ಆಂಗ್ಲಕ್ಕಿಂತ ಕನ್ನಡ ಸ್ಪಷ್ಟ, ಸುಂದರ ಭಾಷೆ

ನಗರದ ಕ್ರಾಫರ್ಡ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನಿವೃತ್ತ ಪ್ರಾಧ್ಯಾಪಕ ಪ್ರೊ.ಎಂ.ಕೃಷ್ಣೇಗೌಡ ಉದ್ಘಾಟಿಸಿದರು. ಪ್ರೊ.ಎನ್.ಕೆ.ಲೋಕನಾಥ್, ಎಂ.ಕೆ.ಸವಿತಾ ಇದ್ದರು.
ನಗರದ ಕ್ರಾಫರ್ಡ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನಿವೃತ್ತ ಪ್ರಾಧ್ಯಾಪಕ ಪ್ರೊ.ಎಂ.ಕೃಷ್ಣೇಗೌಡ ಉದ್ಘಾಟಿಸಿದರು. ಪ್ರೊ.ಎನ್.ಕೆ.ಲೋಕನಾಥ್, ಎಂ.ಕೆ.ಸವಿತಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಇಂಗ್ಲಿಷ್ ಲಾಜಿಕ್ ಇಲ್ಲದ ಭಾಷೆ
  • ಜಾಗತಿಕ ಮಟ್ಟದ ಶ್ರೇಷ್ಠ 25 ಭಾಷೆಗಳಲ್ಲಿ ಕನ್ನಡ ಸಹ ಒಂದು
  • ಕನ್ನಡದ ವಿವೇಕ ದೊಡ್ಡದು. ಹೀಗಾಗಿ ಉಧ್ವಿಗ್ನವಾಗಬಾರದು
ಮೈಸೂರು: ಆಂಗ್ಲಕ್ಕಿಂತ ಕನ್ನಡ ಸುಂದರ, ಸ್ಪಷ್ಟ ಭಾಷೆಯಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಎಂ.ಕೃಷ್ಣೇಗೌಡ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ಕ್ರಾಫರ್ಡ್ ಭವನದ ಸೋಮವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಕುರಿತು ಉಪನ್ಯಾಸ ನೀಡಿದರು.
ಇಂಗ್ಲಿಷ್ ಲಾಜಿಕ್ ಇಲ್ಲದ ಭಾಷೆ. ಶಾಸ್ತ್ರೀಯತೆ ಸ್ಪಷ್ಟತೆಯೂ ಇದಕ್ಕಿಲ್ಲ. ಇದು ಅದ್ಭುತ ಭಾಷೆಯಲ್ಲ. ಆದರೆ, ಇದನ್ನು ಬೆಳೆಸಿದ ಆಂಗ್ಲರು ಮಾತ್ರ ಅದ್ಭುತರು. ಪ್ರಪಂಚದ ಪ್ರಭಾವಿ ಭಾಷೆಯಾಗಿ ಆ ದೇಶದವರು, ಅಲ್ಲಿಯ ವಿಜ್ಞಾನಿಗಳು ಬೆಳೆಸಿದರು. ಬೇರೆ ದೇಶದಲ್ಲೂ ಅದು ಪ್ರಭಾವಿಯಾಗಿ ಅಭಿವೃದ್ಧಿಯಾಗಲೂ ಕಾರಣರಾದರು ಎಂದರು.
‘ಲಾಜಿಕಿಲ್ಲದ ಭಾಷೆ ಇಂಗ್ಲಿಷ್’ ಎಂದು ಬರ್ನಾಡ್ ಷಾ ಹೇಳಿದ್ದಾರೆ. ಆದರೆ, ಈ ದುರ್ಬಲ ಭಾಷೆಯನ್ನು ಪ್ರಪಂಚಾದ್ಯಂತ ಆಂಗ್ಲರು ವಿಸ್ತರಿಸಿದರು. ಇಂಗ್ಲಿಷ್ ಇಲ್ಲದೆ ದೇಶಗಳು ನಡೆಯುವುದಿಲ್ಲ ಎನ್ನುವ ಮಟ್ಟಕ್ಕೆ ಈ ಭಾಷೆಯನ್ನು ಬೆಳೆಸಿದರು. 
ಆದರೆ, ಆಂಗ್ಲ ವರ್ಣವಾಲೆಗಳು 26 ಅಕ್ಷರಗಳು 49 ಶಬ್ದಗಳಲ್ಲಿ ಉಚ್ಚರಿಸಲಾಗುತ್ತದೆ. ಇಂಗ್ಲಿಷ್‌ನ ಒಂದೊಂದು ಪದದ ಉಚ್ಚಾರಣೆ ಒಂದೊಂದು ವಾಕ್ಯದಲ್ಲಿ ಬದಲಾಗುತ್ತದೆ. ಕನ್ನಡ ವರ್ಣಮಾಲೆಯಲ್ಲಿ ಆಯಾ ಅಕ್ಷರದ ಉಚ್ಚಾರಣೆ ಒಂದೇ ಇರಲಿದೆ. ಅದು ಬದಲಾಗಲ್ಲ ಎಂದು ಉದಾಹರಣೆ ಸಹಿತ ವಿವರಿಸಿದರು.
ಕನ್ನಡದಲ್ಲಿ ಅಸ್ಪಷ್ಟತೆ ಇಲ್ಲ. ಇದು ತಾರ್ಕಿಕತೆಯ, ಸುಸಂಗತ ಭಾಷೆಯಾಗಿ ಹೊರಹೊಮ್ಮಿದೆ. ಹೀಗಾಗಿ, ಸುಲಭ, ಸರಳವಾಗಿ ಸಂವಹನಕ್ಕೆ ಇದುವೇ ವೇದಿಕೆಯಾಗಿದೆ. ಜಗತ್ತಿನಲ್ಲಿರುವ 4,500 ಭಾಷೆಗಳ ಪೈಕಿ ಕನ್ನಡ ವಿಶೇಷ ಸ್ಥಾನಮಾನ ಹೊಂದಿದೆ. ಅಮೆರಿಕದ ಸಂಸ್ಥೆಯೊಂದು ನಡೆಸಿದ ಸಂಶೋಧನೆಯಲ್ಲಿ ಜಾಗತಿಕ ಮಟ್ಟದ ಶ್ರೇಷ್ಠ 25 ಭಾಷೆಗಳಲ್ಲಿ ಕನ್ನಡ ಸಹ ಒಂದಾಗಿದೆ ಎಂದು ತಿಳಿಸಲಾಗಿದೆ. ಕನ್ನಡ ಪ್ರಪಂಚದ ಅದ್ಭುತವಾದ, ಅದೃಷ್ಟವಂತ ಭಾಷೆ ಎಂದೂ ಉಲ್ಲೇಖಿಸಲಾಗಿದೆ ಎಂದರು.
ಕನ್ನಡ ಕವಿಗಳು ವಿಶ್ವಕವಿಗಳು. ಅವರು ಕನ್ನಡ ಭಾಷೆಗಷ್ಟೇ ಸೀಮಿತವಾಗಿಲ್ಲ. ದೇಶ, ಮತ, ಸಂಸ್ಕೃತಿ ಮೀರಿದ ಕವಿಗಳು. ಅವರು ಮನುಕುಲಕ್ಕೆ ಅನ್ವಯವಾಗುವಂತಹ ವಿಶ್ವಮಾನದ ಸಂದೇಶದ ಕವಿತೆಗಳನ್ನು ರಚನೆ ಮಾಡಿದ್ದಾರೆ ಎಂದರು.
ಸಾವಿರಾರು ಭಾಷೆಗಳಲ್ಲಿ ವಿದ್ಯಾವಂತರು ವಾತ್ರ ಬರೆದಿದ್ದಾರೆ. ಆದರೆ, ಕನ್ನಡದಲ್ಲಿ ಶಾಲೆಗೆ ಹೋಗದವರು, ಅನಕ್ಷರಸ್ಥರು ಹಾಡುಗಳನ್ನು ಕಟ್ಟಿದ್ದಾರೆ. ಏಕೆಂದರೆ ಈ ಭಾಷೆಯಲ್ಲೇ ಸಂಗೀತ ಗುಣವಿದೆ. ಡಾ.ರಾಜಕುವಾರ್ ಅವರು ವಿಶ್ವವಿದ್ಯಾಲಯದಲ್ಲಿ ಓದಿದವರಲ್ಲ. ಆದರೆ, ಅವರ ಕನ್ನಡ ವಾತನಾಡುವುದನ್ನು ಕೇಳಿದರೆ ರೋಮಾಂಚನವಾಗುತ್ತದೆ ಎಂದು ಭಕ್ತ ಪ್ರಹ್ಲಾದ ಸಿನಿಮಾದ ಸಂಭಾಷಣೆ ಹೇಳಿದರು. 
ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವ ಪದ್ಯದಲ್ಲಿ ದೊಡ್ಡ ಫಿಲಾಸಫಿ ಅಡಗಿದೆ. ಈ ಪದ್ಯವನ್ನು ಮೊದಲಿಗೆ ಓದಿದ್ದು ಮೈಸೂರು ವಿಶ್ವವಿದ್ಯಾಲಯದ ಕ್ಯಾಂಪಸ್ ಉದ್ಘಾಟನೆಯ ಸಂದರ್ಭದಲ್ಲಿ.
ಈ ಪದ್ಯದ ಪ್ರತಿ ಪದವನ್ನು ಕುವೆಂಪು ಬಹಳ ಎಚ್ಚರಿಕೆಯಿಂದ ಬರೆದಿದ್ದಾರೆ. ಸತ್ತಂತಿಹರನ್ನು ಬಡಿದೆಚ್ಚರಿಸು ಎನ್ನುವ ಸಾಲು ಇದೆ. ಇದರ ಅರ್ಥ ಸತ್ತಂತಿಹರನ್ನು ಏಳು ರಾಜ, ಏಳಪ್ಪ ಮೇಲೆ ಎನ್ನುತ್ತ ಪ್ರೀತಿಯಿಂದ ಎಬ್ಬಿಸಬಾರದು. ಹೊದ್ದು ಎಬ್ಬಿಸಬೇಕು. ಸತ್ತಂತಿಹರನ್ನು ಎಚ್ಚರಿಸಿದಾಗ ಮುಂದೆ ಕಚ್ಚಾಡುತ್ತಾರೆ. ಆಗ ಕಚ್ಚಾಡುವವರನ್ನು ಕೂಡಿಸಿ ಒಲಿಸಬೇಕು ಎಂಬುದು ಕವಿಯ ಆಶಯವಾಗಿದೆ ಎಂದು ವಿವರಿಸಿದರು. 
ಪ್ರಸ್ತುತ ಜಗತ್ತಿನಲ್ಲಿ ಅತ್ಯಂತ ಕ್ರೂರ ಸ್ಪರ್ಧೆ ಏರ್ಪಟ್ಟಿದೆ. ನೀವು ಬುದ್ಧಿವಂತರಾಗದಿದ್ದರೆ, ಮೇಧಾವಿಗಳಾಗಿದ್ದರೆ ಒತ್ತರಿಸಿಕೊಂಡು ಹೋಗಲಿದೆ. ಮುಂದಿನ ಕಾಲ ಜ್ಞಾನದ ಕಾಲ. ಕನ್ನಡದ ವಿವೇಕ ದೊಡ್ಡದು. ಹೀಗಾಗಿ ಉಧ್ವಿಗ್ನವಾಗಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಕುಲಸಚಿವೆ ಎಂ.ಕೆ.ಸವಿತಾ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net