ಮೈಸೂರು: ಮೊಬೈಲ್ ಎಷ್ಟು ಬೇಕೋ ಅಷ್ಟು ಬಳಸಿದರೆ ಉಪಯುಕ್ತ. ಅನಗತ್ಯವಾಗಿ ಬಳಸಿದರೆ ಹಾನಿಕಾರಕ. ಈ ಬಗ್ಗೆ ಮಕ್ಕಳಿಗೆ ಪಾಲಕರು ಮನವರಿಕೆ ಮಾಡಿಕೊಡಬೇಕು ಎಂದು ವಿಜಯನಗರ ಎಸಿಪಿ ರವಿಪ್ರಸಾದ್ ಕಿವಿಮಾತು ಹೇಳಿದರು.
ನೇಪಥ್ಯ ರಂಗ ತಂಡದ ವತಿಯಿಂದ ‘ಹಾಡು ಆಟ ಆಡು’ ಶೀರ್ಷಿಕೆಯಲ್ಲಿ ನಗರದ ಕಿರುರಂಗಮಂದಿರದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳ ಮೇಲೆ ಪಾಲಕರು ನಿಗಾ ವಹಿಸಬೇಕು. 14 ವರ್ಷದ ಮಕ್ಕಳು ಕೂಡ ಕೊಕೇನ್, ಸಲ್ಯೂಷನ್ ಮೊದಲಾದ ಮಾದಕ ವಸ್ತುಗಳನ್ನು ಸೇವಿಸುವುದು ಕಂಡು ಬರುತ್ತಿದೆ. ಆದ್ದರಿಂದ ಮಕ್ಕಳಿಗೆ ಸ್ವಲ್ಪ ಸಮಯ ನೀಡಿ, ಏನು ಮಾಡುತ್ತಾರೆ. ಎಲ್ಲಿಗೆ ಹೋಗುತ್ತಾರೆ. ಯಾರೊಂದಿಗೆ ಇರುತ್ತಾರೆ ಎಂಬುದನ್ನು ಗಮನಿಸಿ, ಆ ಮೂಲಕ ದಾರಿ ತಪ್ಪದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ನಿರಂತರ ರಂಗತಂಡದ ಎ.ಎಂ.ಸುಗುಣ ಮಾತನಾಡಿ, ಪ್ರಸ್ತುತ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಯಾವುದರ ಬಗ್ಗೆಯೂ ಕುತೂಹಲವೇ ಇಲ್ಲದಂತಾಗಿದೆ ಎಂದು ವಿಷಾದಿಸಿದರು.
ಕೃತಕ ಬುದ್ಧಿಮತ್ತೆಯಿಂದ ಸೃಜನಶೀಲತೆ ಮತ್ತು ಸಂವೇದನೆ ನಾಶ ಮಾಡಲಾಗದು. ಮಕ್ಕಳಿಗೆ ಬೇಕಾದ ಸೃಜನಶೀಲತೆ ಮತ್ತು ಸಂವೇದನೆಯನ್ನು ರಂಗಭೂಮಿ ಕಲಿಸಿಕೊಡುತ್ತದೆ ಎಂದರು.
ರೋಟರ್ಯಾಕ್ಟ್ ಕ್ಲಬ್ ಡಿಆರ್‌ಸಿಸಿ ಶಕುಂತಲಾ ಎಲಿಜಾಬೆತ್ ಮಾತನಾಡಿ, ಮಕ್ಕಳಿಂದ ಹಿರಿಯರವರೆಗೆ ಡಿಜಿಟಲ್ ಅಡಿಕ್ಷನ್ ಕಂಡುಬರುತ್ತಿದೆ. ಇಂತಹ ಪರಿಸ್ಥಿತಿಯಿಂದ ಹೊರಬರಲು ಬೇಸಿಗೆ ಶಿಬಿರಗಳು ನೆರವಾಗುತ್ತವೆ ಎಂದರು.
ರಂಗಕರ್ಮಿ ದೀಪಕ್ ಮೈಸೂರು ಮಾತನಾಡಿ, ಮಕ್ಕಳನ್ನು ವಾರಕ್ಕೊಮ್ಮೆ ಗ್ರಂಥಾಲಯಗಳಿಗೆ, ಆಟದ ಮೈದಾನಗಳಿಗೆ ಕರೆದುಕೊಂಡು ಹೋಗಬೇಕು. ಜತೆಗೆ ಅವರಲ್ಲಿನ ಆಸಕ್ತಿ ಗುರುತಿಸಿ, ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ರೋಟರಿ ಜಿಲ್ಲಾ ಗೌರ್ನರ್ ಯಶಸ್ವಿ ಸೋಮಶೇಖರ್ ಮಾತನಾಡಿ, ನೇಪಥ್ಯ ರಂಗತಂಡದಲ್ಲಿರುವವರು ನಮ್ಮ ಕ್ಲಬ್‌ನಲ್ಲಿಯೂ ಇದ್ದು, ಮಕ್ಕಳನ್ನು ಸರಿದಾರಿಗೆ ತೆಗೆದುಕೊಂಡು ಹೋಗುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಮೊದಲೆಲ್ಲಾ ಬೇಸಿಗೆ ಬಂದರೆ ಮಕ್ಕಳು ಅಜ್ಜ- ಅಜ್ಜಿಯ ಮನೆಗೆ ಹೋಗುತ್ತಿದ್ದರು. ಈ ಸಂಪರ್ಕ ಯುಗದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಪತಿ-ಪತ್ನಿ- ಮಗ ಮೂವರೇ ಒಂದು ಕುಟುಂಬ ಎಂಬಂತೆ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ನಗರ ಪ್ರದೇಶದವರು ಮಕ್ಕಳನ್ನು ಬೇಸಿಗೆ ಶಿಬಿರಗಳಿಗೆ ಕಳುಹಿಸಿ, ಕಲೆ, ಸಂಸ್ಕೃತಿ ಬಗ್ಗೆ ತಿಳಿಸುತ್ತಿರುವುದು ಉತ್ತಮವಾದುದು ಎಂದರು.
ನೇಪಥ್ಯ ರಂಗ ತಂಡದ ಭಾರ್ಗವಿ ಹಾಗೂ ಚಂದನ್, ಗೌತಮ್, ಸಂತೋಷ್, ಸಾಗರ್ ಮೊದಲಾದವರು ಇದ್ದರು. ಮಕ್ಕಳು ಪ್ರಾರ್ಥಿಸಿದರು. ನಂತರ ಎರಡು ನಾಟಕ, ನೃತ್ಯ, ಜನಪದ ಗೀತೆಗಳನ್ನು ಪ್ರಸ್ತುತಪಡಿಸಿದರು.