ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ‘ಕಾಜಾಣ’ ಭಿತ್ತಿಪತ್ರಿಕೆ ಬಿಡುಗಡೆ
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಗುರುವಾರ ಬಿಎಂಶ್ರೀ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಕಾಜಾಣ’ ಭಿತ್ತಿಪತ್ರಿಕೆಯನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎನ್.ಕೆ.ಲೋಕನಾಥ್ ಬಿಡುಗಡೆಗೊಳಿಸಿದರು. ಪ್ರೊ.ರಾಗೌ, ಪ್ರೊ.ಎಂ. ನಂಜಯ್ಯ ಹೊಂಗನೂರು, ಪ್ರೊ.ಎಸ್.ಡಿ. ಶಶಿಕಲಾ, ಡಾ.ಕೆ.ಪಿ. ಲಲಿತಾ ಇದ್ದರು
ಮೈಸೂರು: ವಿದ್ಯಾರ್ಥಿಗಳ ಪ್ರತಿಭೆ, ಅಧ್ಯಯನಶೀಲತೆ, ಸಾಹಿತ್ಯಾಭಿರುಚಿ ಹಾಗೂ ಸಾಮಾಜಿಕ ಕಾಳಜಿಯನ್ನು ಅನಾವರಣಗೊಳಿ ಸುವ ವೇದಿಕೆಯಾಗಿ ಭಿತ್ತಿಪತ್ರಿಕೆಗಳು ಕಾರ್ಯನಿರ್ವಹಿಸುತ್ತವೆ. ಅವು ಕೇವಲ ಮಾಹಿತಿಯನ್ನು ಪ್ರಕಟಿಸುವ ಮಾಧ್ಯಮಗಳಲ್ಲ; ತರಗತಿಯಲ್ಲಿ ಪಡೆದ ಜ್ಞಾನವನ್ನು ಸಮಾಜದೊಂದಿಗೆ ಹಂಚಿಕೊಳ್ಳುವ ಪರಿಣಾಮಕಾರಿ ಕೊಂಡಿಯಾಗಿವೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎನ್.ಕೆ.ಲೋಕನಾಥ್ ಹೇಳಿದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ವತಿಯಿಂದ ಗುರುವಾರ ಬಿಎಂಶ್ರೀ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಕಾಜಾಣ’ ಭಿತ್ತಿಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಕವಿ ಕುವೆಂಪು ಪ್ರತಿಪಾದಿಸಿದ ವಿಶ್ವಮಾನವ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತುವಲ್ಲಿ ‘ಕಾಜಾಣ’ ಭಿತ್ತಿಪತ್ರಿಕೆ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದರು.
ಶಿಕ್ಷಣದ ನಿಜವಾದ ಶಕ್ತಿ ಹೊಸತನ, ಜ್ಞಾನಾರ್ಜನೆ ಮತ್ತು ಸೃಜನಶೀಲತೆಯಲ್ಲಿದೆ. ಭಿತ್ತಿಪತ್ರಿಕೆಗಳು ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸುವುದರೊಂದಿಗೆ ಬರವಣಿಗೆಯ ಕೌಶಲ್ಯವನ್ನು ವೃದ್ಧಿಸುತ್ತವೆ. ಸಂಶೋಧನಾ ಮನೋಭಾವವನ್ನು ಉತ್ತೇಜಿಸಿ ಸಮಾಜದೊಂದಿಗೆ ಸಕ್ರಿಯ ಸಂಬಂಧವನ್ನು ಬೆಳೆಸುವಲ್ಲಿ ಅವು ಪರಿಣಾಮಕಾರಿ ಮಾಧ್ಯಮಗಳಾಗಿವೆ ಎಂದು ಹೇಳಿದರು.
‘ನಿಚ್ಚಂ ಪೊಸತು’ ಸಂಶೋಧನಾ ವಿದ್ಯಾರ್ಥಿ ವೇದಿಕೆ ಉದ್ಘಾಟಿಸಿದ ವಿದ್ವಾಂಸ ಪ್ರೊ.ರಾಗೌ ಮಾತನಾಡಿ, ನಿಚ್ಚಂ ಪೊಸತು ಪಂಪನ ಕಾವ್ಯದ ಆರಂಭದ ಸಾಲು. ಕಾವ್ಯ ಯಾವತ್ತೂ ಹೊಸತು ಮತ್ತು ಗಂಭೀರವಾದದ್ದು. ಕಾವ್ಯದಲ್ಲಿ ನಾನಾರ್ಥಗಳಿರುತ್ತವೆ. ಕಾವ್ಯ ಸಮುದ್ರದಂತೆ ನವೀಕರಣವಾಗುತ್ತಿರುತ್ತದೆ ಎಂದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಸಂಘಕ್ಕೆ ಮಾನಸಗಂಗೋತ್ರಿಯ ಇತರೆ ವಿಭಾಗಗಳನ್ನು ಸೇರಿಸಿಕೊಳ್ಳಬೇಕು. ಎಲ್ಲರನ್ನು ಒಳಗೊಳ್ಳಬೇಕು. ಇದರಿಂದ ಭಾವೈಕ್ಯ ವೃದ್ಧಿಯಾಗುತ್ತದೆ. ಕನ್ನಡದ ಬೆಳವಣಿಗೆಯಾಗುತ್ತದೆ ಎಂದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಂ. ನಂಜಯ್ಯ ಹೊಂಗನೂರು ಮಾತನಾಡಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಕರ್ನಾಟಕದ ಕನ್ನಡ ಅಧ್ಯಯನ ಕೇಂದ್ರಗಳ ಮಾತೃಸಂಸ್ಥೆಯಾಗಿದೆ. ಕಾಜಾಣ ಭಿತ್ತಿ ಪತ್ರಿಕೆ ಮತ್ತು ನಿಚ್ಚಂ ಪೊಸತು ಸಂಶೋಧನಾ ವಿದ್ಯಾರ್ಥಿ ವೇದಿಕೆ ಚಾರಿತ್ರಿಕ ಮತ್ತು ಸಾಂಸ್ಕೃತಿಕವಾಗಿ ಮಹತ್ತರವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕಿ ಪ್ರೊ.ಎಸ್.ಡಿ. ಶಶಿಕಲಾ, ಕಾಜಾಣ ಭಿತ್ತಿ ಪತ್ರಿಕೆ ಸಂಪಾದಕಿ ಡಾ.ಕೆ.ಪಿ. ಲಲಿತಾ, ಸಹ ಸಂಪಾದಕಿ ಎಚ್.ಪಿ. ಅನಿತಾ, ಡಾ.ಎಚ್.ಪಿ.ಮಂಜು, ವರಹಳ್ಳಿ ಆನಂದ್ ಹಾಗೂ ಇತರರು ಇದ್ದರು.