ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಮಿಕ, ರೈತ ಮತ್ತು ಜನವಿರೋಧಿ ನೀತಿಗಳನ್ನು ವಿರೋಧಿಸಿ ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ಜಂಟಿ ಕಾರ್ಮಿಕ ಸಂಘಟನೆ (ಜೆಸಿಟಿಯು) ವತಿಯಿಂದ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು.
ಕ್ವಿಟ್ ಇಂಡಿಯಾ ಚಳವಳಿ ನೆನಪಿನಲ್ಲಿ ಕಾರ್ಪೋರೇಟ್‌ಗಳೇ ದೇಶ ಬಿಟ್ಟು ತೊಲಗಿ ಎಂಬ ಘೋಷಣೆಯೊಂದಿಗೆ ವಿವಿಧ ಸಂಘಟನೆಗಳ ಮುಖಂಡರು, ರೈತರು ಹಾಗೂ ಕಾರ್ಮಿಕರು ನಂಜರಾಜ ಬಹದ್ದೂರ್ ಛತ್ರದಲ್ಲಿ ಸಮಾವೇಶಗೊಂಡರು. ಬಳಿಕ ಪ್ರತಿಭಟನಾಕಾರರು ಮೆಟ್ರೊಪೋಲ್ ವೃತ್ತದ ಮೂಲಕ ರೈಲು ನಿಲ್ದಾಣದತ್ತ ಮೆರವಣಿಗೆ ತೆರಳಿದರು. ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಮುಂದಾದ ಪ್ರತಿಭಟನಾಕಾರರನ್ನು ದಾಸಪ್ಪ ವೃತ್ತದಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸರು ತಡೆದರು.
ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ವಾಹನಗಳಲ್ಲಿ ಕರೆದೊಯ್ದರು. ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.
ಸರ್ಕಾರಗಳ ವಿರುದ್ಧ ಆಕ್ರೋಶ:
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ, ಕಾರ್ಮಿಕ, ದಲಿತ, ಮಹಿಳೆ, ವಿದ್ಯಾರ್ಥಿ ಮತ್ತು ಯುವಜನ ವಿರೋಧಿ ಕಾನೂನು ಹಾಗೂ ನೀತಿಗಳನ್ನು ಜಾರಿಗೊಳಿಸುತ್ತಿವೆ. ಮತ್ತೊಂದೆಡೆ ಜನರ ಪ್ರಜಾಪ್ರಭುತ್ವ ಹಕ್ಕುಗಳನ್ನು ದಮನಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ರೈತರ ಭೂಮಿಯನ್ನು ಕಾರ್ಪೋರೇಟ್ ಕಂಪನಿಗಳಿಗೆ ಒಪ್ಪಿಸಲಾಗುತ್ತಿದೆ. ಕಾರ್ಮಿಕ ವರ್ಗವನ್ನು ಜೀತಪದ್ಧತಿಯ ಕಾಲಕ್ಕೆ ನೂಕುವಂತಹ ನೀತಿಗಳನ್ನು ಜಾರಿಗೊಳಿಸಲಾಗುತ್ತಿದೆ. ಬೆಲೆ ಏರಿಕೆ, ನಿರುದ್ಯೋಗ, ಸಾಲ ಹಾಗೂ ಬಡತನದಿಂದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪೆಟ್ರೋಲ್, ಡೀಸೆಲ್, ಗ್ಯಾಸ್, ವಿದ್ಯುತ್, ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಸರ್ಕಾರಗಳು ಸಾರ್ವಜನಿಕ ವಲಯವನ್ನು ಖಾಸಗೀಕರಣದತ್ತ ಕೊಂಡೊಯ್ಯುತ್ತಿವೆ ಎಂದು ದೂರಿದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ರೈತ ಮುಖಂಡರಾದ ಹೊಸಕೋಟೆ ಬಸವರಾಜು, ಹೊಸಕೋಟೆ ಕುಮಾರ್, ಪಿ.ಮರಂಕಯ್ಯ, ವಿವಿಧ ಸಂಘಟನೆಗಳ ಪ್ರಮುಖರಾದ ಬಾಲಾಜಿರಾವ್, ಚಂದ್ರಶೇಖರ ಮೇಟಿ, ಜಿ.ಎಸ್.ಸೀಮಾ, ಜಗದೀಶ್ ಸೂರ್ಯ, ಬಸವರಾಜ್, ದೇವದಾಸ್, ಕಂದೇಗಾಲ ಶ್ರೀನಿವಾಸ್, ಜವರಯ್ಯ ಇತರರಿದ್ದರು.
ಪ್ರಮುಖ ಬೇಡಿಕೆಗಳು
*ಬಲವಂತದ ಭೂ ಸ್ವಾಧೀನ ಹಾಗೂ ಕಾರ್ಪೊರೇಟ್ ಭೂ ಕಬಳಿಕೆಗೆ ತಡೆ
*ಕೃಷಿ ಮಾರುಕಟ್ಟೆಗೆ ಧಕ್ಕೆ ತರುವ ನೀತಿಗಳನ್ನು ಕೈಬಿಡಬೇಕು
*ಹೊಸ ಕಾರ್ಮಿಕ ಸಂಹಿತೆಗಳನ್ನು ವಾಪಸ್ ಪಡೆಯಬೇಕು
*ಕನಿಷ್ಠ ಕೂಲಿ ಪರಿಷ್ಕರಣೆ ಜಾರಿ
*ಸ್ವಾಮಿನಾಥನ್ ವರದಿಯನ್ವಯ ಬೆಳೆಗಳಿಗೆ ಶಾಸನಬದ್ಧ ಬೆಂಬಲ ಬೆಲೆ ನಿಗದಿ
*ರೈತರು ಹಾಗೂ ಕೃಷಿ ಕೂಲಿಕಾರರ ಸಾಲ ಮನ್ನಾ
*ಇಂಧನ, ಗ್ಯಾಸ್, ವಿದ್ಯುತ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ