ಅನರ್ಹರನ್ನು ಕೈಬಿಡುವುದೇ ಎಸ್‌ಐಆರ್‌ನ ಗುರಿ

 ಹುಣಸೂರು ನಗರದ ಉಪವಿಭಾಗಾಧಿಕಾರಿ ಕಚೇರಿ ಯಲ್ಲಿ ಎಸ್‌ಐಆರ್ ಕುರಿತಂತೆ ವಿವಿಧ  ರಾಜಕೀಯ ಪಕ್ಷಗಳೊಂದಿಗಿನ ಸಭೆಯಲ್ಲಿ ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯಾರಾಣಿ ಎಸ್‌ಐಆರ್ ಕುರಿತು ಮಾಹಿತಿ ನೀಡಿದರು.ಕಿರಣ್‌ಕುಮಾರ್, ಸತೀಶ್ ಪಾಪಣ್ಣ, ಸತೀಶ್ ಕುಮಾರ್, ದೇವರಾಜ್ ಇತರರಿದ್ದರು.
ಹುಣಸೂರು ನಗರದ ಉಪವಿಭಾಗಾಧಿಕಾರಿ ಕಚೇರಿ ಯಲ್ಲಿ ಎಸ್‌ಐಆರ್ ಕುರಿತಂತೆ ವಿವಿಧ ರಾಜಕೀಯ ಪಕ್ಷಗಳೊಂದಿಗಿನ ಸಭೆಯಲ್ಲಿ ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯಾರಾಣಿ ಎಸ್‌ಐಆರ್ ಕುರಿತು ಮಾಹಿತಿ ನೀಡಿದರು.ಕಿರಣ್‌ಕುಮಾರ್, ಸತೀಶ್ ಪಾಪಣ್ಣ, ಸತೀಶ್ ಕುಮಾರ್, ದೇವರಾಜ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಚುನಾವಣಾ ನೋಂದಣಾಧಿಕಾರಿ ಕೆ.ವಿ.ಕಾವ್ಯಾರಾಣಿ ಹೇಳಿಕೆ
ಹುಣಸೂರು: ಯಾವುದೇ ಅನರ್ಹ ವ್ಯಕ್ತಿಯನ್ನು ಮತದಾರರ ಪಟ್ಟಿಯಿಂದ ಕೈಬಿಡುವುದು ಮತ್ತು ಅರ್ಹ ಮತದಾರರನ್ನು ಕೈಬಿಡದಿರುವುದೇ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್)ನ ಮೂಲ ಗುರಿಯಾಗಿದೆ ಎಂದು ಉಪವಿಭಾಗಾಧಿಕಾರಿ ಹಾಗೂ ಚುನಾವಣಾ ನೋಂದಣಾಧಿಕಾರಿ ಕೆ.ವಿ.ಕಾವ್ಯಾರಾಣಿ ತಿಳಿಸಿದರು.
ಎಸ್‌ಐಆರ್ ಪ್ರಕ್ರಿಯೆ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ನಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ವಿವಿಧ ರಾಜಕೀಯ ಪಕ್ಷಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
2002-04ರ ನಂತರ ಇದೀಗ ದೇಶಾದ್ಯಂತ ಎಸ್‌ಐಆರ್ ನಡೆದಿದೆ. ರಾಜ್ಯದಲ್ಲೂ ಪ್ರಕ್ರಿಯೆ ಆರಂಭಗೊಂಡಿದ್ದು, ಮೊದಲ ಹಂತವಾಗಿ ಮ್ಯಾಪಿಂಗ್ ಕಾರ್ಯ ನಡೆದಿದೆ. ಎಸ್‌ಐಆರ್ ಯಶಸ್ವಿಯಾಗಲು ರಾಜಕೀಯ ಪಕ್ಷಗಳ ಪಾತ್ರ ಮತ್ತು ಸಹಕಾರ ಅತ್ಯಗತ್ಯವಾಗಿದೆ. ಬೂತ್ ಮಟ್ಟದಲ್ಲಿ ಮತದಾರರನ್ನು ಗುರುತಿಸುವ, ಲೋಪದೋಷಗಳನ್ನು ಸರಿಪಡಿಸುವ ಕುರಿತು ಪಕ್ಷಗಳಿಂದ ನೇಮಕಗೊಂಡ ಬಿಎಲ್‌ಎಗಳು ಸರ್ಕಾರದ ಬಿಎಲ್‌ಓಗಳೊಂದಿಗೆ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿದಲ್ಲಿ ನಿಖರವಾದ ಮತ್ತು ಪಾರದರ್ಶಕವಾದ ಮತದಾರರ ಪಟ್ಟಿಯನ್ನು ತಯಾರಿಸಲು ಸಾಧ್ಯ. ಅನರ್ಹರನ್ನು ಮತದಾರರ ಪಟ್ಟಿಯಿಂದ ಕೈಬಿಡುವುದೇ ಎಸ್‌ಐಆರ್‌ನ ಗುರಿ ಎಂದು ಹೇಳಿದರು.
ವಿಶೇಷ ಸಮಗ್ರ ಪರಿಷ್ಕರಣೆಯ ಅರ್ಹತಾ ದಿನಾಂಕವಾಗಿ ಅ.1, 2026 ನಿಗದಿಯಾಗಿದೆ. ಪೂರ್ವತಯಾರಿ, ತರಬೇತಿ ಮತ್ತು ಮುದ್ರಣವು ಜೂ.20ರಿಂದ 26ರವರೆಗೆ, ಮತಗಟ್ಟೆ ಅಧಿಕಾರಿಗಳಿಂದ ಮನೆಮನೆ ಭೇಟಿ ಕಾರ್ಯವು ಜೂ.30ರಿಂದ ಜು.29ರವರೆಗೆ, ಮತಗಟ್ಟೆಗಳ ಪುನರ್‌ವಿಂಗಡಣೆ ಕಾರ್ಯವು ಜು.29ರಿಂದ ಆರಂಭಗೊಳ್ಳಲಿದೆ. ಹಾಗೂ ಕರಡುಮತದಾರರ ಪ್ರಕಟಣೆಯು ಆ.5ರಂದು ಹೊರಬೀಳಲಿದೆ ಎಂದು ಅವರು ಮಾಹಿತಿ ನೀಡಿದರು.
ಚುನಾವಣಾ ಶಿರಸ್ತೇದಾರ್ ಪ್ರಕಾಶ್, ಜೆಡಿಎಸ್ ಪಕ್ಷದ ತಾಲುಕು ಅಧ್ಯಕ್ಷ ಎಂ.ಬಿ.ಸುರೇಂದ್ರ, ಪಕ್ಷದ ಬಿಎಲ್‌ಎ ಸತೀಶ್ ಪಾಪಣ್ಣ, ಸತೀಶ್‌ಕುಮಾರ್, ಬಿಜೆಪಿಯ ಕಿರಣ್‌ಕುಮಾರ್, ಕಾಂಗ್ರೆಸ್ ಪಕ್ಷದ ತಾಲೂಕು ಅಧ್ಯಕ್ಷ ಗದ್ದಿಗೆ ದೇವರಾಜ್, ಸುನೀತಾ ಜಯರಾಮೇಗೌಡ, ಗಣಪತಿ ಇಂಡೋಲ್ಕರ್ ಸೇರಿದಂತೆ ವಿವಿಧ ಪಕ್ಷದ ಪ್ರತಿನಿಧಿಗಳು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net