ಪಿರಿಯಾಪಟ್ಟಣದಲ್ಲಿ ಜೆಡಿಎಸ್ ಶಾಸಕರ ಆಯ್ಕೆ ಶತಃಸಿದ್ಧ

ಪಿರಿಯಾಪಟ್ಟಣ ತಾಲೂಕು ಜೆಡಿಎಸ್ ಘಟಕದ ವತಿಯಿಂದ ಆಯೋಜಿಸಿದ್ದ ಜನರೊಂದಿಗೆ ಜನತಾದಳ ಸಮಾವೇಶವನ್ನು ಯುವ ಜನತಾದಳ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಉದ್ಘಾಟಿಸಿದರು. ಸಾ.ರಾ.ಮಹೇಶ್, ಕೆ.ಮಹದೇವ್, ಜಿ.ಡಿ.ಹರೀಶ್ ಗೌಡ, ವಿವೇಕಾನಂದ, ಸಿ.ಎನ್.ಮಂಜೇಗೌಡ, ಪಿ.ಎಂ.ಪ್ರಸನ್ನ ಇತರರು ಇದ್ದರು.
ಪಿರಿಯಾಪಟ್ಟಣ ತಾಲೂಕು ಜೆಡಿಎಸ್ ಘಟಕದ ವತಿಯಿಂದ ಆಯೋಜಿಸಿದ್ದ ಜನರೊಂದಿಗೆ ಜನತಾದಳ ಸಮಾವೇಶವನ್ನು ಯುವ ಜನತಾದಳ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಉದ್ಘಾಟಿಸಿದರು. ಸಾ.ರಾ.ಮಹೇಶ್, ಕೆ.ಮಹದೇವ್, ಜಿ.ಡಿ.ಹರೀಶ್ ಗೌಡ, ವಿವೇಕಾನಂದ, ಸಿ.ಎನ್.ಮಂಜೇಗೌಡ, ಪಿ.ಎಂ.ಪ್ರಸನ್ನ ಇತರರು ಇದ್ದರು.
Published on
ಪಿರಿಯಾಪಟ್ಟಣ: ಪಿರಿಯಾಪಟ್ಟಣದಲ್ಲಿ 2028ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಜೆಡಿಎಸ್ ಶಾಸಕರು ಆಯ್ಕೆಯಾಗುವುದು ಶತಃಸಿದ್ಧ ಎಂದು ಯುವ ಜನತಾದಳ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕು ಜೆಡಿಎಸ್ ಘಟಕದ ವತಿಯಿಂದ ಪಟ್ಟಣದ ಸಾಯಿ ಸಮುದಾಯ ಭವನದ ಮುಂಭಾಗ ಬುಧವಾರ ಆಯೋಜಿಸಿದ್ದ ಜನರೊಂದಿಗೆ ಜನತಾದಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಕಳೆದ ಎರಡು ದಶಕಗಳಲ್ಲಿ ಒಮ್ಮೆ ಮಾತ್ರ ಜೆಡಿಎಸ್ ಶಾಸಕರು ಇಲ್ಲಿ ಆಯ್ಕೆಯಾಗಿದ್ದಾರೆ. ಇಲ್ಲಿನ ಕಾರ್ಯಕರ್ತರ ಉತ್ಸಾಹವನ್ನು ಗಮನಿಸಿದಲ್ಲಿ ಮುಂಬರುವ ಚುನಾವಣೆಯಲ್ಲಿ ಈ ಕ್ಷೇತ್ರ ಜೆಡಿಎಸ್ ಪಾಲಾಗಲಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಕೆ.ಮಹದೇವ್ ಮತ್ತು ಅವರ ಪುತ್ರ ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ.ಪ್ರಸನ್ನ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ಇದರಿಂದ ತಾಲೂಕಿನ ಕಾರ್ಯಕರ್ತರು ಗೊಂದಲದಲ್ಲಿದ್ದಾರೆ. ಈ ಬಗ್ಗೆ ಕುಮಾರಸ್ವಾಮಿ ಅವರ ಜತೆ ಚರ್ಚಿಸಿ ಆದಷ್ಟು ಶೀಘ್ರವಾಗಿ ಒಳ್ಳೆಯ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದರು.
ಮುಂಬರುವ ಗ್ರಾಪಂ, ತಾಪಂ ಹಾಗೂ ಜಿಪಂ ಚುನಾವಣೆಗಳಲ್ಲಿ ನಮ್ಮ ಪಕ್ಷದ ಬೆನ್ನೆಲುಬಾಗಿ ನಿಂತಿರುವ ಜೆಡಿಎಸ್ ಕಾರ್ಯಕರ್ತರನ್ನು ಗೆಲ್ಲಿಸಿಕೊಂಡು ಬರುವುದು ನಿಮ್ಮಿಬ್ಬರ ಜವಾಬ್ದಾರಿಯಾಗಿದೆ ಎಂದು ಮಹದೇವ್ ಮತ್ತು ಪ್ರಸನ್ನ ಅವರನ್ನು ಉದ್ದೇಶಿಸಿ ಹೇಳಿದರು.
ಜೆಡಿಎಸ್ ಪಕ್ಷಕ್ಕೆ ರಾಜಕೀಯವಾಗಿ ಶಕ್ತಿಯನ್ನು ತಂದುಕೊಟ್ಟ ಜಿಲ್ಲೆ ಮೈಸೂರು ಆಗಿದ್ದು, ಕುಮಾರ ಪರ್ವದ ಮೂಲಕ ರಾಜ್ಯದ ಅಧಿಕಾರದ ಗದ್ದುಗೆ ಏರುವಲ್ಲಿ ಕುಮಾರಸ್ವಾಮಿ ಯಶಸ್ವಿಯಾಗಿದ್ದರು. ಎರಡು ಬಾರಿ ಮುಖ್ಯಮಂತ್ರಿ ಪದವಿಯನ್ನು ಅಲಂಕರಿಸಿದ್ದ ಕುಮಾರಣ್ಣ ಅವರು, ರೈತರ ಪರ ಆಡಳಿತ ನೀಡುವ ಮೂಲಕ ಅನ್ನದಾತರಿಗೆ ಶಕ್ತಿ ತುಂಬಿದ್ದರು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಸಾವಿರ ದಿನಗಳನ್ನು ಪೂರೈಸಿದೆ ಎಂದು ಸರ್ಕಾರದ ಹಣದಲ್ಲಿ ಸಾಧನ ಸಮಾವೇಶ ಮಾಡಿದ್ದಾರೆ ಎಂದು ದೂರಿದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ 5 ಲಕ್ಷ ಕೋಟಿ ರೂ. ಸಾಲ ಮಾಡಿದ್ದು, ಅತಿ ಹೆಚ್ಚು ಸಾಲವನ್ನು ಮಾಡಿರುವ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಅವರದ್ದಾಗಿದೆ ಎಂದು ಟೀಕಿಸಿದರು.
ಎಚ್.ಡಿ.ಕುಮಾರಸ್ವಾಮಿ ಅವರಿಗೆ ಆಡಳಿತದಲ್ಲಿ ಇರುವ ಅನುಭವವನ್ನು ಗಮನಿಸಿ ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಗೌರವದಿಂದ ಕೇಂದ್ರ ಸಚಿವ ಸಂಪುಟದಲ್ಲಿ ಎರಡು ಹುದ್ದೆಗಳನ್ನು ನೀಡಿದ್ದಾರೆ. ರಾಮನಗರದ ಉಪಚುನಾವಣೆಯಲ್ಲಿ ಎಲ್ಲ ವಿಷಯ ಗೊತ್ತಿದ್ದರೂ ಅನಿವಾರ್ಯವಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದೇನೆ. ಮುಂಬರುವ ಚುನಾವಣೆಯಲ್ಲಿ ಯಾರನ್ನು ಮನೆಗೆ ಕಳಿಸಬೇಕು ಎಂಬುದನ್ನು ಮತದಾರರು ತೀರ್ಮಾನ ಮಾಡಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕಿದರು.
ಮಾಜಿ ಶಾಸಕ ಕೆ.ಮಹದೇವ್ ಮತ್ತು ಅವರ ಪುತ್ರ ಪಿ.ಎಂ.ಪ್ರಸನ್ನ ಅವರನ್ನು ವೇದಿಕೆಯಲ್ಲಿ ಕೈಜೋಡಿಸಿ ಕೈ ಮೇಲೆತ್ತುವ ಮೂಲಕ ಕಾರ್ಯಕರ್ತರಿಗೆ ಅಪ್ಪ-ಮಗ ಒಂದಾಗಿದ್ದಾರೆ ಎಂಬ ಸಂದೇಶ ರವಾನಿಸಿದರು.
ಮಾಜಿ ಸಚಿವ ಸಾ.ರಾ.ಮಹೇಶ್ ಮಾತನಾಡಿ, ಕುಮಾರಣ್ಣ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಕರ್ನಾಟಕದ ಪರಿಸ್ಥಿತಿ ಎಷ್ಟು ಸುಭಿಕ್ಷವಾಗಿತ್ತು ಎಂಬುದನ್ನು ರೈತರು ಅರಿತಿದ್ದಾರೆ. ತಂಬಾಕು ದರ ಸಮಸ್ಯೆ ಎದುರಾದಾಗಲೆಲ್ಲ ರೈತರ ಪರವಾಗಿ ನಿಂತಿದ್ದು ದೇವೇಗೌಡರ ಕುಟುಂಬ ಎಂಬುದನ್ನು ನಾವು ಮರೆಯಬಾರದು. ಆದರೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಹಾಲಿನಿಂದ ಹಿಡಿದು ಆಲ್ಕೋಹಾಲ್‌ವರೆಗೂ ದರ ಏರಿಕೆ ಮಾಡಿದೆ. ಪಿರಿಯಾಪಟ್ಟಣದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯು ದೇವೇಗೌಡರ ಆಶೀರ್ವಾದದೊಂದಿಗೆ ಮಹದೇವಣ್ಣ ಅವರ ನಾಯಕತ್ವದಲ್ಲಿಯೇ ನಡೆಯಲಿದ್ದು, ಇನ್ನು 15 ದಿನಗಳಲ್ಲಿ ಇಲ್ಲಿನ ಸಮಸ್ಯೆ ಇತ್ಯರ್ಥ ಪಡಿಸಲಿದ್ದೇವೆ ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದರು.
ಮಾಜಿ ಶಾಸಕ ಕೆ.ಮಹದೇವ್ ಮಾತನಾಡಿ, ಕುಮಾರಣ್ಣ ಮತ್ತೊಮ್ಮೆ ಮುಖ್ಯಮಂತ್ರಿಯಾದಲ್ಲಿ ಮಾತ್ರ ರಾಜ್ಯದಲ್ಲಿ ಜೆಡಿಎಸ್ ನೆಲೆ ಕಾಣಲಿದೆ. ಸಚಿವ ಕೆ.ವೆಂಕಟೇಶ್ ದೇವೇಗೌಡರ ಕುಟುಂಬಕ್ಕೆ ಮಾಡಿದಷ್ಟು ಮೋಸ ಬೇರ‌್ಯಾವ ರಾಜಕಾರಣಿಯೂ ಮಾಡಿಲ್ಲ ಎಂದು ದೂರಿದರು.
ಕಾರ್ಯಕ್ರಮದಲ್ಲಿ ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ.ಪ್ರಸನ್ನ, ಮೈಸೂರು ಜಿಲ್ಲಾ ಜೆಡಿಎಸ್ ಘಟಕದ ಅಧ್ಯಕ್ಷ ಅಶ್ವಿನ್ ಕುಮಾರ್, ಹುಣಸೂರು ಶಾಸಕ ಜಿ.ಡಿ.ಹರೀಶ್ ಗೌಡ ಮಾತನಾಡಿದರು. ವಿಧಾನ ಪರಿಷತ್ ಸದಸ್ಯರಾದ ವಿವೇಕಾನಂದ, ಸಿ.ಎನ್.ಮಂಜೇಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಮೈಸೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ರವಿಕುಮಾರ್, ಮುಖಂಡರಾದ ಎಸ್‌ಬಿಎಂ ಮಂಜು, ಎಚ್.ಡಿ.ರಾಜೇಂದ್ರ, ಎಸ್.ರಾಮು, ಎ.ಟಿ.ರಂಗಸ್ವಾಮಿ, ಗಗನ್, ಜೆ.ಎಸ್.ನಾಗರಾಜ್ ಸೇರಿದಂತೆ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net