ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಉದ್ಯೋಗ ಮೇಳ ಸಹಕಾರಿ: ಪ್ರೊ.ಬಿ.ವಿ.ಸಾಂಬಶಿವಯ್ಯ ಅಭಿಪ್ರಾಯ

ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಪ್ರೊ.ಬಿ.ವಿ.ಸಾಂಬಶಿವಯ್ಯ, ಡಾ.ಎಂ.ಪ್ರಭು,ಸುಭಾಷ್ ಚಂದ್ರ, ಜಿ.ಕಾರ್ತಿಕ್, ಶಿವರಾಜು ಇತರರು ಇದ್ದರು.
ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಪ್ರೊ.ಬಿ.ವಿ.ಸಾಂಬಶಿವಯ್ಯ, ಡಾ.ಎಂ.ಪ್ರಭು,ಸುಭಾಷ್ ಚಂದ್ರ, ಜಿ.ಕಾರ್ತಿಕ್, ಶಿವರಾಜು ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳ ಹಿನ್ನೆಲೆಗೆ ಅನುಗುಣವಾಗಿ ಎಲ್ಲರಿಗೂ ಸಮಾನವಾಗಿ ಅವಕಾಶ ಲಭ್ಯವಾಗಬೇಕು
  • ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ದೊರೆಯುವ ಸುವರ್ಣಾವಕಾಶ
ಮೈಸೂರು:ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸಮರ್ಥನಂ ಅಂಗವಿಕಲರ ಸಂಸ್ಥೆ ಹಾಗೂ ಎಲ್‌ಎಸ್‌ಇಜಿ ಫೌಂಡೇಶನ್ ಆಶ್ರಯಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿತ್ತು.
ಕಾಲೇಜಿನ ಮುಖ್ಯ ಕಾರ್ಯ ನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಮಾತನಾಡಿ, ಶಿಕ್ಷಣ ಮತ್ತು ಅವಕಾಶಗಳು ವಿದ್ಯಾರ್ಥಿಗಳ ಹಿನ್ನೆಲೆಗೆ ಅನುಗುಣವಾಗಿ ಎಲ್ಲರಿಗೂ ಸಮಾನವಾಗಿ ಲಭ್ಯವಾಗಬೇಕು ಎಂಬ ನಂಬಿಕೆ ನಮ್ಮದು. ಇಂದಿನ ಉದ್ಯೋಗ ಮೇಳವು ಆ ನಂಬಿಕೆಯನ್ನು ಸಾಕಾರಗೊಳಿಸುವ ವೇದಿಕೆಯಾಗಿದ್ದು, ವೈವಿಧ್ಯ ಜೀವನ ಹಂತಗಳ ವಿದ್ಯಾರ್ಥಿಗಳು ಹಾಗೂ ವೈವಿಧ್ಯ ಗೌರವಿಸುವ ಕಂಪನಿಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಿದೆ ಎಂದರು.
ಉದ್ಯೋಗ ಮೇಳವೆಂದರೆ ಕೇವಲ ಕಾರ್ಯಕ್ರಮವಲ್ಲ, ಅದು ಪ್ರೇರಣೆಯೂ ಹೌದು. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ದೊರೆಯುವ ಸುವರ್ಣಾವಕಾಶ. ಇಂತಹ ಉದ್ಯೋಗ ಮೇಳಗಳು ಯುವ ಸಮುದಾಯಕ್ಕೆ ಉದ್ಯೋಗಾವಕಾಶಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ, ಅವರ ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆಯಾಗಿವೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಪ್ರಭು ಮಾತನಾಡಿ, ದೇಶದ ಆರ್ಥಿಕ ಪ್ರಗತಿಯಲ್ಲಿ ಉದ್ಯೋಗ ಮಹತ್ವದ ಪಾತ್ರ ವಹಿಸುತ್ತದೆ. ಯುವಜನರು ಉದ್ಯೋಗ ಕ್ಷೇತ್ರಕ್ಕೆ ಪ್ರವೇಶಿಸಲು ನೆರವಾಗುವ ಉದ್ದೇಶದಿಂದಲೇ ಈ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಹೇಳಿದರು.
ನಿರುದ್ಯೋಗದಿಂದಾಗಿ ಅನೇಕ ದೇಶಗಳ ಅಭಿವೃದ್ಧಿ ಕುಂಠಿತವಾಗುತ್ತಿದೆ. ಹಿಂದೆ ಉದ್ಯೋಗವನ್ನು ಉದ್ಯೋಗಂ ಪುರುಷ ಲಕ್ಷಣಂ ಎಂದು ಕರೆಯಲಾಗುತ್ತಿತ್ತು, ಆದರೆ ಇಂದು ಅದು ಉದ್ಯೋಗಂ ಸರ್ವ ಲಕ್ಷಣವಾಗಿದ್ದು, ಎಲ್ಲರಿಗೂ ಅಗತ್ಯವಾಗಿದೆ. ಹಿಂದೆ ಕಾಲೇಜುಗಳಲ್ಲಿ ಉದ್ಯೋಗದಾತರು ಬಂದು ನೇರ ಸಂದರ್ಶನ ನಡೆಸುವ ಪದ್ಧತಿ ಕಡಿಮೆಯಿತ್ತು. ಆದರೆ ಇಂದಿನ ದಿನಗಳಲ್ಲಿ ಉದ್ಯೋಗ ಮೇಳಗಳು ಸಾಮಾನ್ಯವಾಗಿದ್ದು, ಉತ್ತಮ ಪ್ರತಿಭೆಗಳನ್ನು ಆಯ್ಕೆ ಮಾಡಿಕೊಳ್ಳಲು ಸಹಕಾರಿಯಾಗಿವೆ ಎಂದು ಹೇಳಿದರು.
ಸಮರ್ಥನಂ ಅಂಗವಿಕಲರ ಸಂಸ್ಥೆಯ ಬೆಂಗಳೂರು ಕೇಂದ್ರದ ಮುಖ್ಯಸ್ಥ ಸುಭಾಷ್ ಚಂದ್ರ ಮಾತನಾಡಿ, ಸಮರ್ಥನಂ ಸಂಸ್ಥೆಯು ಭಾರತದಲ್ಲಿನ ದೃಷ್ಟಿಹೀನರು, ಅಂಗವಿಕಲರು ಹಾಗೂ ಅವಕಾಶ ವಂಚಿತರ ಸಬಲೀಕರಣಕ್ಕಾಗಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಗುಣಮಟ್ಟದ ಶಿಕ್ಷಣ, ವಸತಿ ಸೌಲಭ್ಯ, ಪೌಷ್ಟಿಕ ಆಹಾರ, ವೃತ್ತಿಪರ ತರಬೇತಿ ಹಾಗೂ ಪುನರ್ವಸತಿ ಸೌಲಭ್ಯಗಳನ್ನು ಒದಗಿಸುವ ಮೂಲಕ ಅಂಗವಿಕಲರ ವೈಯಕ್ತಿಕ ಸ್ವಾವಲಂಬನೆ ಸಾಧಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದ್ದು, ಅವರು ಸಮಾಜದಲ್ಲಿ ತಮ್ಮದೇ ಆದ ಗುರುತನ್ನು ನಿರ್ಮಿಸಿಕೊಳ್ಳಲು ಸಹಾಯ ಮಾಡುತ್ತಿದೆ ಎಂದು ತಿಳಿಸಿದರು.
ಕಾಲೇಜಿನ ಉದ್ಯೋಗಾಧಿಕಾರಿ ಜಿ.ಕಾರ್ತಿಕ್, ಸಮರ್ಥನಂ ಸಂಸ್ಥೆಯ ಮೈಸೂರು ವಿಭಾಗದ ಮುಖ್ಯಸ್ಥ ಶಿವರಾಜು, ಪ್ರಾಧ್ಯಾಪಕರಾದ ಡಾ.ಬಿ.ಎಲ್.ಕಿರಣ್, ಡಾ.ಸೌಮ್ಯಾ, ಸಮರ್ಥನಂ ಸಂಸ್ಥೆಯ ವೀರಭದ್ರ ಪಟೇಲ್, ಮಹಾಂತೇಶ್, ಆರ್.ಸುಬ್ರಮಣಿ ಇತರರು ಇದ್ದರು.
ಉದ್ಯೋಗ ಮೇಳದಲ್ಲಿ 35ಕ್ಕೂ ಹೆಚ್ಚು ಕಂಪನಿಗಳು ಹಾಗೂ ಸಾವಿರಕ್ಕೂ ಹೆಚ್ಚಿನ ಉದ್ಯೋಗ ಆಕಾಂಕ್ಷಿಗಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net