ಜಿಟಿಡಿಗೆ ಚುನಾವಣೆಯಲ್ಲಿ ಮಾತ್ರ ಜೆಡಿಎಸ್: ಸಿ.ಎನ್.ಮಂಜೇಗೌಡ ಕಿಡಿ

ಜೆಡಿಎಸ್
ಜೆಡಿಎಸ್
Published on

ಪ್ರಮುಖ ಮುಖ್ಯಾಂಶಗಳು

  • ಜಿ.ಟಿ.ದೇವೇಗೌಡರು ಮಾಡಿರುವುದು ಪಕ್ಷ ವಿರೋಧಿ ಕೆಲಸವೇ
  • ಪಕ್ಷದ ವಿರುದ್ಧ ಕೆಲಸ ಮಾಡಿದ್ದು, ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಎಚ್.ಕೆ.ರಾಮು ವಿರುದ್ಧ ಅಪಪ್ರಚಾರ ಮಾಡಿದ್ದಾರೆ.
  • ಎಚ್.ಡಿ. ದೇವೇಗೌಡರನ್ನು ಹಾವಿಗೆ ಹೋಲಿಸಿ ನಿಂದಿಸಿದವರು ಜಿ.ಟಿ.ದೇವೇಗೌಡರು.
ಮೈಸೂರು: ಚುನಾವಣೆಯಲ್ಲಿ ಗೆದ್ದ ಬಳಿಕ ಶಾಸಕ ಜಿ.ಟಿ. ದೇವೇಗೌಡರು ಹಲವಾರು ಸಂದರ್ಭಗಳಲ್ಲಿ ಜೆಡಿಎಸ್ ಪಕ್ಷದ ವಿರುದ್ಧ ಕೆಲಸ ಮಾಡಿದ್ದಾರೆ ಎಂದು ಸ್ವಪಕ್ಷ ಎಂಎಲ್‌ಸಿ ಸಿ.ಎನ್.ಮಂಜೇಗೌಡ ಕಿಡಿಕಾರಿದರು.
ಜೆಡಿಎಸ್ ವಿರೋಧಿ ಕೆಲಸ ಎಂದಿಗೂ ಮಾಡಿಲ್ಲ, ಪಕ್ಷದ ನಾಯಕರಿಗೆ ಮುಜುಗರ ಉಂಟು ಮಾಡುವ ಕೆಲಸ ಮಾಡಿಲ್ಲ. ನನಗೆ ನೋವಾಗಿದ್ದರೂ ಇನ್ನೂ ಪಕ್ಷದಲ್ಲೇ ಇದ್ದೇನೆ ಎಂಬ ಶಾಸಕ ಜಿ.ಟಿ. ದೇವೇಗೌಡರ ಹೇಳಿಕೆಗೆ ಮಂಜೇಗೌಡ ತಿರುಗೇಟು ಕೊಟ್ಟಿದ್ದಾರೆ.
ಚುನಾವಣೆ ವಿಷಯ ಬಂದಾಗಲೆಲ್ಲ ಜಿ.ಟಿ.ದೇವೇಗೌಡರು ತಾವು ಪಕ್ಷದಲ್ಲೇ ಇದ್ದೇನೆ ಎಂದರೂ ಬೇರೆ ಸಮಯದಲ್ಲಿ ಮಾಡುವುದೆಲ್ಲ ಪಕ್ಷ ವಿರೋಧಿ ಕೆಲಸವೇ ಆಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.
ಇವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಜಯ ಗಳಿಸಲು ಜೆಡಿಎಸ್ ಪಕ್ಷದ ವರ್ಚಸ್ಸು, ಅದರ ಮುಖಂಡರೇ ಕಾರಣರಾಗಿದ್ದಾರೆ. ಆದರೆ, ಗೆಲುವಿನ ಬಳಿಕ ಜಿ.ಟಿ.ದೇವೇಗೌಡರು ಇದನ್ನು ಮರೆತು ಹಲವಾರು ಸಂದರ್ಭಗಳಲ್ಲಿ ಪಕ್ಷದ ವಿರುದ್ಧ ಕೆಲಸ ಮಾಡಿದ್ದು,  ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಎಚ್.ಕೆ.ರಾಮು ವಿರುದ್ಧ ಅಪಪ್ರಚಾರ ಮಾಡಿದ್ದಾರೆ. 
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದ ತಮ್ಮ ವಿರುದ್ಧ ಪ್ರಚಾರ ಮಾಡಿ ಬಿಜೆಪಿ ಅಭ್ಯರ್ಥಿಯನ್ನು ಬಹಿರಂಗವಾಗಿ ಬೆಂಬಲಿಸಿದ್ದನ್ನು ಜನತೆ ಮರೆತಿಲ್ಲ ಎಂದು ಕುಟುಕಿದರು.
ವಿಧಾನಪರಿಷತ್ ಸದಸ್ಯರಾಗಿದ್ದ ರಿಜ್ವಾನ್ ಅರ್ಷದ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ 2020ರಲ್ಲಿ ಚುನಾವಣೆ ನಡೆದಾಗ ಬಿಜೆಪಿ ಅಭ್ಯರ್ಥಿ ಲಕ್ಷ್ಮಣ್ ಸವದಿ ಅವರಿಗೆ ಮತ ಹಾಕಿದ್ದರು. ಹುಣಸೂರು ಕ್ಷೇತ್ರದಿಂದ ವಿಧಾನಸಭೆಗೆ ನಡೆದ ಚುನಾವಣೆ ವೇಳೆ ಪಕ್ಷದ ಅಭ್ಯರ್ಥಿ ದೇವರಹಳ್ಳಿ ಸೋಮಶೇಖರ್ ಪರ ಕೆಲಸ ಮಾಡಲಿಲ್ಲ.
 ಬದಲಿಗೆ ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ಪರ ಪ್ರಚಾರ ಮಾಡಿದ್ದರು ಎಂದೂ ಜಿಟಿಡಿ ವಿರುದ್ಧ ದೂರಿದರು.
ಎಂಡಿಸಿಸಿ ಅಧ್ಯಕ್ಷರಾಗಿದ್ದ ಪಕ್ಷದ ಜಿ.ಡಿ. ಹರೀಶ್‌ಗೌಡರ ತಂಡದ ವಿರುದ್ಧ ಚುನಾವಣೆ ವೇಳೆ ಕೆಲಸ ಮಾಡಿ, ಕಾಂಗ್ರೆಸ್‌ನ ದೊಡ್ಡಸ್ವಾಮೇಗೌಡರನ್ನು ಬೆಂಬಲಿಸಿದ್ದರು. ಕೆ.ಆರ್.ನಗರ ಕ್ಷೇತ್ರದಲ್ಲಿ ಸಾ.ರಾ. ಮಹೇಶ್ ಶಕ್ತಿ ಕುಂದಿಸುವ ಸಲುವಾಗಿ ಎಂಡಿಸಿಸಿ ಬ್ಯಾಂಕ್ ಚುನಾವಣೆ ವೇಳೆ ತಮ್ಮ ಹಿಂಬಾಲಕ ಹರದನಹಳ್ಳಿಯ ಸೊಸೈಟಿ ಪ್ರತಿನಿಧಿಯಿಂದ ಕಾಂಗ್ರೆಸ್‌ಗೆ ಬೆಂಬಲ ಕೊಡಿಸಿದ್ದು ಪಕ್ಷ ದ್ರೋಹವಲ್ಲವೇ? ಎಂದು ಪ್ರಶ್ನಿಸಿದರು. 
ನಾಡಹಬ್ಬ ದಸರಾ ಮಹೋತ್ಸವದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಏಕೆ ಕೊಡಬೇಕು, ಎಚ್.ಡಿ. ಕುಮಾರಸ್ವಾಮಿ ರಾಜೀನಾಮೆ ನೀಡಿದ್ದಾರೆಯೇ ಎಂದು ಬಹಿರಂಗವಾಗಿ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರವುಂಟು ಮಾಡಲಿಲ್ಲವೇ? ಪಕ್ಷದ ಎಲ್ಲ ಸಭೆ, ಸಮಾರಂಭಗಳಿಂದ ದೂರ ಉಳಿದ್ದಾರೆ. 
ಹಲವು ಬಾರಿ ಮಾಧ್ಯಮಗಳ ಎದುರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಪೇಚಿಗೆ ಸಿಲುಕಿಸಿದ್ದು ಸರಿಯೇ? ಎಂದು ಪ್ರಶ್ನಿಸಿದರು.
ನಿಖಿಲ್ ಕುಮಾರಸ್ವಾಮಿ ಚುನಾವಣೆಗೆ ನಿಂತಾಗ ಪ್ರಚಾರದಿಂದ ದೂರ ಉಳಿದ್ದರು. ಎಚ್.ಡಿ. ರೇವಣ್ಣರನ್ನು ರಾವಣ ಎಂದು ದೂರಿ, ಎಚ್.ಡಿ. ದೇವೇಗೌಡರನ್ನು ಹಾವಿಗೆ ಹೋಲಿಸಿ ನಿಂದಿಸಿದವರು ಜಿ.ಟಿ.ದೇವೇಗೌಡರು. 2013ರಲ್ಲಿ ಸಿದ್ದರಾಮಯ್ಯ ಅವರನ್ನು ಕರೆಯಿಸಿ ಸೀತಾ ಕಲ್ಯಾಣ ಮಾಡಿಸಿದ್ದರು. 
ಇದೇ ರೀತಿಯ ಹಲವಾರು ಉದಾಹರಣೆಗಳಿವೆ. ಚುನಾವಣೆ ಬಂದಾಗ ಮಾತ್ರ ಇವರಿಗೆ ಜೆಡಿಎಸ್ ನೆನಪಾಗುತ್ತದೆ ಎಂದು ಲೇವಡಿ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net