ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಬೋಗಾದಿ ವರ್ತುಲ ರಸ್ತೆಯ ಬಳಿಯಲ್ಲಿ ಭಾನುವಾರ ಆಯೋಜಿಸಿದ್ದ ಜನರೊಂದಿಗೆ ಜನತಾದಳ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕುರುಬ ಸಮುದಾಯದವರು ಕುರಿಗಳನ್ನು ಉಡುಗೊರೆಯಾಗಿ ನೀಡಿದರು.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಬೋಗಾದಿ ವರ್ತುಲ ರಸ್ತೆಯ ಬಳಿಯಲ್ಲಿ ಭಾನುವಾರ ಆಯೋಜಿಸಿದ್ದ ಜನರೊಂದಿಗೆ ಜನತಾದಳ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕುರುಬ ಸಮುದಾಯದವರು ಕುರಿಗಳನ್ನು ಉಡುಗೊರೆಯಾಗಿ ನೀಡಿದರು.
Published on
ಮೈಸೂರು: ಚಾಮುಂಡೇಶ್ವರಿ ಕ್ಷೇತ್ರ ಜೆಡಿಎಸ್‌ನ ಭದ್ರಕೋಟೆ ಎಂಬುದನ್ನು ಕ್ಷೇತ್ರದ ಜನರು ನಿರೂಪಿಸಿದ್ದಾರೆ. ಈ ಕ್ಷೇತ್ರದಲ್ಲಿ ಜೆಡಿಎಸ್ ಸತತ ಮೂರು ಬಾರಿ ಗೆಲುವು ಸಾಧಿಸಿರುವುದಕ್ಕೆ ವ್ಯಕ್ತಿ ಕಾರಣವಲ್ಲ, ಈ ಕ್ಷೇತ್ರದ ಜನರು ಹಾಗೂ ಕಾರ್ಯಕರ್ತರು ಕಾರಣ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಬೋಗಾದಿ ವರ್ತುಲ ರಸ್ತೆಯ ಬಳಿಯಲ್ಲಿ ಭಾನುವಾರ ಆಯೋಜಿಸಿದ್ದ ಜನರೊಂದಿಗೆ ಜನತಾದಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸತತ 3 ಬಾರಿ ಜೆಡಿಎಸ್ ಸಾಧಿಸಿರುವ ಗೆಲುವಿನ ಶ್ರೇಯಸ್ಸು ಕ್ಷೇತ್ರದ ಜನತೆಗೆ ಸಲ್ಲಬೇಕು ಎಂದು ಹೇಳುವ ಮೂಲಕ ಈ ಗೆಲುವಿನಲ್ಲಿ ಹಾಲಿ ಶಾಸಕ ಜಿ.ಟಿ. ದೇವೇಗೌಡ ಅವರ ಪಾತ್ರಕ್ಕೆ ಹೆಚ್ಚಿನ ಮಹತ್ವ ಇಲ್ಲ ಎಂಬ ಸಂದೇಶವನ್ನು ಸಾರಿದರು.
ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಗೆಲ್ಲಿಸಿದ್ದೀರಿ. ಸತತ ಮೂರು ಚುನಾವಣೆಯಲ್ಲೂ ಈ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಆಶೀರ್ವಾದ ಮಾಡಿದ್ದೀರಿ. 2028ರಲ್ಲೂ ಪಕ್ಷವನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ನಾನು ಪಕ್ಷದ ಯಾವುದೇ ಕಾರ್ಯಕ್ರಮಕ್ಕೆ ಹೋಗಿರಲಿಲ್ಲ. ವಿಶೇಷವಾಗಿ ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯಕ್ರಮಕ್ಕೆ ನಾನು ಬರಲು ಕ್ಷೇತ್ರದ ಜನರು ನನ್ನನ್ನು ಮನೆಯ ಮಗನಾಗಿ ತೋರಿದ ಪ್ರೀತಿಯೇ ಕಾರಣ. 2028ರಲ್ಲೂ ಈ ಕ್ಷೇತ್ರದಲ್ಲಿಜೆಡಿಎಸ್ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಾ.ರಾ. ಮಹೇಶ್, ಶಾಸಕ ಜಿ.ಡಿ. ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಸಿ.ಎನ್. ಮಂಜೇಗೌಡ, ಕೆ. ವಿವೇಕಾನಂದ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಕೃಷ್ಣಾರೆಡ್ಡಿ, ಜಿಲ್ಲಾಧ್ಯಕ್ಷ ಅಶ್ವಿನ್ ಕುಮಾರ್, ನಗರಾಧ್ಯಕ್ಷ ಎಸ್.ಬಿ.ಎಂ. ಮಂಜು, ಮಾಜಿ ಶಾಸಕ ಕೆ. ಮಹದೇವ್, ಮುಖಂಡರಾದ ರವಿಚಂದ್ರೇಗೌಡ, ಶಿವಮೂರ್ತಿ, ಗಂಗಾಧರ ಗೌಡ, ಚೇತನ್, ಚಂದ್ರಿಕಾ ಸುರೇಶ್, ಕೃಷ್ಣ ನಾಯಕ, ಹೇಮಾವತಿ ಹಾಗೂ ಇತರರು ಇದ್ದರು.
ಚಾಮುಂಡೇಶ್ವರಿಯಲ್ಲಿ ಗೊಂದಲವಿಲ್ಲ
ಶಾಸಕ ಜಿ.ಡಿ. ಹರೀಶ್ ಗೌಡ ಮಾಜಿ ಸಚಿವ ಸಾ.ರಾ. ಮಹೇಶ್ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಯಾವುದೇ ರೀತಿಯಲ್ಲಿ ಗೊಂದಲಕ್ಕೆ ಅವಕಾಶ ಇಲ್ಲ. ನನಗೆ ಗೊತ್ತಿದೆ ಏನು ತೀರ್ಮಾನ ಮಾಡಬೇಕು ಅಂತ. ಕಾರ್ಯಕರ್ತರ ಭಾವನೆಗಳನ್ನು ಅರ್ಥ ಮಾಡಿಕೊಂಡಿದ್ದೇವೆ. ಅದರ ಆಧಾರದ ಮೇಲೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಯಾವುದೇ ಒತ್ತಡಗಳಿಗೆ ಮಣಿಯುವುದಿಲ್ಲ. ಕಾರ್ಯಕರ್ತರಿಗೆ ಆಗಿರುವ ಅಗೌರವ ಸರಿಪಡಿಸಲಾಗುವುದು. ನಿಮ್ಮ ಭಾವನೆಗಳಿಗೆ ಗೌರವ ನೀಡುತ್ತೇನೆ. ಈ ಕ್ಷೇತ್ರ ಜೆಡಿಎಸ್‌ನ ಭದ್ರಕೋಟೆ ಎಂಬ ಸಂದೇಶ ನೀಡಲು ನಿಮ್ಮ ಮುಂದೆ ಬಂದು ನಿಂತಿದ್ದೇನೆ ಎಂದು ಹೇಳುವ ಮೂಲಕ ಮುಂದಿನ ಚುನಾವಣೆಯಲ್ಲಿ ಶಾಸಕ ಜಿ.ಟಿ. ದೇವೇಗೌಡರಿಗೆ ಟಿಕೆಟ್ ಇಲ್ಲ ಎಂಬ ಸಂದೇಶವನ್ನು ಪರೋಕ್ಷವಾಗಿ ನೀಡಿದರು.
ಕುರುಬ ಸಮುದಾಯದ ಬೆಂಬಲ
ಕುರುಬ ಸಮುದಾಯದ ಹಲವಾರು ಮುಖಂಡರು ಜನತಾದಳ ಪರವಾಗಿ ಇದ್ದಾರೆ ಎಂಬ ಸಂದೇಶವನ್ನು ಈ ಕಾರ್ಯಕ್ರಮದಲ್ಲಿ ಕುರುಬ ಸಮುದಾಯದವರು ನೀಡಿದ್ದಾರೆ. ಅವರು ಪ್ರೀತಿಯಿಂದ ನನ್ನ ತಲೆಗೆ ರುಮಾಲು ಕಟ್ಟಿದ್ದಾರೆ, ಕುರಿಗಳನ್ನು ನೀಡಿದ್ದಾರೆ. ಅಹಿಂದ ಹಾಗೂ ಕುರುಬ ಸಮುದಾಯದ ನಾಯಕ ಎಂದು ಹೇಳಿಕೊಳ್ಳುವವರಿಗಿಂತ (ಸಿದ್ದರಾಮಯ್ಯ) ಅವರಿಗಿಂತ ಹೆಚ್ಚಿನ ಅಭಿವೃದ್ಧಿಯನ್ನು ನಾವು ನೀಡಿದ್ದೇವೆ. ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಸೇರಿದಂತೆ ಎಲ್ಲ ಜನರ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ನಂಜನಗೂಡಿನಲ್ಲಿ ಅಸಹಾಯಕರಾಗಿರುವ ಕುಟುಂಬಕ್ಕೆ ನಾನು ಬಾಡಿಗೆ ಮನೆಯ ವ್ಯವಸ್ಥೆ ಮಾಡಿ ಕೊಟ್ಟಿದ್ದೇವೆ. ಕುಟುಂಬದವರಿಗೆ ಪೆಟ್ಟಿಗೆ ಅಂಗಡಿ ನೀಡಲು, ಮಕ್ಕಳಿಗೆ ಶಾಲಾ ಶುಲ್ಕ ನೀಡಲು ಸಿದ್ಧತೆ ಮಾಡಿಕೊಂಡಿದ್ದೇವೆ. ಆದರೆ, ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರಕ್ಕೆ ಈ ವಿಚಾರ ಕಣ್ಣಿಗೆ ಬೀಳಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉಪ ಚುನಾವಣೆ ನೆನಪಿಸಿಕೊಂಡ ಎಚ್‌ಡಿಕೆ
ಚಾಮುಂಡೇಶ್ವರಿ ಕ್ಷೇತ್ರದ 2006ರ ಉಪ ಚುನಾವಣೆಯಲ್ಲಿ ನೀವು ನನಗೆ ಕೊಟ್ಟ ಶಕ್ತಿಯನ್ನು ನಾನು ಎಂದಿಗೂ ಮರೆಯುವುದಿಲ್ಲ. ಆ ಚುನಾವಣೆಯಲ್ಲಿ ನಮ್ಮ ನಾಯಕರು ತಪ್ಪುಗಳನ್ನು ಮಾಡದೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೆ ಕರ್ನಾಟಕ ಈ ಒಂದು ಪರಿಸ್ಥಿತಿಗೆ ಬರುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ಪ್ರಸ್ತಾಪಿದೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದರು.
ಅಂದು ನಮ್ಮಲ್ಲಿನ ಕೆಲವೊಂದು ಸಣ್ಣಪುಟ್ಟ ಭಿನ್ನಾಭಿಪ್ರಾಯದಿಂದ ಪಕ್ಷಕ್ಕೆ ಸೋಲುಂಟಾಯಿತು. ಆದರೆ, ಕ್ಷೇತ್ರದ ಜನರು ನಮಗೆ ಸೋಲುಂಟು ಮಾಡಬೇಕೆಂದು ಬಯಸಿದವರಲ್ಲ. 2006 ರಿಂದ ಚಾಮುಂಡೇಶ್ವರಿ ಕ್ಷೇತ್ರಕ್ಕೂ ನನಗೂ ಅವಿನಾಭಾವ ಸಂಬಂಧ ಹೊಂದಿದ್ದೇವೆ. ನನ್ನನ್ನು ಕುಟುಂಬದ ಸದಸ್ಯನಾಗಿ ನೋಡಿದ್ದೀರಿ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ಚ್ಯುತಿ ಬಾರದ ಹಾಗೆ ಕೆಲಸ ಮಾಡುತ್ತೇನೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಾನು ಅಕಾಸ್ಮಿಕವಾಗಿ ಮುಖ್ಯವಾದ ನಂತರ ಪ್ರಾರಂಭವಾಯಿತು. ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿಂತ ಹೆಚ್ಚಿನ ಅಭಿವೃದ್ಧಿಯ ಕೊಡುಗೆಯನ್ನು ನೀಡಿದ್ದೇನೆ ಎಂದು ಹೇಳಿದರು.
ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್‌ಗೆ 19 ಸ್ಥಾನಗಳು ದೊರೆಯಿತು. ಪಂಚರತ್ನ ಯೋಜನೆ ಜಾರಿಗೆ ನಮ್ಮಿಂದ ಸಾಧ್ಯವಾ ಗಿಲ್ಲ. ಇದರಿಂದ ಕಾರ್ಯಕರ್ತರಲ್ಲಿ ಉತ್ಸಾಹ ಕಡಿಮೆಯಾಗಿತ್ತು. ಇದೀಗ ಕಾರ್ಯಕರ್ತರು ಉತ್ಸಾಹದಿಂದ ಪಕ್ಷವನ್ನು ಕಟ್ಟಿ ಬೆಳೆಸುತ್ತಿದ್ದಾರೆ. ಜೆಡಿಎಸ್ ಕೇವಲ ಹಳೇ ಮೈಸೂರು ಭಾಗಕ್ಕೆ ಸೀಮಿತವಾಗದೆ ರಾಜ್ಯಾದ್ಯಂತ ತನ್ನ ಅಸ್ತಿತ್ವ ಉಳಿಸಿಕೊಂಡಿದ್ದು, ಮುಂಬರುವ ಚುನಾವನೆಯಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುವುದು ನಿಶ್ಚಿತ.
ನಿಖಿಲ್ ಕುಮಾರಸ್ವಾಮಿ, ರಾಜ್ಯಾಧ್ಯಕ್ಷ, ಜೆಡಿಎಸ್ ಯುವ ಘಟಕ
ಕೇವಲ 5 ದಿನಗಳಲ್ಲಿ ಇಷ್ಟುದೊಡ್ಡ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಿದ್ದೇವೆ. ಇಲ್ಲಿ ನೆರೆದಿರುವ ಎಲ್ಲರು ಚಾಮುಂಡೇಶ್ವರಿ ಕ್ಷೇತ್ರದ ಜನರೇ ಆಗಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಚಾಮುಂಡೇಶ್ವರಿ ಕ್ಷೇತ್ರದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. 2028ಕ್ಕೆ ಜೆಡಿಎಸ್ ಹಾಗೂ ಬಿಜೆಪಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ. ರಾಜ್ಯದ ರೈತರು, ಬಡವರು ಉಳಿಯಲು ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕು.
ಜಿ.ಡಿ. ಹರೀಶ್ ಗೌಡ, ಶಾಸಕ
ನಾವು ಯಾರು ಇಲ್ಲದೆ ಇದ್ದರೂ ಸುಭದ್ರವಾದ ಕಾರ್ಯಕರ್ತರು ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಇರುತ್ತಾರೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕು ಎಂಬ ಜನರ ಆಶಯಕ್ಕೆ ಚಾಮುಂಡೇಶ್ವರಿ ಕ್ಷೇತ್ರದ ಮೂಲಕ ನಾಂದಿ ಹಾಡಬೇಕು.
ಸಾ.ರಾ. ಮಹೇಶ್, ಮಾಜಿ ಸಚಿವ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net