ಜಾತಿಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ

ಕಲಾಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಸ್ಪಶ್ಯತೆ ನಿವಾರಣೆ ಅರಿವು ಕಾರ್ಯಾಗಾರವನ್ನು ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕ ಬಿ.ಬಸವರಾಜು ಉದ್ಘಾಟಿಸಿದರು. ಬಿ.ರಂಗೇಗೌಡ, ಅನುಶ್ರೀ ರಾಣಿ, ಡಾ.ಕೃಷ್ಣಮೂರ್ತಿ ಚಮರಂ ಇನ್ನಿತರರಿದ್ದರು
ಕಲಾಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಸ್ಪಶ್ಯತೆ ನಿವಾರಣೆ ಅರಿವು ಕಾರ್ಯಾಗಾರವನ್ನು ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕ ಬಿ.ಬಸವರಾಜು ಉದ್ಘಾಟಿಸಿದರು. ಬಿ.ರಂಗೇಗೌಡ, ಅನುಶ್ರೀ ರಾಣಿ, ಡಾ.ಕೃಷ್ಣಮೂರ್ತಿ ಚಮರಂ ಇನ್ನಿತರರಿದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕ ಬಿ.ಬಸವರಾಜು ಸಲಹೆ
  • ಅಸ್ಪಶ್ಯತೆ ನಿವಾರಣೆ ಅರಿವು ಕಾರ್ಯಾಗಾರ
 ಮೈಸೂರು: ಸಮಾಜದಲ್ಲಿ ಇಂದಿಗೂ ಜಾತಿ ವ್ಯವಸ್ಥೆ ಇರುವುದು ದುರಂತ. ಇದನ್ನು ನಾವು ನಾಶ ಮಾಡಲು ಮುಂದಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಿ.ಬಸವರಾಜು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಕಲಾಮಂದಿರದಲ್ಲಿ  ಹಮ್ಮಿಕೊಂಡಿದ್ದ ಅಸ್ಪಶ್ಯತೆ ನಿವಾರಣೆ ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. 
ಅಸ್ಪಶ್ಯತೆ ಆಚರಣೆ ಕಾನೂನುಬಾಹಿರ. ಈ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ಗ್ರಾಮೀಣ ಜನತೆಗೆ ಹೆಚ್ಚಿನ ಮಾಹಿತಿಯನ್ನು ತಿಳಿಸುವ ಮೂಲಕ ಅಸ್ಪಶ್ಯತೆ ಆಚರಣೆ ನಾಶ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದರು.
ಅಂಬೇಡ್ಕರ್ ಅವರ ಆಶಯದಂತೆ ಸಮಸಮಾಜ ನಿರ್ಮಾಣ ಮಾಡುವಲ್ಲಿ ಮತ್ತು ಅವರು ಹಾಕಿಕೊಟ್ಟಂತಹ ದಾರಿಯಲ್ಲಿ ನಾವು ನಡೆಯಬೇಕು. ಜಾತಿಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕು. ಎಲ್ಲರೂ ಜಾಗೃತರಾಗಬೇಕು ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ.ರಂಗೇಗೌಡ ಮಾತನಾಡಿ, ಸಮಾಜದಲ್ಲಿನ ಅಸ್ಪಶ್ಯತೆಯನ್ನು ತಡೆಯಲು ಇಂದು ನಾಗರಿಕ ಹಕ್ಕು ನಿರ್ದೇಶನಾಲಯವನ್ನು ರಚಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯಿಂದ 1975ರಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯನ್ನು ಬೇರ್ಪಡಿಸಲಾಗಿದೆ ಎಂದು ತಿಳಿಸಿದರು.
ಸಮಾಜದಲ್ಲಿ ಅಸ್ಪಶ್ಯತೆ ಆಚರಣೆ ಮಾಡದಂತೆ ಪ್ರತಿಯೊಂದು ಮನೆ ಮನೆಗೂ ಮಾಹಿತಿ ತಲುಪಿಸಬೇಕು. ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದೆ ತರುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಕೆಲಸ ಬಹಳ ಪ್ರಾಮುಖ್ಯವಾದದ್ದು ಎಂದರು.
ನಾಗರಿಕ ಸಮಾಜದಲ್ಲಿ ಈಗಲೂ ಮೇಲು-ಕೇಳು ಎಂಬ ಜಾತಿ ತಾರತಮ್ಯ ತುಂಬಿದೆ. ಇದನ್ನು ನಾಶ ಮಾಡಲು ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸೋಣ. ಅಸ್ಪಶ್ಯತೆ ಆಚರಣೆ ಮಾಡದಂತೆ ಸರ್ಕಾರದಿಂದ ಹಲವಾರು ಕಾಯ್ದೆಗಳು ಮತ್ತು ಶಿಕ್ಷೆ ಜಾರಿಗೆ ತರಲಾಗಿದೆ ಎಂದು ಹೇಳಿದರು.
ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಉಪ ಪೊಲೀಸ್ ವರಿಷ್ಠಾಧಿಕಾರಿ ಅನುಶ್ರೀ ರಾಣಿ ಮಾತನಾಡಿ, ಅಸ್ಪಶ್ಯತೆ ಆಚರಣೆ ಮಾಡುವುದು ಕಾನೂನು ಬಾಹಿರ. ಎಸ್‌ಸಿ-ಎಸ್‌ಟಿ ಜನರನ್ನು ರಕ್ಷಣೆ ಮಾಡಲು ಅಸ್ಪಶ್ಯತೆಯನ್ನು ಹೋಗಲಾಡಿಸಲು ಸಂವಿಧಾನದಲ್ಲಿ ಹಲವಾರು ರೀತಿಯ ಕಾಯ್ದೆ ಜಾರಿಗೆ ತರಲಾಗಿದೆ. ಇದನ್ನು ಬಳಕೆ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
ಹಿಂದಿನ ಕಾಲದಲ್ಲಿ ವರ್ಣಭೇದ ವ್ಯವಸ್ಥೆಯಿಂದ ತುಂಬಿತ್ತು. ಎಲ್ಲರಿಗೂ ಶಿಕ್ಷಣವನ್ನು ಪಡೆಯುವ ಹಕ್ಕಿರಲಿಲ್ಲ. ಜ್ಞಾನದ ಕೊರತೆ ಹೊಂದಿದ್ದರು. ಆದರೆ ಇಂದು ಎಲ್ಲರೂ ಸರಿಸಮಾನವಾಗಿ ಶಿಕ್ಷಣ ಪಡೆಯುತ್ತಿದ್ದಾರೆ. ತಾರತಮ್ಯವೂ ಕಡಿಮೆಯಾಗಿದೆ ಎಂದು ಹೇಳಿದರು.
ಅನುಸೂಚಿತ ಜಾತಿ ಅಥವಾ ಅನುಸೂಚಿತ ಬುಡಕಟ್ಟಿಗೆ ಸೇರಿದ ವ್ಯಕ್ತಿಯ ಮೇಲೆ ಯಾವುದೇ ಅಪರಾಧ ಕೃತ್ಯವನ್ನು ಎಸಗಿದರೆ ಭಾರತೀಯ ದಂಡ ಸಂಹಿತೆ (1980ರ 45)ರ ಅಡಿಯಲ್ಲಿ ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗುತ್ತದೆ ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದರೂ ಇಂದಿಗೂ ಎಸ್‌ಸಿ-ಎಸ್‌ಟಿ ಜನಾಂಗವನ್ನು ಕೆಲವು ಕಡೆ ದೇವಸ್ಥಾನದ ಒಳಗೆ ಸೇರಿಸುವುದಿಲ್ಲ. ನಾವು ಅಂತ ಜನರಿಗೆ ಸಮುದಾಯಗಳಿಗೆ ಇಂದಿನ ಕಾನೂನು ವ್ಯವಸ್ಥೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿ ಅವರನ್ನು ದೇವಸ್ಥಾನಕ್ಕೆ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗಿದೆ ಎಂದರು.
ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಗ್ರಾಮೀಣ ಪ್ರದೇಶಗಳಲ್ಲಿ ತಪ್ಪು ಕೆಲಸಗಳು ಕಂಡು ಬಂದರೆ ಅದನ್ನು ತಡೆಯುವುದು ನಿಮ್ಮ ಮೊದಲ ಕೆಲಸವಾಗಿರುತ್ತದೆ. ನಂತರ ಮುಂದಿನ ಕೆಲಸ ನಮ್ಮ ಪೊಲೀಸ್ ಇಲಾಖೆಯು ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಾನೂನಿನ ಮೂಲಕ ಶಿಕ್ಷೆ ನೀಡಲಾಗುತ್ತದೆ ಎಂದು ಹೇಳಿದರು.
ಸಹಾಯಕ ಪ್ರಾಧ್ಯಾಪಕ, ಚಿಂತಕ ಡಾ.ಕೃಷ್ಣಮೂರ್ತಿ ಚಮರಂ, ಜಿಲ್ಲೆಯ ಎಲ್ಲ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು, ಅನಿಕೇತನ ಕಲಾಬಳಗದವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net