ಮೈಸೂರು: ಸಾರ್ವಜನಿಕರಿಗೆ ಅವಶ್ಯಕವಿರುವ ಯೋಜನೆಗಳ ಪ್ರಸ್ತಾವನೆಗಳನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಿ. ಯೋಜನೆಗಳ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರೆ ಆಯವ್ಯಯದಲ್ಲಿ ಯೋಜನೆ ಸೇರಿಸುವುದರ ಜತೆಗೆ ಜಿಲ್ಲೆಯು ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಡಿ.ದೇವರಾಜ ಅರಸು ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದು ನಂತರ ಮಾತನಾಡಿದರು.
ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಅವಶ್ಯಕವಿರುವ ಹೊಸ ಹಾಸ್ಟಲ್‌ಗಳು ಹಾಗೂ ಹಾಸ್ಟೆಲ್‌ಗಳಿಗೆ ಸ್ವಂತ ಕಟ್ಟಡಗಳ ವಿವರವನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ದೊರಕಿಸಬೇಕು ಎಂಬುದು ಮುಖ್ಯ ಆಶಯ ಎಂದರು.
ಆಶ್ರಮ ಶಾಲೆಗಳಲ್ಲಿ ಬಹುತೇಕ ಹೊರಗುತ್ತಿಗೆ ನೌಕರರು ಕೆಲಸ ನಿರ್ವಹಿಸುತ್ತಿದ್ದು, ನೇಮಕಾತಿ ಪ್ರಕ್ರಿಯೆ ಬಗ್ಗೆ ಹಾಗೂ ಹಾಡಿ ಜನರಿಗೆ ಎಚ್.ಡಿ.ಕೋಟೆ, ಪಿರಿಯಾಪಟ್ಟಣ ಹಾಗೂ ಹುಣಸೂರು ತಾಲೂಕಿನಲ್ಲಿ ಕೌಶಲ್ಯಾಧಾರಿತ ತರಬೇತಿ ಕೇಂದ್ರಗಳನ್ನು ತೆರೆಯಬೇಕು ಎಂದು ಸಭೆಯಲ್ಲಿ ಚರ್ಚಿಸಲಾಯಿತು.
ಮೈಸೂರು ನಗರದಲ್ಲಿ 390 ಕೆಎಸ್‌ಆರ್‌ಟಿಸಿ ಬಸ್‌ಗಳು ಮಾತ್ರ ಕಳೆದ 15 ವರ್ಷದಿಂದ ಸಂಚಾರಕ್ಕೆ ಲಭ್ಯವಿದೆ. ಜನಸಂಖ್ಯೆ ಹೆಚ್ಚಳವಾಗಿದ್ದು, ಹೆಚ್ಚಿನ ಬಸ್ ಹಾಗೂ ಡಿಪೋನ ಅವಶ್ಯಕತೆ ಇರುತ್ತದೆ. ಈ ಬಗ್ಗೆ ಮಾಹಿತಿ ಸಲ್ಲಿಸುವಂತೆ ತಿಳಿಸಿದರು.
ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು. ಅವರಿಗೆ ಬೇಕಿರುವ ವಸತಿ ಶಾಲೆಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಹಾಗೂ ಇನ್ನಿತರೆ ಯೋಜನೆಗಳ ಬಗ್ಗೆ ವರದಿ ಸಿದ್ಧಪಡಿಸುವಂತೆ ತಿಳಿಸಿದರು.
ಅಧಿಕಾರಿಗಳು ಸಭೆಯಲ್ಲಿ ಚರ್ಚಿಸುವ ಕೆಲವು ವಿಷಯಗಳನ್ನು ಇಲಾಖಾ ಮಂತ್ರಿಗಳ ವ್ಯಾಪ್ತಿಯಲ್ಲಿ ಚರ್ಚಿಸಿ ಸರಿಪಡಿಸಬಹುದು. ಅಂತಹ ವಿಷಯಗಳನ್ನು ಅವರ ಗಮನಕ್ಕೆ ಆಯವ್ಯಯದಲ್ಲಿ ಸೇರಿಸಬೇಕಿರುವ ವಿಷಯಗಳನ್ನು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ, ಅಧಿಕಾರಿಗಳು ಜಿಲ್ಲೆಯಲ್ಲಿ ಅವಶ್ಯಕವಿರುವ ಯೋಜನೆಗಳ ಕುರಿತು ಕ್ರೂಢೀಕೃತ ವರದಿಯನ್ನು ಶೀಘ್ರವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸುವಂತೆ ತಿಳಿಸಿದರು.
ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಮುಂದಿನ ದಿನಗಳಲ್ಲಿ ಕಸ ವಿಲೇವಾರಿ ಹಾಗೂ ಯುಜಿಡಿ ವ್ಯವಸ್ಥೆ, ಸಾರ್ವಜನಿಕ ಈಜುಕೊಳ, ರಸ್ತೆಗಳಲ್ಲಿ ಪಾದಚಾರಿ ಸ್ಥಳಗಳನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಯುಕೇಶ್ ಕುಮಾರ್, ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಕ್ಷಿತ್ ಇತರರಿದ್ದರು.