ಅಭಿವೃದ್ಧಿಯಲ್ಲಿ ಕಿತ್ತೂರು ಗ್ರಾಪಂ ಮಾದರಿ

ಬೆಟ್ಟದಪುರ ಸಮೀಪದ ಕಿತ್ತೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅಂಗನವಾಡಿ ಕೇಂದ್ರಕ್ಕೆ ಆಟಿಕೆ, ಬೀರು ಇತರ ಸಾಮಗ್ರಿಗಳನ್ನು ನಿತಿನ್ ವೆಂಕಟೇಶ್ ವಿತರಣೆ ಮಾಡಿದರು.
ಬೆಟ್ಟದಪುರ ಸಮೀಪದ ಕಿತ್ತೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅಂಗನವಾಡಿ ಕೇಂದ್ರಕ್ಕೆ ಆಟಿಕೆ, ಬೀರು ಇತರ ಸಾಮಗ್ರಿಗಳನ್ನು ನಿತಿನ್ ವೆಂಕಟೇಶ್ ವಿತರಣೆ ಮಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಹೇಳಿಕೆ
ಬೆಟ್ಟದಪುರ: ಕಿತ್ತೂರು ಗ್ರಾಮ ಪಂಚಾಯಿತಿ ಮಾದರಿ ಪಂಚಾಯಿತಿಯಾಗಿ ಕೆಲಸ ನಿರ್ವಹಿಸುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ ಎಂದು ತಾಲೂಕು ಆಶ್ರಯ ಮತ್ತು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಕಿತ್ತೂರು ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಸುಮಾರು 45 ವರ್ಷಗಳ ಕಾಲ ಶಾಸಕರಾಗಿದವರಲ್ಲಿ ಕಿತ್ತೂರು ಗ್ರಾಮದವರೇ ಆಗಿರುವುದು ಹೆಮ್ಮೆಯ ಸಂಗತಿ. ಅದರಲ್ಲೂ ನಮ್ಮ ತಂದೆ ಕೆ.ವೆಂಕಟೇಶ್ ಆರು ಬಾರಿ ಶಾಸಕರಾಗಿ, ಸಚಿವರಾಗಿದ್ದಾರೆ. 2028ರ ಚುನಾವಣೆಯಲ್ಲಿ ಅವರು ಸ್ಪರ್ಧೆ ಮಾಡುವುದಿಲ್ಲವಾದರೆ ನಾನೇ ಅಭ್ಯರ್ಥಿಯಾಗಿರುತ್ತೇನೆ ಎಂದರು.
ಪಂಚಾಯಿತಿ ಕಾರ್ಯದರ್ಶಿ ಪುಟ್ಟೇಗೌಡ ಮಾತನಾಡಿ, ನರೇಗಾ ಯೋಜನೆಯಡಿ ಸುಮಾರು ಹದಿನೈದು ಕಿಮೀವರೆಗೆ ರಸ್ತೆ ನಿರ್ಮಾಣ ಮಾಡಲಾಗಿದೆ. ಆರು ನೂರಕ್ಕೂ ಹೆಚ್ಚಿನ ಫಲಾನುಭವಿಗಳಿಗೆ ವಿವಿಧ ಯೋಜನೆಗಳನ್ನು ಕಲ್ಪಿಸಿಕೊಡಲಾಗಿದೆ. ಪಂಚಾಯಿತಿ ನೂತನ ಕಟ್ಟಡ ನಿರ್ಮಾಣ ಮಾಡಲಾಗಿದೆ. ಪಂಚಾಯಿತಿ 18 ವ್ಯಾಪ್ತಿಯ ಹಳ್ಳಿಗಳನ್ನು ಹೊಂದಿದ್ದು, ಸುಮಾರು ಹನ್ನೆರಡು ಅಂಗನವಾಡಿ ಹಾಗೂ ಎಂಟು ಶಾಲೆಗಳಿಗೆ ಕ್ರೀಡಾ ಸಾಮಗ್ರಿಗಳನ್ನು, ಚೇರ್, ಬೀರು, ಟೇಬಲ್ ವಿತರಣೆ ಮಾಡಲಾಗಿದೆ. ಕಿತ್ತೂರು ಗ್ರಾಮದ ಸರ್ಕಾರಿ ಶಾಲೆಗೆ ಅಡುಗೆ ಮನೆ, ವಿಜ್ಞಾನ ಪ್ರಯೋಗ ಶಾಲೆ, ಕಿತ್ತೂರಮ್ಮ ದೇವಸ್ಥಾನದ ಬಳಿ ಶೌಚಗೃಹ ನಿರ್ಮಾಣ ಮಾಡಲಾಗಿದೆ. ಗ್ರಾಮದಲ್ಲಿ ಹೈಮಾಸ್ಟ್ ಲೈಟ್ ಹಾಗೂ ಅಮೃತ್ ಗ್ರಾಮ ಯೋಜನೆಯಡಿ ಸೋಲಾರ್ ದೀಪ ಅಳವಡಿಕೆ ಮಾಡಲಾಗಿದೆ. ಜತೆಗೆ ಗ್ರಾಮಗಳಲ್ಲಿ ಚರಂಡಿ ಸ್ವಚ್ಛತೆ ಮಾಡುವ ಮೂಲಕ ನೈರ್ಮಲ್ಯತೆಗೆ ಒತ್ತು ನೀಡಲಾಗಿದೆ ಎಂದು ಹೇಳಿದರು.
ಎಲ್ಲ ಸದಸ್ಯರಿಗೆ, ಗಣ್ಯರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಅಂಗನವಾಡಿ ಕೇಂದ್ರಗಳಿಗೆ ಆಟದ ಸಾಮಗ್ರಿಗಳು, ಟೇಬಲ್, ಚೇರ್‌ಗಳನ್ನು ವಿತರಣೆ ಮಾಡಲಾಯಿತು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುಮಿತ್, ಮಾಜಿ ಅಧ್ಯಕ್ಷ ಸಚಿನ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಆರ್.ವೀಣಾ, ಉಪಾಧ್ಯಕ್ಷೆ ಗಿರಿಜಾ, ಸದಸ್ಯರಾದ ಕಾವೇರಮ್ಮ, ಕೆ.ಎ.ದೀಪಕ್, ಬೇಲೂರಯ್ಯ, ಬಿ.ಎನ್ ರಾಜಮಣಿ, ಆರ್.ಎನ್ ಜಗದೀಶ್, ನಳಿನಿ ಕೆ.ಎಸ್, ರಂಜಿನಿ, ವಸಂತ, ಕೆ.ಎಸ್ ದಿನೇಶ, ಪ್ರಭಾವತಿ, ಬೋರೇಗೌಡ, ಎಂ.ಟಿ ಮಹದೇವ, ನಟರಾಜು, ಎಂ.ಎಸ್.ಮಂಜಪ್ಪ, ಗಣೇಶ, ಎನ್.ಎ.ಪೂಜಾ, ಎಚ್.ಜೆ.ಶೋಭಾ, ಮುಖಂಡರಾದ ಜಗದೀಶ್, ಪ್ರಕಾಶ, ವೆಂಕಟೇಶ್, ಜಯಚಂದ್ರ, ಮಹಾದೇವ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಆರ್.ಮನು, ಎಸ್.ಡಿ.ಎ.ಮಹೇಶ್, ಕ್ಲರ್ಕ್ ರಶ್ಮಿ ಇತರರು ಇದ್ದರು.
ಕಿತ್ತೂರು ಗ್ರಾಮ ಪಂಚಾಯಿತಿ ಸಾರ್ವಜನಿಕರ ಸೇವೆಯಲ್ಲಿ ಸದಾ ಮಾದರಿಯಾಗಿ ಕೆಲಸ ನಿರ್ವಹಿಸುತ್ತಿದೆ. ಸರ್ಕಾರದಿಂದ ಬರುವ ಯೋಜನೆ ಹಾಗೂ ಸವಲತ್ತುಗಳನ್ನು ಪ್ರಾಮಾಣಿಕವಾಗಿ ಒದಗಿಸುತ್ತಿದೆ. ಗ್ರಾಮಗಳ ಅಭಿವೃದ್ಧಿ ಜತೆಯಲ್ಲಿ, ನೈರ್ಮಲ್ಯತೆ ಕಾಪಾಡುವ ಕೆಲಸ ಮಾಡುತ್ತಿದೆ.
ಬಿ.ಆರ್ ಮನು ಪಿಡಿಒ, ಕಿತ್ತೂರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net