ಮೊದಲು ವ್ಯವಸ್ಥಿತವಾಗಿ, ಕಾಳಜಿ ವಹಿಸಿ ದಸರಾ ಆಚರಣೆ ಮಾಡಲಿ.
ಹಿಂದೆ ಹೇಗೆ ನಡೆದುಕೊಂಡು ಬಂದಿದೆಯೋ ಹಾಗೇ ದಸರಾ ನಡೆಯಲಿ.
ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಕರಾವಳಿಯ ಕಂಬಳ ಆಯೋಜನೆಗೆ ರಾಜವಂಶಸ್ಥ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಕ್ಷೇಪಿಸಿದರು.
ಟಿಕೆಟ್ ಗೊಂದಲ, ಯುವ ದಸರಾದಲ್ಲಿ ಅವ್ಯವಸ್ಥೆ... ಹೀಗೆ ದಸರಾವನ್ನು ವ್ಯವಸ್ಥಿತವಾಗಿ ನಡೆಸಲು ರಾಜ್ಯ ಸರ್ಕಾರವು ಕಳೆದ ವರ್ಷ ವಿಫಲವಾಗಿತ್ತು. ಈ ಸಲ ಮೊದಲು ವ್ಯವಸ್ಥಿತವಾಗಿ, ಕಾಳಜಿ ವಹಿಸಿ ದಸರಾ ಆಚರಣೆ ಮಾಡಲಿ. ಬಳಿಕ ಬೇಕಾದರೆ ಕಂಬಳ ತರಲಿ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಕೋಣಗಳ ಕೆಸರುಗದ್ದೆ ಓಟವಾದ ಕಂಬಳ ಕರಾವಳಿಯ ಆಚರಣೆ. ಅದಕ್ಕೆ ತನ್ನದೇಯಾದ ಧಾರ್ಮಿಕ ವಿಧಿವಿಧಾನ, ನಂಬಿಕೆಗಳಿವೆ. ಅದು ಹಾಗೆ ಮುಂದುವರಿಯಲಿ. ಅದನ್ನು ಇಲ್ಲಿಗೆ ತಂದು ವಾಣಿಜ್ಯೀಕರಣ ಮಾಡೋದು ಸರಿಯಲ್ಲ. ಬರೀ ಪ್ರದರ್ಶನಕ್ಕಾಗಿ ಇದರ ಬಳಕೆ ಖಂಡನೀಯ ಎಂದು ಹರಿಹಾಯ್ದರು.
ದಸರಾಕ್ಕೆ ಧಾರ್ಮಿಕ ಹಿನ್ನೆಲೆ ಇದೆ. ಇದು ಡಾನ್ಸ್‌ನಂತಹ ಕಾರ್ಯಕ್ರಮವಲ್ಲ. ಹಿಂದೆ ಹೇಗೆ ನಡೆದುಕೊಂಡು ಬಂದಿದೆಯೋ ಹಾಗೇ ದಸರಾ ನಡೆಯಲಿ. ಅದರಲ್ಲಿ ಕಂಬಳದಂತಹ ಕಾರ್ಯಕ್ರಮ ಆಯೋಜನೆ ಸರಿಯಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಈಗ ಬರ ಪರಿಸ್ಥಿತಿ ಎದುರಾಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ‘ಜಲಾಶಯಗಳಲ್ಲಿನ ನೀರು ನಂಬಿಕೊಂಡು ಕೃಷಿ ಬೆಳೆ ಬೆಳೆಯಬೇಡಿ. ಡ್ಯಾಮ್‌ನ ನೀರು ನಂಬಿಕೊಳ್ಳಬೇಡಿ’ ಎಂದೆಲ್ಲ ಹೇಳಿದ್ದಾರೆ. ಇಂತಹ ಸಮಯದಲ್ಲಿ ಕಂಬಳಕ್ಕೆ 8 ಕೋಟಿ ರೂ. ಖರ್ಚು ಮಾಡೋದು ಎಷ್ಟು ಸರಿ? ಈ ಹಿಂದೆ ಬರ ಬಂದಂತಹ ಸಂದರ್ಭದಲ್ಲಿ ಸರಳ ಹಾಗೂ ಸಾಂಪ್ರದಾಯಿಕವಾಗಿ ದಸರಾ ಆಚರಣೆ ಮಾಡಿದ ನಿದರ್ಶನ ಇದೆ.
ಸಿದ್ದರಾಮಯ್ಯ ಸರ್ಕಾರದಲ್ಲೂ ಸರಳವಾಗಿಯೇ ಆಚರಿಸಲಾಗಿತ್ತು. ಆದ್ದರಿಂದ ಈ ಸಲ ಬರ ಎದುರಾದರೆ ಸರಳ ಹಾಗೂ ಸಾಂಪ್ರದಾಯಿಕವಾಗಿ ದಸರಾ ಆಚರಣೆ ಮಾಡಲಿ ಎಂದು ಸಲಹೆ ನೀಡಿದರು.