ಯೋಗ ದಿನ ಯಶಸ್ಸಿಗೆ ಕೈ ಜೋಡಿಸಿ

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಯೋಗ ದಿನದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಆರ್.ಐಶ್ವರ್ಯ, ಡಾ.ರೇಣುಕಾ ದೇವಿ, ಶ್ರೀಹರಿ, ರಾಘವೇಂದ್ರ, ಪ್ರಭು ಇತರರಿದ್ದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಯೋಗ ದಿನದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಆರ್.ಐಶ್ವರ್ಯ, ಡಾ.ರೇಣುಕಾ ದೇವಿ, ಶ್ರೀಹರಿ, ರಾಘವೇಂದ್ರ, ಪ್ರಭು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಮನವಿ
  • ಪೋಸ್ಟರ್ ಬಿಡುಗಡೆ
ಜಿಲ್ಲಾಡಳಿತ ವತಿಯಿಂದ ಜೂ.21ರಂದು ಮೈಸೂರು ಅರಮನೆ ಆವರಣದಲ್ಲಿ ಅಂತಾರಾಷ್ಟ್ರೀಯ 12ನೇ ಯೋಗ ದಿನ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಜೂ.21ರಂದು ಬೆಳಗ್ಗೆ 6 ರಿಂದ 8ರವರೆಗೆ ವಿವಿಧ ಆಸನ ಪ್ರದರ್ಶಿಸಲಾಗುವುದು. ಜಿಲ್ಲೆಯ ವಿವಿಧ ಯೋಗ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಕಾರ್ಯಕ್ರಮದಲ್ಲಿ ಯಾವುದಾದರೂ ಹೊಸತನವನ್ನು ತರಬಯಿಸಿದರೆ, ಮುಕ್ತವಾಗಿ ಚರ್ಚಿಸುವಂತೆ ತಿಳಿಸಿದರು.
ಯೋಗದಿನ ಆಯೋಜನೆಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಅಗತ್ಯ ವ್ಯವಸ್ಥೆ ಕಲ್ಪಿಸುವ ಮೂಲಕ ಯೋಗ ದಿನವನ್ನು ಯಶಸ್ವಿಗೊಳಿಬೇಕು. ಮುಖ್ಯವಾಗಿ ಮೈಸೂರು ಮಹಾನಗರ ಪಾಲಿಕೆಯಿಂದ ಅರಮನೆ ಆವರಣದ ಸ್ವಚ್ಛತೆ ಕಾಪಾಡಬೇಕು. ಜತೆಗೆ ಯೋಗ ಪ್ರದರ್ಶನದಲ್ಲಿ ಭಾಗವಹಿಸುವ ಎಲ್ಲರಿಗೂ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಇದರಲ್ಲಿ ಲೋಪ ಆಗಬಾರದು ಎಂದರು.
ಅರಮನೆ ಮಂಡಳಿಯಿಂದ ಉತ್ತಮವಾದ ವೇದಿಕೆ ನಿರ್ಮಾಣ ಮಾಡಬೇಕು. ಧ್ವನಿವರ್ಧಕ ವ್ಯವಸ್ಥೆ ಕಲ್ಪಿಸಬೇಕು. ವೇದಿಕೆಯಲ್ಲಿ ಯಾವುದೇ ಸಮಸ್ಯೆಗಳು ಆಗಬಾರದು ಎಂದು ಸೂಚನೆ ನೀಡಿದರು.
ಯೋಗಾಭ್ಯಾಸಕ್ಕೆ ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು. ಯಾರಿಗೂ ಸಮಸ್ಯೆಯಾಗದಂತೆ ನಿರ್ವಹಣೆ ಮಾಡಬೇಕು. ಮುಖ್ಯವಾಗಿ ಅಂದು ಅರಮನೆ ಸುತ್ತ ಟ್ರಾಫಿಕ್ ಸಮಸ್ಯೆ ನಿರ್ವಹಣೆ ಮಾಡಬೇಕು ಎಂದು ಸೂಚಿಸಿದರು.
ಯೋಗವನ್ನು ಯೋಗದಿನಕ್ಕೆ ಮಾತ್ರ ಸೀಮಿತಗೊಳಿಸದೆ ಪ್ರತಿದಿನ ಅಳವಡಿಸಿಕೊಳ್ಳಬೇಕು. ಯೋಗದ ವಿವಿಧ ಆಸನಗಳಿಂದ ದೇಹದ ಎಲ್ಲ ಸ್ನಾಯು ಹಾಗೂ ನರಗಳಿಗೆ ವ್ಯಾಯಾಮ ನೀಡಿ ಆರೋಗ್ಯಯುತ ಜೀವನಕ್ಕೆ ಸಹಾಯಕವಾಗುತ್ತದೆ ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ರೇಣುಕಾ ದೇವಿ ಮಾತನಾಡಿ, ವಿವಿಧ ಯೋಗ ಸಂಸ್ಥೆಗಳ ಸಹಯೋಗದಲ್ಲಿ ಪ್ರತಿ ಭಾನುವಾರ ಒಂದೊಂದು ಸ್ಥಳದಲ್ಲಿ ಪೂರ್ವಭಾವಿಯಾಗಿ ಯೋಗಾಭ್ಯಾಸ ಮಾಡಲಾಗುತ್ತಿದೆ. ಪೂರ್ವಭಾವಿ ಯೋಗಾಭ್ಯಾಸದಲ್ಲೂ ಅನೇಕರು ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಆರೋಗ್ಯ ಸಂರಕ್ಷಣೆಗೆ ನಮ್ಮ ಪೂರ್ವಜರು ಯೋಗದ ಮಹತ್ವ ತಿಳಿಸಿದ್ದರು. ವಿಶ್ವ ಯೋಗ ದಿನ ಘೋಷಣೆಯಾದ ನಂತರ ಎಲ್ಲೆಡೆ ಯೋಗದ ಮಹತ್ವ ಮತ್ತಷ್ಟು ಹೆಚ್ಚಾಗಿದೆ. ಅದರಲ್ಲೂ ಮೈಸೂರಿನಲ್ಲಿ ಯೋಗಾಭ್ಯಾಸ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಈಗಾಗಲೇ ಯೋಗದಿನವನ್ನು ಪ್ರತಿದಿನ ಅಭ್ಯಾಸ ಮಾಡಲು ದಿನನಿತ್ಯ ಯೋಗ ಯೋಜನೆಯಡಿ ಜೂ.22 ರಿಂದ ಒಂದು ವರ್ಷ 365 ದಿನ ಜನರಿಗೆ ಆನ್‌ಲೈನ್ ಮೂಲಕ ಲಿಂಕ್ ಒದಗಿಸಲಾಗುವುದು ಎಂದರು.
ಯೋಗ ಫೆಡರೇಷನ್ ಮುಖ್ಯಸ್ಥ ಶ್ರೀಹರಿ ಮಾತನಾಡಿ, ಮೈಸೂರು ಈಗಾಗಲೇ ಯೋಗ ಹೆಸರಲ್ಲಿ ಗಿನ್ನೆಸ್ ದಾಖಲೆ ನಿರ್ಮಿಸಿದೆ. ಮೈಸೂರನ್ನು ಯೋಗ ಹಬ್ ಮಾಡಲು ಜೂ.21ರಂದು 120 ಸ್ಥಳಗಳಲ್ಲಿ 1.20ಕ್ಕೂ ಹೆಚ್ಚು ಜನರಿಂದ ಯೋಗಾಭ್ಯಾಸ ಪ್ರದರ್ಶನ ಆಯೋಜಿಸಲಾಗಿದೆ. ಇದಕ್ಕೆ ಎಲ್ಲ ಸಂಘ- ಸಂಸ್ಥೆಗಳೂ ಸಹಕಾರ ನೀಡುತ್ತಿವೆ. 1200 ತರಬೇತುದಾರರೊಂದಿಗೆ 1,20,000 ಜನರು ಭಾಗವಹಿಸುವಂತೆ ಮಾಡಲು ಉದ್ದೇಶಿಸಲಾಗಿದೆ ಎಂದರು.
ಇದೇ ಸಂರ್ಭದಲ್ಲಿ ಯೋಗದಿನದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಸಹಾಯಕ ಪೊಲೀಸ್ ಆಯುಕ್ತ ರಾಘವೇಂದ್ರ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಪ್ರಭು, ವಿವಿಧ ಯೋಗ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಯೋಗದಿನದ ಆಸನಗಳು

ಪ್ರಾರ್ಥನೆ-1 ನಿಮಿಷ
ಚಲನಕ್ರಿಯೆ - 4 ನಿಮಿಷಗಳು
ಸಮಸ್ಥಿತಿ, ಕುತ್ತಿಗೆ ಮುಂದೆ-ಹಿಂದೆ, ಕುತ್ತಿಗೆ ಬಲ-ಎಡ, ಕುತ್ತಿಗೆ ಬಲ-ಎಡಕ್ಕೆ ತಿರುಗಿಸುವುದು, ಕುತ್ತಿಗೆಯನ್ನು ವೃತ್ತಾಕಾರವಾಗಿ ತಿರುಗಿಸುವುದು, ಭುಜದ ವ್ಯಾಯಾಮ ಮೇಲೆ-ಕೆಳಗೆ, ವೃತ್ತಾಕಾರವಾಗಿ ತಿರುಗಿಸುವುದು, ಸೊಂಟದ ವ್ಯಾಯಾಮ, ಮಂಡಿಗಳ ವ್ಯಾಯಮ.
ಯೋಗಾಸನ -25 ನಿಮಿಷಗಳು
ತಾಡಾಸನ, ವೃಕ್ಷಾಸನ, ಪಾದಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋಣಾಸನ, ಭದ್ರಾಸನ, ವಜ್ರಾಸನ, ಉಷ್ಟ್ರಾಸನ, ಶಶಂಕಾಸನ, ಉತ್ಥಾನ ಮಂಡೂಕಾಸನ, ವಕ್ರಾಸನ, ಮಕರಾಸನ, ಭುಜಂಗಾಸನ, ಶಲಭಾಸನ, ಶವಾಸನ, ಸೇತುಬಂಧಾಸನ, ಉತ್ಥಾನ ಪಾದಾಸನ, ಅರ್ಧ ಹಲಾಸನ, ಪವನಮುಕ್ತಾಸನ, ಶವಾಸನ, ಪ್ರಾಣಾಯಾಮ,
ಧ್ಯಾನ ಮತ್ತು ಸಂಕಲ್ಪ :14 ನಿಮಿಷಗಳು
ಕಪಾಲಭಾತಿ, ನಾಡಿಶೋಧನ ಪ್ರಾಣಾಯಾಮ, ಶಿತಲೀ ಪ್ರಾಣಾಯಾಮ, ಬ್ರಾಮರೀ ಪ್ರಾಣಾಯಾಮ, ್ಯಾನ.
ಶಾಂತಿ ಮಂತ್ರ : 1 ನಿಮಿಷ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net