ಭಾರತೀಯ ತತ್ತ್ವಶಾಸ್ತ್ರ ಶ್ರೇಷ್ಠ : ಕುಲಪತಿ ಪ್ರೊ.ಎನ್.ಕೆ. ಲೋಕನಾಥ್
ಮೈಸೂರು ನಗರದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶುಕ್ರವಾರ ‘ದರ್ಶನೇಷು ಖ್ಯಾತಿಸ್ವರೂಪವಿಮರ್ಶಃ’ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಉದ್ಘಾಟಿಸಿದರು. ಶ್ರೀ 1008 ಸತ್ಯಾತ್ಮತೀರ್ಥ ಸ್ವಾಮೀಜಿ, ಪ್ರೊ. ಶ್ರೀನಿವಾಸ ವರಖೇಡಿ, ಡಾ.ಎ.ವಿ. ನಾಗಸಂಪಿಗೆ, ಡಾ.ಡಿ.ಪಿ. ಮಧುಸೂದನಾಚಾರ್ಯ, ಕೃಷ್ಣ ಎ. ನಾಗಸಂಪಿಗೆ ಇದ್ದರು.
ಮೈಸೂರು: ಭಾರತೀಯ ತತ್ತ್ವಶಾಸ್ತ್ರ ಶ್ರೇಷ್ಠವಾಗಿದ್ದು, ಅದನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಬೇಸರ ವ್ಯಕ್ತಪಡಿಸಿದರು.
ನಗರದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ಪ್ರಾಚ್ಯವಿದ್ಯಾ ಸಂಶೋಧನಾ ಸಂಸ್ಥೆ, ಶ್ರೀ ವ್ಯಾಸತೀರ್ಥ ಸಂಶೋಧನ ಪ್ರತಿಷ್ಠಾನದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ‘ದರ್ಶನೇಷು ಖ್ಯಾತಿಸ್ವರೂಪವಿಮರ್ಶಃ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿ, ಈ ವಿಚಾರ ಸಂಕಿರಣದ ಮೂಲಕ ತತ್ತ್ವ ಶಾಸ್ತ್ರದಲ್ಲಿ ನಮ್ಮ ಜ್ಞಾನ ವೃದ್ಧಿಯಾಗಲಿ. ಆ ಮೂಲಕ ಭವಿಷ್ಯದಲ್ಲಿ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಶ್ರೀ ಉತ್ತರಾಧಿಮಠದ ಶ್ರೀ 1008 ಸತ್ಯಾತ್ಮತೀರ್ಥ ಸ್ವಾಮೀಜಿ ಸಾನ್ನಿಧ್ಯ ಮಾತನಾಡಿ, ಯಥಾರ್ಥಜ್ಞಾನವನ್ನು ಪಡೆಯಲು ಎಲ್ಲರು ಪ್ರಯತ್ನಿಸಬೇಕು. ಒಳ್ಳೆಯ ಆಹಾರವನ್ನು ನಾವು ತೆಗೆದುಕೊಳ್ಳಬೇಕಾದರೆ ನಮಗೆ ಒಳ್ಳೆಯ ಆಹಾರ ಯಾವುದು, ಕೆಟ್ಟ ಆಹಾರ ಯಾವುದು ಎಂಬುದನ್ನು ತಿಳಿದುಕೊಳ್ಳಬೇಕು. ಅದೇ ರೀತಿ ಯಥಾರ್ಥ ಜ್ಞಾನ ಏನು ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ, ಶೀ ವ್ಯಾಸತೀರ್ಥ ಸಂಶೋಧನ ಪ್ರತಿಷ್ಠಾನದ ನಿರ್ದೇಶಕ ಡಾ.ಎ.ವಿ. ನಾಗಸಂಪಿಗೆ, ಪ್ರಾಚ್ಯವಸ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಡಿ.ಪಿ. ಮಧುಸೂದನಾಚಾರ್ಯ, ಸಂಶೋಧನಾ ಸಹಾಯಕ ಕೃಷ್ಣ ಎ. ನಾಗಸಂಪಿಗೆ ಇದ್ದರು.