ಏರೋ-ಮೆಡಿಕಲ್ ಸೈನ್ಸ್ ಫೆಲೋಶಿಪ್ ಪಠ್ಯಕ್ರಮಕ್ಕೆ ಅಧಿಕೃತ ಮಾನ್ಯತೆ
ಮೈಸೂರು: ಭಾರತ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಕೀರ್ಣ ತುರ್ತು ಚಿಕಿತ್ಸಾ ಸಾರಿಗೆಯನ್ನು ಬಲಪಡಿಸುವ ಉದ್ದೇಶದಿಂದ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಗೆ ಐಕ್ಯಾಟ್ ಅಭಿವೃದ್ಧಿಪಡಿಸಿದ ಏರೋ-ಮೆಡಿಕಲ್ ಸೈನ್ಸ್ ಫೆಲೋಶಿಪ್ ಪಠ್ಯಕ್ರಮಕ್ಕೆ ಅಧಿಕೃತ ಮಾನ್ಯತೆ ಲಭಿಸಿದೆ.
ಇದರ ಅಂಗವಾಗಿ ಮೈಸೂರಿನಲ್ಲಿ ವಿಶ್ವದ ವಿವಿಧ ದೇಶಗಳಿಂದ ಆಗಮಿಸಿರುವ 25 ವೈದ್ಯರು ಮತ್ತು ಪ್ಯಾರಾ ಮೆಡಿಕಲ್ ಸಿಬ್ಬಂದಿಗೆ ಸುಧಾರಿತ ತರಬೇತಿ ನೀಡಲಾಗುತ್ತಿದೆ.
ಪ್ರಸ್ತುತ ಮೈಸೂರು ವಿಮಾನ ನಿಲ್ದಾಣ ಪ್ರಾಧಿಕಾರದ ಆವರಣದಲ್ಲಿ ನಡೆಯುತ್ತಿರುವ ಈ ತರಬೇತಿ ಕಾರ್ಯಕ್ರಮವು ವೈದ್ಯಕೀಯ ವೃತ್ತಿಪರರನ್ನು ಹೆಲಿಕಾಪ್ಟರ್ ಮತ್ತು ವಿಮಾನಗಳ ಮೂಲಕ ಅತ್ಯಾಧುನಿಕ ಜೀವ ರಕ್ಷಣಾ ಚಿಕಿತ್ಸೆ ನೀಡಲು ಸಜ್ಜುಗೊಳಿಸುತ್ತದೆ. ವಿಶೇಷವಾಗಿ ಗಂಭೀರ ಸ್ಥಿತಿಯ ರೋಗಿಗಳ ತ್ವರಿತ ಹಾಗೂ ಸುರಕ್ಷಿತ ವರ್ಗಾವಣೆಗೆ ಅಗತ್ಯವಾದ ತಾಂತ್ರಿಕ ಹಾಗೂ ವೈದ್ಯಕೀಯ ಕೌಶಲವನ್ನು ಇಲ್ಲಿ ಅಭ್ಯಾಸ ಮಾಡಲಾಗುತ್ತಿದೆ.
ಎಂಟು ವರ್ಷಗಳ ಹಿಂದೆ ತುರ್ತು ಚಿಕಿತ್ಸಾ ತಜ್ಞರಾದ ಡಾ. ಶಾಲಿನಿ ನಲ್ವಾಡ್ ಮತ್ತು ಡಾ. ರಾಹುಲ್ ಸಿಂಗ್ ಸರ್ದಾರ್ ಸ್ಥಾಪಿಸಿದ ಐಕ್ಯಾಟ್ ಸಂಸ್ಥೆಯು ಇತ್ತೀಚಿನವರೆಗೆ ಎಕ್ಮೋ ಬೆಂಬಲಿತ ಸಾರಿಗೆ ಸೇರಿ 2500ಕ್ಕೂ ಹೆಚ್ಚು ಸಂಕೀರ್ಣ ರೋಗಿ ವರ್ಗಾವಣೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಈ ಫೆಲೋಶಿಪ್ ಪಠ್ಯಕ್ರಮವನ್ನು ಲಂಡನ್‌ನ ಹೆಲಿಕಾಪ್ಟರ್ ಎಮರ್ಜೆನ್ಸಿ ಮೆಡಿಕಲ್ ಸರ್ವಿಸಸ್ ಸಹ ಯೋಗದೊಂದಿಗೆ ಹಾಗೂ ಯುಕೆ ಕೆಂಟ್, ಸರ್ರೆ, ಸಸೆಕ್ಸ್ ಏರ್ ಅಂಬುಲೆನ್ಸ್ ಚಾರಿಟಿಯ ಬೆಂಬಲದೊಂದಿಗೆ 2 ವರ್ಷಗಳ ಅವಧಿಯಲ್ಲಿ ರೂಪಿಸಲಾಗಿದೆ.
ಕಾರ್ಯಕ್ರಮದ ಮಹತ್ವದ ಬಗ್ಗೆ ಮಾತನಾಡಿದ ಡಾ.ಶಾಲಿನಿ ನಲ್ವಾಡ್, ವಿಪತ್ತು ನಿರ್ವಹಣೆ ಹಾಗೂ ತುರ್ತು ಕ್ಷಿಪ್ರ ವರ್ಗಾವಣೆಗಳಿಗೆ ಅನುಗುಣವಾಗುವಂತೆ ಜಾಗತಿಕ ಮಟ್ಟದ ಏರೋ-ಮೆಡಿಕಲ್ ತಜ್ಞರ ಹೊಸ ಪೀಳಿಗೆಯನ್ನು ರೂಪಿಸುವುದು ನಮ್ಮ ಉದ್ದೇಶ ಎಂದು ತಿಳಿಸಿದ್ದಾರೆ.