್ತಿವೆ. ಇದರ ಜತೆಗೆ ಜಿಲ್ಲಾಧಿಕಾರಿ ಕಚೇರಿ ಬಳಿ ಜಾನುವಾರುಗಳು, ಶ್ವಾನಗಳಿಗೆ ಕುಡಿಯುವ ನೀರು ಒದಗಿಸಲು ತೊಟ್ಟಿಯನ್ನು ಇಟ್ಟು ನೀರು ತುಂಬುವ ಕಾರ್ಯ ಮಾಡಲಾಗುತ್ತಿದೆ.
ಬೇಸಿಗೆ ಸಂದರ್ಭ ಆಹಾರ ಹಾಗೂ ನೀರಿನ ಕೊರತೆ ಎದುರಾದಾಗ ಪ್ರಾಣಿ, ಪಕ್ಷಿಗಳು ಬೇಗನೆ ನಿತ್ರಾಣಗೊಂಡು ಪ್ರಜ್ಞೆ ತಪ್ಪಿ ಬೀಳುವ ಸಾಧ್ಯತೆಗಳು ಹೆಚ್ಚಿದೆ. ಈ ರೀತಿ ಪ್ರಜ್ಞೆ ತಪ್ಪಿ ಬೀಳುವ ಪಕ್ಷಿಗಳ ಪೈಕಿ ಬಹುತೇಕ ಪಕ್ಷಿಗಳು ಸಾವಿಗೀಡಾಗುತ್ತವೆ. ಪಕ್ಷಿಗಳು ನೀರಿನ ಕೊರತೆ ಯಿಂದ ನಿತ್ರಾಣಗೊಂಡು ಸಾವಿಗೀಡಾಗುವುದನ್ನು ತಪ್ಪಿಸಲು ಜನರು ಒಂದೆರಡು ತಿಂಗಳ ಕಾಲ ಮನೆಯ ಬಳಿ ನೀರು ಇಡುವ ಅಭ್ಯಾಸ ಮಾಡಿಕೊಂಡರೆ ಉತ್ತಮ.
ನಗರದ ಪುರಭವನ ಆವರಣದಲ್ಲಿ ಪ್ರತಿದಿನ ವಿವಿಧ ಸಂಘಟನೆಗಳಿಂದ ಪಕ್ಷಿಗಳಿಗೆ ಆಹಾರ ನೀಡಲಾಗುತ್ತಿದೆ. ಅದೇ ರೀತಿ ಕುಕ್ಕರಹಳ್ಳಿ ಕೆರೆಯಲ್ಲಿ ಪ್ರತಿನಿತ್ಯ ವಾಯುವಿಹಾರಿಗಳು ಪಕ್ಷಿಗಳಿಗೆ ಆಹಾರ ನೀಡುತ್ತಾರೆ. ಅಲ್ಲದೆ, ನಗರದ ಕೆಲವು ನಾಗರಿಕರು ತಮ್ಮ ಮನೆಗಳಲ್ಲಿ ಪ್ರಾಣಿ, ಪಕ್ಷಿಗಳಿಗೆ ನೀರು ಮತ್ತು ಆಹಾರ ನೀಡುವ ಉತ್ತಮ ಕಾರ್ಯದಲ್ಲಿ ತಮ್ಮನ್ನು ಪ್ರತಿನಿತ್ಯ ತೊಡಗಿಸಿಕೊಂಡಿದ್ದು, ಈ ಸಂಖ್ಯೆ ಮತ್ತಷ್ಟು ವೃದ್ಧಿಯಾಗುವ ಅವಶ್ಯಕತೆ ಇದೆ.
ಬೇಸಿಗೆ ಸಂದರ್ಭ ಪ್ರಾಣಿ, ಪಕ್ಷಿಗಳಿಗೆ ನೀರು ಮತ್ತು ಆಹಾರ ಒದಗಿಸುವ ಸೇವಾ ಕಾರ್ಯವನ್ನು ಕಳೆದ 12 ವರ್ಷಗಳಿಂದ ನಡೆಸಿ ಕೊಂಡು ಬರುತ್ತಿದ್ದೇವೆ. ಸಾರ್ವಜನಿಕರ ಸಹಕಾರದೊಂದಿಗೆ ನಗರದ ಸಾಕಷ್ಟು ಕಡೆಗಳಲ್ಲಿ ಪ್ರಾಣಿ, ಪಕ್ಷಿಗಳಿಗೆ ನೀರು ಒದಗಿಸುತ್ತಿದ್ದೇವೆ. ಬೇಸಿಗೆ ಸಂದರ್ಭ ಪ್ರಾಣಿ, ಪಕ್ಷಿಗಳಿಗೆ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನೀರು ದೊರೆಯುವುದಿಲ್ಲ. ಹಾಗಾಗಿ ಜನರು ತಮ್ಮ ಮನೆಗಳ ಮುಂದೆ ನೀರಿನ ತೊಟ್ಟಿ ಅಥವಾ ಬಟ್ಟಲು ಇರಿಸಿ ಪ್ರಾಣಿ, ಪಕ್ಷಿಗಳಿಗೆ ದಾಹ ನೀಗಿಸುವ ಪ್ರಯತ್ನ ಮಾಡಬೇಕು.
ವಿಕ್ರಂ ಅಯ್ಯಂಗಾರ್, ಅಧ್ಯಕ್ಷ, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net