ಮೈಸೂರಿನಲ್ಲಿ ಅಂತಾರರಾಷ್ಟ್ರೀಯ ಲೆವೆಲ್ ಕ್ರಾಸಿಂಗ್ ಜಾಗೃತಿ ದಿನಾಚರಣೆ
ರೈಲ್ವೆ ಮಂಡಳಿ, ನೈರುತ್ಯ ರೈಲ್ವೆಯ ಮೈಸೂರು ವಿಭಾಗದಿಂದ ನಗರದಲ್ಲಿ ಅಂತಾರಾಷ್ಟ್ರೀಯ ಲೆವೆಲ್ ಕ್ರಾಸಿಂಗ್ ಜಾಗೃತಿ ದಿನದ ಅಂಗವಾಗಿ ಸಾರ್ವಜನಿಕರಿಗೆ ಕರಪತ್ರ ವಿತರಿಸಲಾಯಿತು. ಮುದಿತ್ ಮಿತ್ತಲ್, ಶಮ್ಮಾಸ್ ಹಮೀದ್, ಪೃಥ್ವಿ ಎಸ್. ಹುಲ್ಲತ್ತಿ, ವಿಭಾಗದ ಹಿರಿಯ ಅಧಿಕಾರಿಗಳು ಇದ್ದರು.
ಲೆವೆಲ್ ಕ್ರಾಸಿಂಗ್‌ಗಳಲ್ಲಿ ಸುರಕ್ಷತೆ ಕೇವಲ ರೈಲ್ವೆಯ ಜವಾಬ್ದಾರಿಯಲ್ಲ, ಅದರಲ್ಲಿ ಸಾರ್ವಜನಿಕರ ಸಹಭಾಗಿತ್ವವು ಇರಲಿದೆ
ರೈಲು ಲೆವೆಲ್ ಕ್ರಾಸಿಂಗ್‌ಗಳನ್ನು ದಾಟುವಾಗ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ, ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು
ಮೈಸೂರು:ರೈಲ್ವೆ ಮಂಡಳಿ, ನೈರುತ್ಯ ರೈಲ್ವೆಯ ಮೈಸೂರು ವಿಭಾಗದಿಂದ ನಗರದಲ್ಲಿ ಅಂತಾರರಾಷ್ಟ್ರೀಯ ಲೆವೆಲ್ ಕ್ರಾಸಿಂಗ್ ಜಾಗೃತಿ ದಿನ ಆಚರಿಸಲಾಯಿತು.
ಮೈಸೂರು ಮತ್ತು ಅಶೋಕಪುರಂ ರೈಲು ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ ಗೇಟ್ (ಜಯನಗರ) ಸಂಖ್ಯೆ ನಾಲ್ಕರಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.
ರಸ್ತೆ ಬಳಕೆದಾರರಲ್ಲಿ ಲೆವೆಲ್ ಕ್ರಾಸಿಂಗ್‌ಗಳಲ್ಲಿ ಸುರಕ್ಷಿತವಾಗಿ ಸಂಚರಿಸುವ ಬಗ್ಗೆ ಅರಿವು ಮೂಡಿಸುವುದು ಹಾಗೂ ನಿರ್ಲಕ್ಷ್ಯ, ಸುರಕ್ಷತಾ ನಿಯಮಗಳ ಉಲ್ಲಂಘನೆಯಿಂದ ಸಂಭವಿಸುವ ಅಪಘಾತಗಳನ್ನು ತಡೆಗಟ್ಟುವ ಕುರಿತು ಭಿತ್ತಿಪತ್ರ ಪ್ರದರ್ಶಿಸಿ, ಸಾರ್ವಜನಿಕರಿಗೆ ಕರಪತ್ರ ವಿತರಿಸಲಾಯಿತು.
ಲೆವೆಲ್ ಕ್ರಾಸಿಂಗ್ ಅನ್ನು ಪರಿಶೀಲಿಸಿ, ರಸ್ತೆ ಬಳಕೆದಾರರೊಂದಿಗೆ ಸಂವಾದ ನಡೆಸಿ, ರೈಲು ಹಳಿಗಳನ್ನು ದಾಟುವಾಗ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯತೆ ಕುರಿತು ಜಾಗೃತಿ ಮೂಡಿಸಿದರು.
ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ಮಾತನಾಡಿ, ಲೆವೆಲ್ ಕ್ರಾಸಿಂಗ್‌ಗಳಲ್ಲಿ ಸುರಕ್ಷತೆ ಕೇವಲ ರೈಲ್ವೆಯ ಜವಾಬ್ದಾರಿಯಲ್ಲ, ಅದು ಸಾರ್ವಜನಿಕರ ಸಹಭಾಗಿತ್ವವು ಇರಲಿದೆ ಎಂದು ಹೇಳಿದರು.
ರೈಲು ಲೆವೆಲ್ ಕ್ರಾಸಿಂಗ್‌ಗಳನ್ನು ದಾಟುವಾಗ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸಿ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ರೈಲು ಹಳಿ ದಾಟುವ ಮುನ್ನ ನಿಲ್ಲಿಸಿ, ಎರಡೂ ಕಡೆ ಗಮನಹರಿಸಿ, ರೈಲು ಬರುತ್ತಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು.
ಗೇಟ್ ಮುಚ್ಚಿರುವಾಗ ಅಥವಾ ಎಚ್ಚರಿಕೆ ಸೂಚನೆಗಳು ಕಾರ್ಯನಿರ್ವಹಿಸುತ್ತಿರುವಾಗ ಎಂದಿಗೂ ಹಳಿಯನ್ನು ದಾಟಲು ಪ್ರಯತ್ನಿಸಬಾರದು. ರೈಲು ದೂರದಲ್ಲಿದೆ ಎಂದು ಭಾವಿಸಿ ಆತುರದಿಂದ ದಾಟುವುದು ಅಪಾಯಕಾರಿ ಎಂದು ಎಚ್ಚರಿಸಿದರು.
ಹಳಿಯನ್ನು ದಾಟುವ ಸಂದರ್ಭದಲ್ಲಿ ಮೊಬೈಲ್ ಅಥವಾ ಗಮನ ಬೇರೆಡೆ ಸೆಳೆಯುವಂತಹ ಸಾಧನ ಬಳಸಬಾರದು. ಗೇಟ್ ಕೀಪರ್‌ಗಳು ಹಾಗೂ ರೈಲ್ವೆ ಸಿಬ್ಬಂದಿಯ ಸೂಚನೆ ಪಾಲಿಸಬೇಕು. ಅನಧಿಕೃತವಾಗಿ ಹಳಿಗಳನ್ನು ದಾಟುವ ಬದಲು ಅಧಿಕೃತ ಲೆವೆಲ್ ಕ್ರಾಸಿಂಗ್‌ಗಳನ್ನು ಮಾತ್ರ ಬಳಸಬೇಕು ಎಂದು ತಿಳಿಸಿದರು.
ರಸ್ತೆ ಬಳಕೆದಾರರೊಂದಿಗೆ ಸಂವಾದ ನಡೆಸಿ, ಸುರಕ್ಷಿತವಾಗಿ ಲೆವೆಲ್ ಕ್ರಾಸಿಂಗ್‌ಗಳನ್ನು ದಾಟುವ ವಿಧಾನಗಳ ಬಗ್ಗೆ ಪ್ರಾಯೋಗಿಕ ಪ್ರದರ್ಶನಗಳನ್ನು ನೀಡಲಾಯಿತು. ನೈರುತ್ಯ ರೈಲ್ವೆಯ ಸ್ಕೌಟ್ಸ್ ಮತ್ತು ಗೈಡ್ಸ್ ತಂಡವು ಪ್ರದರ್ಶಿಸಿದ ನುಕ್ಕಡ್ ನಾಟಕವು ಸಾರ್ವಜನಿಕರಿಗೆ ಸುರಕ್ಷತಾ ಸಂದೇಶ ಸಾರಿತು.
ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶಮ್ಮಾಸ್ ಹಮೀದ್, ವಿಭಾಗೀಯ ಹಣಕಾಸು ವ್ಯವಸ್ಥಾಪಕ ಪೃಥ್ವಿ ಎಸ್ ಹುಲ್ಲತ್ತಿ, ವಿಭಾಗದ ಹಿರಿಯ ಅಧಿಕಾರಿಗಳು ಇದ್ದರು.