ಸರ್ವೀಸ್ ರಸ್ತೆ ನಿರ್ಮಿಸದೆ ಬೇಜವಾಬ್ದಾರಿ ವರ್ತನೆ

ಹೊಸೂರು ಕುಮಾರ್.
ಹೊಸೂರು ಕುಮಾರ್.
Published on

ಪ್ರಮುಖ ಮುಖ್ಯಾಂಶಗಳು

  • ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಆರೋಪ
ಹುಣಸೂರು : ಶ್ರೀರಂಗಪಟ್ಟಣದಿಂದ ಕುಶಾಲನಗರದವರೆಗೆ ನಿರ್ಮಾಣಗೊಳ್ಳುತ್ತಿರುವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಸರ್ವೀಸ್ ರಸ್ತೆ ನಿರ್ಮಿಸದೆ ಹೆದ್ದಾರಿ ಪ್ರಾಧಿಕಾರ ಬೇಜವಾಬ್ದಾರಿ ವರ್ತನೆ ತೋರಿದ್ದು, ಸರ್ವೀಸ್ ರಸ್ತೆ ನಿರ್ಮಿಸದಿದ್ದರೆ ಕಾಮಗಾರಿಯ ವಿರುದ್ಧ ಹೋರಾಟ ನಡೆಸುವುದಾಗಿ ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಎಚ್ಚರಿಸಿದರು.
ಶ್ರೀರಂಗಪಟ್ಟಣದಿಂದ ಕುಶಾಲನಗರದವರೆಗಿನ ಚತುಷ್ಪಥ ರಸ್ತೆ ನಿರ್ಮಾಣದ ಕುರಿತು ರೈತರು ಆರಂಭದಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಇದ್ದರು. ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಿತವಾಗಿರುವ ರಾಜಮಾರ್ಗ ಕುಶಾಲನಗರದವರೆಗೂ ಸಂಪರ್ಕ ಹೊಂದಿದ್ದು ಅದನ್ನೇ ಅಭಿವೃದ್ಧಿಗೊಳಿಸುವ ಮೂಲಕ ರೈತರ ಜಮೀನುಗಳನ್ನು ಖರೀದಿಸುವ ಅವಶ್ಯಕತೆ ಇರುವುದಿಲ್ಲವೆಂದು ಸಂಘವು ಒತ್ತಾಯಿಸಿತ್ತು. ಆದರೆ ರೈತರ ಆಗ್ರಹಕ್ಕೆ ಮಣಿಯದೇ ಸರ್ಕಾರ ಹೆದ್ದಾರಿ ನಿರ್ಮಿಸುತ್ತಿದೆ. ಇದೀಗ ಹೆದ್ದಾರಿ ಕಾಮಗಾರಿ ಭರದಿಂದ ಸಾಗಿದ್ದು, ಈ ಹೆದ್ದಾರಿ ಬಳಿ ಯಾವುದೇ ಸರ್ವೀಸ್ ರಸ್ತೆ ನಿರ್ಮಿಸುವ ಗೋಜಿಗೆ ಪ್ರಾಧಿಕಾರ ಹೋಗಿಲ್ಲವೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಬೇಸರಿಸಿದರು.
ಹೆದ್ದಾರಿ ರಸ್ತೆ ನಿರ್ಮಿಸಿ ಪಕ್ಕದಲ್ಲಿ ಸರ್ವೀಸ್ ರಸ್ತೆ ನಿರ್ಮಿಸುತ್ತಿಲ್ಲ. ಹೆದ್ದಾರಿ ರಸ್ತೆಗೆ ಅಲ್ಲಲ್ಲಿ ಅಂಡರ್ ಪಾಸ್ ನೀಡುತ್ತಿದ್ದಾರೆ. ಆದರೆ ಇದರಿಂದ ಹೆದ್ದಾರಿ ಬಳಿ ಇರುವ ಜಮೀನಿನ ರೈತರಿಗೆ ತಮ್ಮ ಜಮೀನಿಗೆ ತೆರಳಲು 3-4 ಕಿ.ಮೀ. ದೂರವನ್ನು ಕ್ರಮಿಸಿ ಸುತ್ತಿ ಬಳಸಿ ಬರಬೇಕಿದೆ. ರಸ್ತೆ ಪಕ್ಕದ ಜಮೀನಿನ ರೈತರಿಗೆ ಈ ರೀತಿಯಾದರೆ ನಂತರದ ಜಮೀನಿಗೆ ಮಾಲೀಕರು ಹೋಗಲು ಆಗದ ಪರಿಸ್ಥಿತಿ ಇದೆ. ಹೆದ್ದಾರಿ ಪ್ರಾಧಿಕಾರ ಸರ್ವೀಸ್ ರಸ್ತೆ ಯಾಕೆ ನಿರ್ಮಿಸತ್ತಿಲ್ಲವೆನ್ನುವುದೇ ಅರ್ಥವಾಗುತ್ತಿಲ್ಲ. ಕಾಮಗಾರಿ ಇದೇ ರೀತಿ ಮುಂದುವರಿದಲ್ಲಿ ರೈತ ಸಮುದಾಯ ಹೆದ್ದಾರಿಯ ಮೇಲೆಯೇ ಕುಳಿತು ಪ್ರತಿಭಟಿಸಿ ಕಾಮಗಾರಿ ಸ್ಥಗಿತಗೊಳಿಸಲು ಮುಂದಾಗಲಿದೆ. ಕೂಡಲೇ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇತ್ತ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ರೈತಸಂಘದ ಉಪಾಧ್ಯಕ್ಷ ಕಲ್ಲಹಳ್ಳಿ ವಿಷಕಂಠಪ್ಪ ಮಾತನಾಡಿ, ಕೊಳವೆಬಾವಿ, ಪಂಪ್‌ಸೆಟ್ ಇಟ್ಟುಕೊಂಡು ವಿದ್ಯುತ್ ಸಂಪರ್ಕದೊಂದಿಗೆ ಕೃಷಿ ಕಾರ್ಯ ನಡೆಸಿದ್ದ ರೈತರಿಗೆ ಹೆದ್ದಾರಿ ನಿರ್ಮಾಣದ ನಂತರ ವಿದ್ಯುತ್ ಸಂಪರ್ಕವಿಲ್ಲದೆ, ನೀರಿಲ್ಲದೆ ಬೇಸಾಯ ಮಾಡದಂತಾಗಿದೆ. ರೈತರು ಕೃಷಿಯನ್ನು ತ್ಯಜಿಸಲಿ ಎನ್ನುವುದೇ ಇವರ ಉದ್ದೇಶವೇ ಎಂದು ಖಾರವಾಗಿ ಪ್ರಶ್ನಿಸಿ, ಕೂಡಲೇ ಪಂಪ್‌ಸೆಟ್ ಹೊಂದಿದ್ದ ರೈತರಿಗೆ ವಿದ್ಯುತ್ ಸಂಪರ್ಕ ಸೇರಿದಂತೆ ಸೂಕ್ತ ಸೌಲಭ್ಯಗಳನ್ನು ನೀಡಲು ಅಧಿಕಾರಿಗಳು ಕ್ರಮವಹಿಸಬೇಕೆಂದು ಆಗ್ರಹಿಸಿದರು.
ರೈತಸಂಘದ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಅಗ್ರಹಾರ ರಾಮೇಗೌಡ ಮಾತನಾಡಿ, ತಂಬಾಕಿಗೆ ಉತ್ತಮದರ ಇನ್ನೂ ಸಿಗುತ್ತಿಲ್ಲ. 10 ದಿನಗಳ ಹಿಂದೆ ಉತ್ತಮ ದರ ನಿಗದಿಪಡಿಸಲು ಒತ್ತಾಯಿಸಿ ಮೈಸೂರು, ಹಾಸನ, ಚಾಮರಾಜನಗರ ಲೋಕಸಭಾ ಕ್ಷೇತ್ರಗಳ ಎಂಪಿಗಳ ಕಚೇರಿ ಮುಂಬಾಗ ರೈತಸಂಘದ ಸದಸ್ಯರು ಪ್ರತಿಭಟನೆ ನಡೆಸಿದ್ದೇವೆ. ಇಷ್ಟಾಗಿಯೂ ಯಾರೊಬ್ಬರೂ ನಮ್ಮ ಅಹವಾಲು ಏನೆಂದು ಕೇಳುತ್ತಿಲ್ಲ. ಪ್ರತಿಕ್ರಿಯೆ ಕೂಡ ನೀಡುತ್ತಿಲ್ಲ. ಆಂಧ್ರಪ್ರದೇಶದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಅಲ್ಲಿನ ರೈತರ ಹಿತ ಕಾಯುತ್ತಿದ್ದರೆ, ಇಲ್ಲಿನ ಜನಪ್ರತಿನಿಧಿಗಳು ರೈತರನ್ನು ಕಡೆಗಣಿಸುವ ಮೂಲಕ ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲವೆಂದು ವಿಷಾದಿಸಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಬೆಂಕಪುರ ಚಿಕ್ಕಣ್ಣ, ಕಟ್ಟೆಮಳಲವಾಡಿ ಸ್ವಾಮಿಗೌಡ, ಧರ್ಮಾಪುರ ಗ್ರಾಮ ಘಟಕದ ಅಧ್ಯಕ್ಷ ವೆಂಕಟಾಚಲನಾಯಕ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net