ಮೈಸೂರಿನಲ್ಲಿ ಕೆಂಗಲ್ ಹನುಮಂತಯ್ಯ ಜಯಂತಿ ಆಚರಣೆ

 ಮೈಸೂರು ನಗರದ ಇಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರ ಸಾಧಕರಿಗೆ ಮಾಜಿ ಶಾಸಕ ಎಂ.ಕೆ ಸೋಮಶೇಖರ್ ಕೆಂಗಲ್ ಹನುಮಂತಯ್ಯ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಿದರು.
ಮೈಸೂರು ನಗರದ ಇಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರ ಸಾಧಕರಿಗೆ ಮಾಜಿ ಶಾಸಕ ಎಂ.ಕೆ ಸೋಮಶೇಖರ್ ಕೆಂಗಲ್ ಹನುಮಂತಯ್ಯ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಿದರು.
Published on
ಮೈಸೂರು: ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ರಾಜ್ಯ ಹಾಗೂ ರಾಷ್ಟ್ರ ಕಂಡ ಅಪರೂಪದ ಪ್ರಾಮಾಣಿಕ. ನಿಷ್ಠಾವಂತ, ಸರಳ ವ್ಯಕ್ತಿತ್ವದ ರಾಜಕಾರಣಿಯಾಗಿದ್ದ ಅವರ ತತ್ವ, ಆದರ್ಶಗಳನ್ನು ನಾವೆಲ್ಲರು ಅಳವಡಿಸಿಕೊಳ್ಳಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಕೆ.ಎಸ್.ರಂಗಪ್ಪ ಹೇಳಿದರು.
ನಗರದ ಇಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ಕರ್ನಾಟಕ ಸೇನಾ ಪಡೆ ವತಿಯಿಂದ ಶನಿವಾರ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಖಂಡ ಕರ್ನಾಟಕ ರಚನೆ ಮಾಡುವುದರಲ್ಲಿ ಕೆಂಗಲ್ ಹನುಮಂತಯ್ಯ ಅವರ ಪಾತ್ರ ಪ್ರಮುಖವಾದದ್ದು. ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ, ಮದ್ರಾಸ್ ಕರ್ನಾಟಕ ಎಲ್ಲವನ್ನು ಮೈಸೂರು ಪ್ರಾಂತ್ಯಕ್ಕೆ ಒಗ್ಗೂಡಿಸಿ ಇತಿಹಾಸ ನಿರ್ಮಿಸಿದರು. ಇವರ ಜಯಂತಿಯನ್ನು ಸರ್ಕಾರ ಜಿಲ್ಲಾಡಳಿತದ ವತಿಯಿಂದ ಆಚರಣೆ ಮಾಡಬೇಕು ಎಂದರು.
ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ದೇಶದಲ್ಲೇ ಎಲ್ಲೂ ಇಲ್ಲದ ಭವ್ಯ ವಿಧಾನಸೌಧ ನಿರ್ಮಿಸಿರುವ ಕೆಂಗಲ್ ಹನುಮಂತಯ್ಯ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು. ಕನ್ನಡಪರ ಹೋರಾಟಗಾರರು ಏಕೀಕರಣಕ್ಕಾಗಿ ಶ್ರಮಿಸಿದ ಕೆಂಗಲ್ ಹನುಮಂತಯ್ಯ ಅವರನ್ನು ನೆನೆಯಲೇಬೇಕು ಎಂದು ಹೇಳಿದರು.
ಇಂದಿನ ಯುವಜನರು, ಯುವ ರಾಜಕಾರಣಿಗಳು ಕೆಂಗಲ್ ಹನುಮಂತಯ್ಯ ಅವರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಕರ್ನಾಟಕ ಸೇನಾ ಪಡೆ ಕೆಂಗಲ್ ಹನುಮಂತಯ್ಯ ಅವರ ಜಯಂತಿ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭ ವಿವಿಧ ಕ್ಷೇತ್ರಗಳ ಸಾಧಕರಾದ ಜಿ. ಗಿರೀಶ್, ಬಿ.ಪಿ. ಬೋರೇಗೌಡ, ಸುಮಿತ್ರಾ ರಮೇಶ್, ಡಾ.ಬಿ.ಚಂದ್ರ, ಬಿ.ಟಿ. ಬಸವರಾಜ್, ಗೋಲ್ಡನ್ ಸುರೇಶ್, ಸಿಂಧುವಳ್ಳಿ ಶಿವಕುಮಾರ್, ಡಾ.ನಾಗೇಶ್ ರಾಗಿಮುದ್ದನಹಳ್ಳಿ, ಲೋಕೇಶ್ ಹೊಮ್ಮ ಅವರಿಗೆ ಮಾಜಿ ಶಾಸಕ ಎಂ.ಕೆ ಸೋಮಶೇಖರ್ ಕೆಂಗಲ್ ಹನುಮಂತಯ್ಯ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಿದರು.
ಕೆಂಗಲ್ ಹನುಮಂತಯ್ಯ ಭಾವಚಿತ್ರಕ್ಕೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ಪುಷ್ಪಾರ್ಚನೆ ಮಾಡಿದರು. ಕಾರ್ಯಕ್ರಮದಲ್ಲಿ ರಾಜ್ಯ ಒಕ್ಕಲಿಗ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಜಿ.ಗಂಗಾಧರ್, ಕರ್ನಾಟಕ ಸೇನಾ ಪಡೆ ರಾಜ್ಯಾಧ್ಯಕ್ಷ ಚಾ.ರಂ. ಶ್ರೀನಿವಾಸ ಗೌಡ, ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಕೆ.ಎನ್. ನಾಗೇಗೌಡ, ಪ್ರಮುಖರಾದ ಪ್ರಭುಶಂಕರ, ಕೃಷ್ಣಪ್ಪ, ಪ್ರಜೀಶ್, ಹನುಮಂತಯ್ಯ, ನೇಹಾ, ಭಾಗ್ಯಮ್ಮ, ಅಂಬಾ ಅರಸ್, ಸುಜಾತಾ, ಕೆ.ಪಿ.ನಾಗಣ್ಣ, ರಾಧಾಕೃಷ್ಣ, ಪ್ರಭಾಕರ್ ಹಾಗೂ ಇತರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net