ಕೆಂಪೇಗೌಡ, ಜಯಚಾಮರಾಜೇಂದ್ರ ಮಾದರಿ ನಾಯಕರು: ನಿವೃತ್ತ ಐಎಎಸ್ ಅಧಿಕಾರಿ ಎ.ಬಿ.ಇಬ್ರಾಹಿಂ ಬಣ್ಣನೆ

ನಗರದಲ್ಲಿ ಮೈಸೂರು ಕನ್ನಡ ವೇದಿಕೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಎ.ಬಿ.ಇಬ್ರಾಹಿಂ, ಕೆ.ಬಿ.ಲಿಂಗರಾಜು, ನಟರಾಜ್ ಜೋಯಿಸ್, ಮಹೇಂದ್ರ ಇತರರು ಇದ್ದರು.
ನಗರದಲ್ಲಿ ಮೈಸೂರು ಕನ್ನಡ ವೇದಿಕೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಎ.ಬಿ.ಇಬ್ರಾಹಿಂ, ಕೆ.ಬಿ.ಲಿಂಗರಾಜು, ನಟರಾಜ್ ಜೋಯಿಸ್, ಮಹೇಂದ್ರ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೆಂಪೇಗೌಡ ಅವರು 500 ವರ್ಷಗಳ ಹಿಂದೆಯೇ ಬೆಂಗಳೂರನ್ನು ಕಟ್ಟಿ, ಕಲೆ, ಸಾಂಸ್ಕೃತಿಕ ಆಚರಣೆಗೆ ಒತ್ತು ಕೊಟ್ಟರು
  • ಜಯಚಾಮರಾಜೇಂದ್ರ ಒಡೆಯರ್ ಸಣ್ಣ ವಯಸ್ಸಿನಲ್ಲೇ ರಾಜರಾಗಿ ಕಾರ್ಯಭಾರ ವಹಿಸಿಕೊಂಡು ಸತತ 14 ವರ್ಷ ರಾಜ್ಯಭಾರ ನಡೆಸಿದರು
ಮೈಸೂರು: ನಾಡಪ್ರಭು ಕೆಂಪೇಗೌಡ ಮತ್ತು ಮೈಸೂರು ರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ದೇಶದ ಮಾದರಿ ನಾಯಕರು ಎಂದು ನಿವೃತ್ತ ಐಎಎಸ್ ಅಧಿಕಾರಿ ಎ.ಬಿ.ಇಬ್ರಾಹಿಂ ಬಣ್ಣಿಸಿದರು.
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಮೈಸೂರು ಕನ್ನಡ ವೇದಿಕೆಯಿಂದ ಆಯೋಜಿಸಿದ್ದ ಜಯಚಾಮರಾಜೇಂದ್ರ ಒಡೆಯರ್ ಮತ್ತು ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ದೂರದೃಷ್ಟಿ ಆಡಳಿತವುಳ್ಳ ಅನೇಕ ರಾಜ, ಮಹಾರಾಜರು ನಮ್ಮ ದೇಶದಲ್ಲಿ ಆಳ್ವಿಕೆ ನಡೆಸಿದ್ದಾರೆ. ಆದರೆ ಕೆಲವರ ಹೆಸರು ಮಾತ್ರ ಚಿರಸ್ಥಾಯಿಯಾಗಿ ಉಳಿದಿದ್ದು, ಅವರ ಮಾಡಿದ ಜನೋಪಯೋಗಿ ಕಾರ್ಯಕ್ರಮ, ಅಭಿವೃದ್ಧಿ ಕಾರ್ಯಗಳು ಕಾರಣ ಎಂದರು.
ಕೆಂಪೇಗೌಡ ಅವರು 500 ವರ್ಷಗಳ ಹಿಂದೆಯೇ ಬೆಂಗಳೂರನ್ನು ಕಟ್ಟಿ, ಕಲೆ, ಸಾಂಸ್ಕೃತಿಕ ಆಚರಣೆಗೆ ಒತ್ತು ಕೊಟ್ಟರು. ಪ್ರಮುಖವಾಗಿ ನೂರಾರು ಕೆರೆಗಳನ್ನು ಕಟ್ಟಿ ಜಲಸಂರಕ್ಷಣೆಗೆ ಮುಂದಾಗುವ ಮೂಲಕ ಜನ, ಜಾನುವಾರುಗಳಿಗೆ, ಕೃಷಿಗೆ ನೀರು ದೊರೆಯುಂತೆ ಮಾಡಿದ ದೂರದೃಷ್ಟಿಯುಳ್ಳ ನಾಯಕರಾಗಿದ್ದರು ಎಂದು ಹೇಳಿದರು.
ಅದೇ ಮಾದರಿ ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್ ಸಣ್ಣ ವಯಸ್ಸಿನಲ್ಲೇ ರಾಜರಾಗಿ ಕಾರ್ಯಭಾರ ವಹಿಸಿಕೊಂಡು ಸತತ 14 ವರ್ಷ ರಾಜ್ಯಭಾರ ನಡೆಸಿದರು. ಅವರ ಕಾಲದಲ್ಲಿ ಆಡಳಿತ, ಕ್ರೀಡೆ, ಶಿಕ್ಷಣಕ್ಕೆ ಹೆಚ್ಚು ಒತ್ತುಕೊಟ್ಟಿದ್ದರು. ಕರ್ನಾಟಕ ಮತ್ತು ತಮಿಳುನಾಡು ರಾಜ್ಯಪಾಲರಾಗಿದ್ದರು. ಇವರ ಆಡಳಿತ ಮತ್ತು ಸಮಾಜಮುಖಿ ಕಾರ್ಯಗಳನ್ನು ನೋಡಿ ವಿದೇಶಗಳಲ್ಲೂ ಡಾಕ್ಟರೇಟ್ ಕೊಟ್ಟು ಗೌರವಿಸಲಾಗಿದೆ ಎಂದರು.
ರಾಜ್ಯದ ಆಳ್ವಿಕೆ ಅಲ್ಲದೆ ಸಂಗೀತ, ಸಾಹಿತ್ಯ, ಕಲೆಗಳನ್ನು ಪ್ರೋತ್ಸಾಹಿಸಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರು ಸ್ವತಃ ಸಾಹಿತ್ಯಾಸಕ್ತಿ ಹೊಂದಿದ್ದರು. ರಚಿಸಿರುವ ಗೀತೆ ಇಂದು ಮೈಸೂರು ಪೊಲೀಸ್ ಬ್ಯಾಂಡ್‌ನಲ್ಲಿ ನುಡಿಸಲಾಗುತ್ತದೆ. ಈ ಇಬ್ಬರು ಮಹಾನ್ ನಾಯಕರ ಜಯಂತಿ ಆಚರಣೆ ಶ್ಲಾಘನೀಯ ಎಂದು ಹೇಳಿದರು.
ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಿದ ಮೈಸೂರು ವಾಣಿಜ್ಯ ಮತ್ತು ಕೈಗಾರಿಕ ಸಂಘದ ಅಧ್ಯಕ್ಷ ಕೆ.ಬಿ.ಲಿಂಗರಾಜು ಮಾತನಾಡಿ, ಅಂದಿನ ಕಾಲದಲ್ಲಿ ರಾಜರು ಮಾಡಿರುವ ಕೆಲಸಗಳನ್ನು ಇಂದಿನ ಸರ್ಕಾರಗಳಿಂದ ಮಾಡಲು ಸಾಧ್ಯವಾಗುತ್ತಿಲ್ಲ. ರಾಜರು ಆಳ್ವಿಕೆ ನಡೆಸಿದ್ದರಿಂದ ಮೈಸೂರು ಸುಂದರ ನಗರವಾಗುತ್ತಿದೆ. ಅದನ್ನು ವಾಣಿಜ್ಯೀಕರಣಗೊಳಿಸದೆ ರಾಜರು ಹಾಕಿಕೊಟ್ಟ ಅಡಿಪಾಯದಂತೆ ಯೋಜನಾ ಬದ್ಧವಾಗಿ ಬೆಳೆಸುವ ಅಗತ್ಯವಿದೆ ಎಂದು ಹೇಳಿದರು.
ಹಿರಿಯ ಸಮಾಜ ಸೇವಕ ಡಾ.ನಟರಾಜ್ ಜೋಯಿಸ್, ಜಯಚಾಮರಾಜೇಂದ್ರ ಒಡೆಯರ್ ಪ್ರಶಸ್ತಿ ಪ್ರದಾನ ಮಾಡಿದರೆ, ಸೆಸ್ಕ್ ಸಹಾಯಕ ಅಭಿಯಂತರ ಮಹೇಂದ್ರ, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಬಾಲಕೃಷ್ಣ, ನಾಲಾಬೀದಿ ರವಿ, ಸಾಲುಂಡಿ ದೊರೆಸ್ವಾಮಿ ಇತರರು ಇದ್ದರು.
ಪ್ರಶಸ್ತಿ ಪ್ರದಾನ: ವಿವಿಧ ಕ್ಷೇತ್ರ ಗಣ್ಯರಿಗೆ ಮಹೇಶ್ (ದೃಶ್ಯ ಮಾಧ್ಯಮ), ಅಂಬಳೆ ಶಿವಣ್ಣ (ವೀರಗಾಸೆ ಕಲಾವಿದರು), ಎನ್.ಎಸ್.ಸತೀಶ್‌ಕುಮಾರ್(ಮುದ್ರಣ ಮಾಧ್ಯಮ), ನರಸಿಂಹನ್ (ಸಮಾಜ ಸೇವೆ) ಅವರಿಗೆ ಜಯಚಾಮರಾಜೇಂದ್ರ ಒಡೆಯರ್ ಪ್ರಶಸ್ತಿ, ಎಂ.ವಿ.ಸಂಜಯ್ ಮೂರ್ತಿ (ಸಮಾಜ ಸೇವೆ), ಎಂ.ಜೆ.ಮಮತಾಶ್ರೀ (ಉದ್ಯಮ), ಶ್ರೀಷಾ ಭಟ್ (ಕ್ರೀಡೆ), ಡಾ.ರದಿ ಉಲ್ಲಾಖಾನ್ (ಕಲಾವಿದ), ಗೋವಿಂದರಾಜು (ಸಮಾಜ ಸೇವೆ) ಅವರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net