ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಂಸ್ಥಾಪನಾ ದಿನಾಚರಣೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ನಗರದಲ್ಲಿ ಆಯೋಜಿಸಿದ್ದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ-2026ಕ್ಕೆ ಜಿ.ಟಿ.ದೇವೇಗೌಡ ಚಾಲನೆ ನೀಡಿದರು. ಶಿವರಾಜೇಗೌಡ, ಶಿವಪ್ರಕಾಶ್, ಎಂ.ರಾಜೇಶ್ ಮಲ್ಲೇಗೌಡ, ಸತೀಶ್ ಬೋರೆ, ರಾಜೇಶ್, ಮಹದೇವಸ್ವಾಮಿ ಇತರರು ಇದ್ದರು.
ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ
ಆರೋಗ್ಯವಂತ ದೇಹದಲ್ಲಿ ಆರೋಗ್ಯವಂತ ಮನಸ್ಸು ಇರಲು ಸಾಧ್ಯ
ಮೈಸೂರು:
ತಮ್ಮ ಬಿಡುವಿಲ್ಲದ ಕೆಲಸದ ಮಧ್ಯೆ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ನಗರದ ರಾಜರಾಜೇಶ್ವರಿ ನಗರದ ಸ್ಪೊರ್ಟ್ಸ್ ಪಾರ್ಕ್‌ನಲ್ಲಿ ಕೆಎಸ್‌ಆರ್‌ಟಿಸಿ ಗೆಳೆಯರ ಬಳಗದಿಂದ ಆಯೋಜಿಸಿದ್ದ ನಾಲ್ಕನೇ ವರ್ಷದ ರಾಜ್ಯ ಮಟ್ಟದ ಸಾರಿಗೆ ನೌಕರರ ಒಳಾಂಗನ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ-2026ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸದಾ ದೇಹದ ಶ್ರಮದ ಕೆಲಸ ಮಾಡುವ ಸಾರಿಗೆ ಸಂಸ್ಥೆಯ ಚಾಲಕ, ನಿರ್ವಾಹಕರು ಹಾಗೂ ಇನ್ನಿತರ ತಾಂತ್ರಿಕ ಕೆಲಸದಲ್ಲಿ ತೊಡಗಿರುವವವರು ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ ಎಂದರು.
ಬಿಡುವಿಲ್ಲದ ಕೆಲಸ ಮಾಡುವವವರು ಸ್ವಲ್ಪ ಸಮಯ ಸಿಕ್ಕರೂ ವಿರಮಿಸಬೇಕಿರುತ್ತದೆ. ಅದರ ನಡುವೆಯೂ ಸಿಕ್ಕ ಸಮಯದಲ್ಲಿ ಕ್ರೀಡೆಯಲ್ಲಿ ತೊಡಗಿಸಿಕೊಂಡು ರಾಜ್ಯಮಟ್ಟದ ಕ್ರೀಡಾಕೂಟ ಆಯೋಜಿಸುತ್ತಿರುವುದು ಮಾದರಿ ಬೆಳವಣಿಗೆಯಾಗಿದೆ ಎಂದರು.
ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿ, ದೈನಂದಿನ ಜೀವನದಲ್ಲಿ ಕ್ರೀಡೆ ಅಥವಾ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಶರೀರ ಮತ್ತು ಮನಸ್ಸು ಸದೃಢವಾಗುತ್ತದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಿ, ಹೃದಯದ ಆರೋಗ್ಯವನ್ನು ಕಾಪಾಡುತ್ತದೆ, ತೂಕವನ್ನು ಸಮತೋಲನದಲ್ಲಿಡುತ್ತದೆ. ಒತ್ತಡವನ್ನು ತಗ್ಗಿಸಿ ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ ಎಂದರು.
ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದ ಸಂಸ್ಥಾಪಕ ಎಸ್.ಬಸವರಾಜು ಮಾತನಾಡಿ, ಆರೋಗ್ಯವಂತ ದೇಹದಲ್ಲಿ ಆರೋಗ್ಯವಂತ ಮನಸ್ಸು ಇರಲು ಸಾಧ್ಯ ಎಂಬ ದಾರ್ಶನಿಕರ ಅನುಭವ ವಾಣಿಯಂತೆ ಮನುಷ್ಯನ ದೇಹ ಮತ್ತು ಮನಸ್ಸುಗಳು ದೃಢತೆ ಹೊಂದಲು ಕ್ರಿಡಾ ಚಟುವಟಿಕೆ ರೂಢಿಸಿಕೊಳ್ಳುವುದು ಅಗತ್ಯ ಎಂದು ಹೇಳಿದರು.
ಬಸವ ಮಾರ್ಗದಲ್ಲಿ ಆ.9ರಿಂದ 59ನೇ ಕುಡಿತ ಬಿಡಿಸುವ ಶಿಬಿರ ಆಯೋಜಿಸಲಾಗುತ್ತಿದೆ. ಕೆಎಸ್‌ಆರ್‌ಟಿಸಿ ನಿಗಮದ ನೌಕರರಲ್ಲಿ ಯಾರಾದರೂ ವ್ಯಸನಕ್ಕೆ ತುತ್ತಾಗಿದ್ದರೆ ಅವರಿಗೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ಸಾರಿಗೆ ಇಲಾಖೆಯಲ್ಲಿ ನಾನಾ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ ನೌಕರರನ್ನು ಸನ್ಮಾನಿಸಲಾಯಿತು. ನಿಗಮದ ಅಧಿಕಾರಿಗಳಾದ ಶಿವರಾಜೇಗೌಡ, ಶಿವಪ್ರಕಾಶ್, ಎಂ.ರಾಜೇಶ್ ಮಲ್ಲೇಗೌಡ, ಸತೀಶ್ ಬೋರೆ, ಕಾರ್ಮಿಕ ಮುಖಂಡ ರಾಜೇಶ್, ರಕ್ತದಾನಿ ಮಹದೇವಸ್ವಾಮಿ ಇತರರು ಇದ್ದರು.