ಸಮಾಜಮುಖಿ ಸಿನಿಮಾ ಕಥೆಗಳಿಗೆ ಸಾಹಿತ್ಯ ಪ್ರೇರಣೆ

ಮುಕ್ತಗಂಗೋತ್ರಿ ಕಾವೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಿನಿಮಾ, ಸಾಹಿತ್ಯ ಮತ್ತು ಸಂಸ್ಕೃತಿ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನವನ್ನು ಸಾಹಿತಿ ಚಂದ್ರಶೇಖರ ಕಂಬಾರ ಉದ್ಘಾಟಿಸಿದರು. ಪ್ರೊ.ಸೆನೇಶ್ ದಿಸ್ಸನಾಯಕ ಬಂಗಾರ, ಪ್ರೊ. ಎಸ್.ನಿಖಿಲಾ, ಪ್ರೊ.ಎಸ್.ಕೆ.ನವೀನ್‌ಕುಮಾರ್, ಪ್ರೊ.ಎಂ.ರಾಮನಾಥಂ ನಾಯ್ಡು, ಡಾ.ಎಸ್.ಶ್ರೀಕಾಂತ ಇನ್ನಿತರರಿದ್ದರು.
ಮುಕ್ತಗಂಗೋತ್ರಿ ಕಾವೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಿನಿಮಾ, ಸಾಹಿತ್ಯ ಮತ್ತು ಸಂಸ್ಕೃತಿ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನವನ್ನು ಸಾಹಿತಿ ಚಂದ್ರಶೇಖರ ಕಂಬಾರ ಉದ್ಘಾಟಿಸಿದರು. ಪ್ರೊ.ಸೆನೇಶ್ ದಿಸ್ಸನಾಯಕ ಬಂಗಾರ, ಪ್ರೊ. ಎಸ್.ನಿಖಿಲಾ, ಪ್ರೊ.ಎಸ್.ಕೆ.ನವೀನ್‌ಕುಮಾರ್, ಪ್ರೊ.ಎಂ.ರಾಮನಾಥಂ ನಾಯ್ಡು, ಡಾ.ಎಸ್.ಶ್ರೀಕಾಂತ ಇನ್ನಿತರರಿದ್ದರು.
Published on
ಮೈಸೂರು: ಕನ್ನಡ ಚಿತ್ರರಂಗದಲ್ಲಿ ಅನೇಕ ಕಲಾತ್ಮಕ, ಸಮಾಜಮುಖಿ ಕಥೆಗಳು ಸಾಹಿತ್ಯದಿಂದ ಪ್ರೇರಿತವಾಗಿ ಮೂಡಿಬಂದಿವೆ ಎಂದು ಸಾಹಿತಿ ಡಾ.ಚಂದ್ರಶೇಖರ  ಕಂಬಾರ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಇಂಗ್ಲಿಷ್ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಮುಕ್ತ ಗಂಗೋತ್ರಿ ಕಾವೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಿನಿಮಾ, ಸಾಹಿತ್ಯ ಮತ್ತು ಸಂಸ್ಕೃತಿ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿ, ಸಾಹಿತ್ಯದಿಂದ ಪ್ರೇರಿತವಾಗಿ ಮೂಡಿ ಬಂದಿರುವ ಸಿನಿಮಾಗಳು ಕನ್ನಡ ಸಂಸ್ಕೃತಿ, ಪರಿಚಯ ಮತ್ತು ಸಂತುಷ್ಟಿಯ ಅನೇಕ ಮುಖ, ಸಾಮಾಜಿಕ ಸಮಸ್ಯೆಗಳನ್ನೂ ಚಿತ್ರಜಗತ್ತಿಗೆ ಪರಿಚಯಿಸಿವೆ ಎಂದರು.
ಸಂಸ್ಕೃತಿ, ಸಾಹಿತ್ಯ ಮತ್ತು ಸಿನಿಮಾ ಒಟ್ಟಿಗೆ ಸಾಗುವ ಜ್ಞಾನದ ನದಿ. ಸಾಹಿತ್ಯವು ಸಮಾಜದ ಸಂಸ್ಕೃತಿಯ ವ್ಯಕ್ತೀಕರಣವಾಗಿದ್ದು, ಭಾಷೆಯ ಮೂಲಕ ಆ ಸಮುದಾಯದ ಮೌಲ್ಯ, ಪರಂಪರೆ ಮತ್ತು ಬದುಕಿನ ವಾಸ್ತವದ ಚಿತ್ರಣ ನೀಡುತ್ತದೆ. 
ಆಧುನಿಕ ಯುಗದಲ್ಲಿ ಸಿನಿಮಾ ದೃಶ್ಯಕಲೆಗಳ, ಸಂಗೀತ ಮತ್ತು ವಿಚಾರಗಳ ಸಾಗರವಾಗಿದ್ದು, ಸಾಹಿತ್ಯದ ಕಥೆಗಳನ್ನು ವಿಭಿನ್ನ ಮಾಧ್ಯಮಗಳಲ್ಲಿ ಪ್ರಸ್ತುತಪಡಿಸುವ ಮೂಲಕ ಹೊಸ ಸಾಂಸ್ಕೃತಿಕ ಚರ್ಚೆಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ನುಡಿದರು.
ಸಾಹಿತ್ಯ-ಸಂಸ್ಕೃತಿ-ಸಿನಿಮಾ ಈ ಮೂರುಗಳ ಸಮ್ಮಿಲನ ಹೊಸ ಆಲೋಚನೆ, ಸಮಾಜಮುಖಿ ಸಂದೇಶ ಹಾಗೂ ಕಲಾತ್ಮಕ ಅರ್ಥ ವ್ಯಾಖ್ಯಾನವನ್ನು ಒದಗಿಸುವ ಅಭಿವ್ಯಕ್ತಿಯ ಮೇಲುಗೈಯಾಗುವುದು. ಈ ಸಮ್ಮಿಲನದ ಅಧ್ಯಯನದಿಂದ ವಿದ್ಯಾರ್ಥಿಗಳು ದೇಶೀಯ ಪರಂಪರೆ, ಜಾನಪದ ಹಾಗೂ ಸಮಕಾಲೀನ ಸಾಂಸ್ಕೃತಿಕ ಚಿಂತನೆಯನ್ನು ಸಮರ್ಥವಾಗಿ ಗ್ರಹಿಸಬಹುದು ಎಂದರು.
ಇಲ್ಲಿ ಚರ್ಚೆಗೆ ಒಳಪಡುವ ವಿಷಯಗಳು ಇಂದಿನ ಸಂದರ್ಭಕ್ಕೆ ಔಚಿತ್ಯಪೂರ್ಣವಾಗಿವೆ. ಶೀಘ್ರವೇ ಈ ಎಲ್ಲವನ್ನೂ ಪುಸ್ತಕ ರೂಪದಲ್ಲಿ ತಂದರೆ ಉತ್ತಮ ಆಧಾರ ಗ್ರಂಥವಾಗುತ್ತದೆ ಎಂದರು.
ಶ್ರೀಲಂಕಾದ ಸಿನಿಮಾ ಮಂಡಳಿ, ಕಲಾ ಪರಿಷತ್‌ನ ಅಧ್ಯಕ್ಷ ಪ್ರೊ.ಸೆನೇಶ್ ದಿಸ್ಸನಾಯಕ ಬಂಗಾರ ಮಾತನಾಡಿ, ಸಾಹಿತ್ಯ-ಸಂಸ್ಕೃತಿ-ಸಿನಿಮಾ ಪರಸ್ಪರ ಪೂರಕ ಮತ್ತು ಪರಿಣಾಮವನ್ನೂ ಬೀರುತ್ತವೆ. ಸಾಹಿತ್ಯ, ಸಂಸ್ಕೃತಿಯ ಪ್ರತಿಬಿಂಬ ಸಿನಿಮಾ. ಅವುಗಳು ಸಿನಿಮಾಕ್ಕೆ ಪ್ರೇರಣೆ ಮತ್ತು ಸ್ಫೂರ್ತಿದಾಯಕವಾಗಿವೆ. ಸಿನಿಮಾದೊಂದಿಗೆ ನಾಟಕ, ಕವನದಲ್ಲೂ ಇವುಗಳ ಪ್ರಭಾವ ಗೋಚರವಾಗುತ್ತದೆ ಎಂದರು.
ಸಿನಿಮಾ ಇದೀಗ ಕಲೆಯಷ್ಟೇ ಅಲ್ಲದೆ, ಅದಕ್ಕೆ ವಾಣಿಜ್ಯದ ಆಯಾಮ ಸಹ ದೊರೆತಿದೆ. ಆದಾಗ್ಯೂ ಸಾಹಿತ್ಯ, ಸಿನಿಮಾ, ಸಂಸ್ಕೃತಿ ಪರಸ್ಪರ ಸಾಂಸ್ಕೃತಿಕ ವಿನಿಮಯ, ಕಲೆಗಳ ಸಂವಹನಕ್ಕೆ ನೆರವಾಗಿದೆ ಎಂದರು.
ಹೈದ್ರಾಬಾದ್‌ನ ಇಂಗ್ಲಿಷ್, ವಿದೇಶಿ ಭಾಷಾ ವಿಶ್ವವಿದ್ಯಾಲಯದ ಸಿನಿಮಾ ಅಧ್ಯಯನ ವಿಭಾಗದ ಪ್ರೊ.ಎಸ್.ನಿಖಿಲಾ, ಕರಾಮುವಿ ಕುಲಸಚಿವ ಪ್ರೊ.ಎಸ್.ಕೆ.ನವೀನ್‌ಕುಮಾರ್, ಡೀನ್(ಶೈಕ್ಷಣಿಕ) ಪ್ರೊ.ಎಂ.ರಾಮನಾಥಂ ನಾಯ್ಡು, ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ.ಎಸ್.ಶ್ರೀಕಾಂತ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net