ಕಬಿನಿ ಜಲಾಶಯ ಭರ್ತಿಯಾಗಿದ್ದರೂ ಅಚ್ಚುಕಟ್ಟು ಭಾಗದ ಕೃಷಿ ಬೆಳೆಗಳಿಗೆ ನೀರುಹರಿಸದೆ, ತಮಿಳುನಾಡಿಗೆ ನೀರು ಬಿಡುತ್ತಿರುವ ಕ್ರಮವನ್ನು ಖಂಡಿಸಿ ರೈತರು ನಗರದಲ್ಲಿ ಎರಡು ಕಡೆ ಪ್ರತ್ಯೇಕವಾಗಿ ತೀವ್ರ ಪ್ರತಿಭಟನೆ ನಡೆಸಿದರು.
ಕಬ್ಬು ಬೆಳೆಗಾರರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು, ಕರ್ನಾಟಕ ರಾಜ್ಯ ರೈತ ಸಂಘದಿಂದ ಕಾಡಾ ಕಚೇರಿ ಪ್ರತಿಭಟನೆ ನಡೆಸಿ ಆಕ್ರೋಶವನ್ನು ಹೊರಹಾಕಲಾಯಿತು.
ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ, ತಾರಕ, ವರುಣ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ಆಗ್ರಹಿಸಿ ರಾಜ್ಯ ರೈತ ಸಂಘದಿಂದ ಕಾಡಾ ಕಚೇರಿಗೆ ಮುತ್ತಿಗೆ ಹಾಕಲಾಯಿತು. ಹಸಿರು ಟವಲ್ ತಿರುಗಿಸಿ ನೀರು ನಿಲ್ಲಿಸಿ ಅಂತ ಕೂಗಿ ಬಾಯಿ ಬಡಿದುಕೊಂಡು ರೈತರು ಆಕ್ರೋಶ ಹೊರಹಾಕಿದರು.
ನಗರದ ಗನ್‌ಹೌಸ್ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಕಾಡಾ ಕಚೇರಿಯತ್ತ ಸಾಗಿತು. ಈ ವೇಳೆ ರೈತರು ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ, ಪೊಲೀಸರು ಮುಖ್ಯದ್ವಾರದಲ್ಲೇ ಅವರನ್ನು ಅಡ್ಡಗಟ್ಟಿದರು. ಇದರಿಂದ ಕುಪಿತಗೊಂಡ ರೈತರು ಕಾಡಾ ಕಚೇರಿ ಸಮೀಪದ ವೃತ್ತದ ನಾಲ್ಕೂ ದಿಕ್ಕುಗಳ ರಸ್ತೆಯಲ್ಲೇ ಕುಳಿತು ಧರಣಿ ನಡೆಸಿದ ವಾಹನಗಳ ಸಂಚಾರವನ್ನು ತಡೆದರು. ಇದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
ಬಳಿಕ ಪೊಲೀಸರು ರೈತರಿಗೆ ಕಾಡಾ ಕಚೇರಿ ಆವರಣಕ್ಕೆ ತೆರಳಲು ಅನುಮತಿ ನೀಡಿದರು. ಕಬಿನಿ, ತಾರಕ, ನುಗು ಜಲಾಶಯಗಳ ಅಚ್ಚುಕಟ್ಟು ಭಾಗದ ಜಮೀನುಗಳಿಗೆ ತಕ್ಷಣವೇ ನೀರು ಹರಿಸಬೇಕೆಂದು ರೈತರು ಪಟ್ಟು ಹಿಡಿದರು.
ಬರದ ನಡುವೆಯೂ ಕಬಿನಿ ಜಲಾಶಯ ತುಂಬಿದೆ. ಕೆರೆಕಟ್ಟೆಗಳನ್ನು ತುಂಬಿಸಲು ನೀರು ಹರಿಸುತ್ತಿರುವುದು ಸ್ವಾಗತಾರ್ಹ. ಆದರೆ, ಅಚ್ಚುಕಟ್ಟುಗಳಿಗೆ ನೀರು ಬಿಡುವ ಬಗ್ಗೆ ಇನ್ನೂ ತೀರ್ಮಾನಿಸದೆ ಇರುವುದು ರೈತರಲ್ಲಿ ಆತಂಕದೊಂದಿಗೆ ಗೊಂದಲವನ್ನೂ ಮೂಡಿಸಿದೆ ಎಂದು ಹೇಳಿದರು.
ಒಳಹರಿವು ತೃಪ್ತಿಕರವಾಗಿದೆ. ಜಲಾಶಯದ ಎಲ್ಲ ಅಚ್ಚುಕಟ್ಟಿಗೂ ನೀರು ಬಿಡಬೇಕು. ತಾರಕ ಜಲಾಶಯಕ್ಕೆ ನೀರು ತುಂಬಿಸಿ ಅಚ್ಚುಕಟ್ಟು ಪ್ರದೇಶಗಳಿಗೂ ನೀರು ಹರಿಸಬೇಕು. ವರುಣ, ಕಾವೇರಿ, ಕಬಿನಿ ಅಚ್ಚುಕಟ್ಟು ವ್ಯಾಪ್ತಿಗೂ ನೀರು ಬಿಡಬೇಕು ಎಂದು ಆಗ್ರಹಿಸಿದರು
ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಮಂಡ್ಯದ ಹೋರಾಟಗಾರರಿಗೆ ಮನ್ನಣೆ ನೀಡುತ್ತಾರೆ. ಮೈಸೂರು ಭಾಗದ ರೈತರಿಗೆ ಏಕೆ ಸ್ಪಂದಿಸಲ್ಲ. ನಾವು ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯಲ್ಲ. ಡ್ಯಾಂ ನಿರ್ಮಾಣಕ್ಕಾಗಿ ಆದಿವಾಸಿಗಳು ನಿವಾಸ ಕಳೆದುಕೊಂಡಿದ್ದಾರೆ. 42 ಗ್ರಾಮಗಳು ಮುಳುಗಡೆ ಆಗಿವೆ. ಮನೆ, ಮಠ ಕಳೆದುಕೊಂಡಿದ್ದಾರೆ. ಕಬಿನಿ ಅಚ್ಚುಕಟ್ಟು ಪ್ರದೇಶದ ರೈತರ ಹಿತ ಕಾಯಿರಿ ಎಂದು ಆಗ್ರಹಿಸಿದರು.
ಯಾವುದೇ ರಾಜಕಾರಣಿಗಳು ಇದರ ಬಗ್ಗೆ ಗಮನಹರಿಸಲ್ಲ. ರೈತರ ಹಿತವನ್ನು ಯಾರೂ ಕಾಪಾಡಲಿಲ್ಲ. ರೈತರ ಹಿತ ಕಾಯದಿದ್ದರೆ ಡಿ.ಕೆ. ಶಿವಕುಮಾರ್ ಅವರ ಸಿಎಂ ಕುರ್ಚಿ ಕಿತ್ತುಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಕಬಿನಿ ಜಲಾಶಯ ನಿರ್ಮಿಸಿರುವುದು ತಮಿಳುನಾಡಿಗೆ ನೀರು ಬಿಡಲು, ಬೆಂಗಳೂರಿಗೆ ಕುಡಿಯುವ ನೀರಿನ ಅಗತ್ಯಕ್ಕಾಗಿ ಮಾತ್ರವೇ ಹೊರತು ರೈತರ ಹಿತರಕ್ಷಣೆಗಾಗಿ ಅಲ್ಲವೇ? ಸರ್ಕಾರ ಸಭೆ ಕರೆದಿದ್ದು, ರೈತರ ಬೆಳೆಗಳಿಗೆ ನೀರು ಕೊಡುವ ವಿಶ್ವಾಸವಿದೆ. ಒಂದು ವೇಳೆ ಅಚ್ಚುಕಟ್ಟು ಭಾಗದ ರೈತರ ಜಮೀನುಗಳಿಗೆ ನೀರು ಹರಿಸದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು. ನಮ್ಮ ಪಾಲಿನ ನೀರನ್ನು ನಾವು ಪಡೆದೇ ತೀರುತ್ತೇವೆ ಎಂದು ಗುಡುಗಿದರು.
ಸಂಘದ ಉಪಾಧ್ಯಕ್ಷ ಎ.ಎಲ್.ಕೆಂಪುಗೌಡ, ವಿಭಾಗೀಯ ಸಂಘಟನಾ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಸಿದ್ದರಾಜು, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಮರಂಕಯ್ಯ, ಮುಖಂಡರಾದ ಪಳನಿಸ್ವಾಮಿ, ಎಂ.ಜೆ.ಮಲ್ಲೇಶ್, ಪ್ರಕಾಶ್ ರಾಜೇ ಅರಸ್, ಈಶ್ವರ್, ಪುಟ್ಟಣ್ಣಯ್ಯ, ಆನಂದೂರು ಪ್ರಭಾಕರ್, ಕೆ.ಆರ್.ಪುರ ಮಹೇಶ್, ಕರೋಟಿ ಕುಮಾರಸ್ವಾಮಿ, ಬೆಂಕಿಪುರ ಚಿಕ್ಕಣ್ಣ, ರವಿಕುಮಾರ್, ಪ್ರೇಮ್ ಕುಮಾರ್, ಮುದ್ದುರಾಜು ಕಂದಗಾಲ ಶ್ರೀನಿವಾಸ್ ಇನ್ನಿತರರಿದ್ದರು
ಬೇಕೇ ಬೇಕು... ಬೆಳೆಗಳಿಗೆ ನೀರು ಬೇಕು...
ರಾಜ್ಯ ಕಬ್ಬುಬೆಳೆಗಾರರ ಸಂಘ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ ನೇತೃತ್ವದಲ್ಲಿ ನೂರಾರು ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬೇಕೇ ಬೇಕು ನ್ಯಾಯ ಬೇಕು, ರೈತರ ಬೆಳೆಗಳಿಗೆ ನೀರು ಬೇಕು, ತಮಿಳುನಾಡಿಗೆ ನೀರುಹರಿಸುವುದನ್ನು ತಕ್ಷಣ ನಿಲ್ಲಿಸಿ ಎಂದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಕಬಿನಿ ಜಲಾಶಯ ಭರ್ತಿಯಾಗಿ 25 ದಿನ ಕಳೆದರೂ ಕೃಷಿ ಬೆಳೆಗಳಿಗೆ ನೀರು ನೀಡಿಲ್ಲ. ತಮಿಳುನಾಡಿಗೆ ನೀರು ಹರಿಸಿದ ಪರಿಣಾಮ ಜಲಾಶಯದ ನೀರಿನ ಮಟ್ಟ 10 ಅಡಿಗಳಷ್ಟು ಕುಸಿದಿದೆ. ಈಗ ರೈತರನ್ನು ಕತ್ತಲಲ್ಲಿಟ್ಟು ಬೆಂಗಳೂರಿನಲ್ಲಿ ಸಭೆ ಕರೆಯುತ್ತಿರುವುದು ರೈತ ದ್ರೋಹಿ ನಡವಳಿಕೆ. ಕಬಿನಿ-ಕಾವೇರಿ ಜಲಾಶಯಗಳು ನಿರ್ಮಾಣವಾಗಿದ್ದು ರಾಜ್ಯದ ರೈತರ ಹಿತಕ್ಕಾಗಿ ಎಂಬುದನ್ನು ಮರೆತು, ಸರ್ಕಾರವು ತಮಿಳುನಾಡಿನ ನೀರುಗಂಟಿಯಂತೆ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಿ, ಸ್ಥಳೀಯ ಬೆಳೆಗಳಿಗೆ ನೀರು ಹರಿಸಬೇಕು. ಇಲ್ಲದಿದ್ದರೆ ರೈತರೇ ಕಬಿನಿ ಜಲಾಶಯವನ್ನು ವಶಕ್ಕೆ ಪಡೆಯಲಿದ್ದಾರೆ ಎಂದು ಎಚ್ಚರಿಸಿದರು.
ರೈತ ಮುಖಂಡ ಅತ್ತಳ್ಳಿ ದೇವರಾಜ್ ಮಾತನಾಡಿ, ಕಾವೇರಿ, ಕಬಿನಿ ಅಚ್ಚುಕಟ್ಟು ಭಾಗದ ರೈತರ ಅಹವಾಲು ಆಲಿಸಲು ಸಭೆ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮೈಸೂರಿನಲ್ಲೇ ಸಭಾಂಗಣ ಸಿಗಲಿಲ್ಲವೇ? ಬೆಂಗಳೂರಿನಲ್ಲಿ ಸಭೆ ಕರೆದಿರುವುದು ಏಕೆ? ಎಂದು ಪ್ರಶ್ನಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಬೆಂಗಳೂರಿನಲ್ಲಿ ನಡೆಯಲಿರುವ ಸಭೆಗೆ ತೆರಳುತ್ತಿದ್ದು, ಪ್ರತಿಭಟನಾನಿರತ ರೈತರ ಅಭಿಪ್ರಾಯ, ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಎಂದು ಭರವಸೆ ನೀಡಿದರು.