ಭಾರತ ಸ್ವಾವಲಂಬನೆ ಸಾಧಿಸುವತ್ತ ಹೆಜ್ಜೆ ಇಡುವುದು ಅಗತ್ಯ: ಎ.ಅಪ್ಪಾರಾವ್ ಅಭಿಮತ

ಕೇಂದ್ರೀಯ ಆಹಾರ ತಂತ್ರಜ್ಞಾ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ)ಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆ ಸಮಾರಂಭವನ್ನು ಎ.ಅಪ್ಪಾರಾವ್ ಉದ್ಘಾಟಿಸಿದರು.ಪ್ರೊ.ಗಿರಿಧರ ಪರ್ವತಂ, ಅಶುತೋಷ್ ಎ.ಇನಾಂದಾರ್ ಇದ್ದರು.
ಕೇಂದ್ರೀಯ ಆಹಾರ ತಂತ್ರಜ್ಞಾ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ)ಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆ ಸಮಾರಂಭವನ್ನು ಎ.ಅಪ್ಪಾರಾವ್ ಉದ್ಘಾಟಿಸಿದರು.ಪ್ರೊ.ಗಿರಿಧರ ಪರ್ವತಂ, ಅಶುತೋಷ್ ಎ.ಇನಾಂದಾರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಶ್ಚಿಮ-ಏಷ್ಯಾ ದೇಶದಲ್ಲಿ ನಡೆಯುತ್ತಿರುವ ಯುದ್ಧದ ಸನ್ನಿವೇಶದಿಂದ ಆಮದು ವಸ್ತುಗಳ ಅಭಾವ ತಲೆದೋರಿ ಬೆಲೆ ಏರಿಕೆಯಾಗಿ ಹಣದುಬ್ಬರವಾಗುತ್ತಿದೆ
  • ವಿಶ್ವದ ಆಹಾರ ಕ್ಷೇತ್ರದಲ್ಲಿ ತಂತ್ರಜ್ಞಾನದ ಆವಿಷ್ಕಾರ ವೇಗವಾಗಿ ಬೆಳೆಯುತ್ತಿದ್ದು, ಆಹಾರಾಭ್ಯಾಸದ ಚಿತ್ರಣವನ್ನೇ ಬದಲಿಸಿದೆ
ಮೈಸೂರು:ಪ್ರಸ್ತುತ ಸನ್ನಿವೇಶದಲ್ಲಿ ಭಾರತ ಆಮದು ವಸ್ತುಗಳ ಅವಲಂಬನೆ ಕಡಿಮೆ ಮಾಡಿ ಸ್ವಾವಲಂಬನೆ ಸಾಧಿಸುವತ್ತ ಹೆಜ್ಜೆ ಇಡುವ ಅಗತ್ಯವಿದೆ ಎಂದು ಬೆಂಗಳೂರಿನ ಸಿಇಸಿ ಫ್ಲೇವರ್ಸ್ ಆ್ಯಂಡ್ ಫ್ರಾಗ್ರೆನ್ಸ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಎ.ಅಪ್ಪಾರಾವ್ ಅಭಿಪ್ರಾಯಪಟ್ಟರು.
ನಗರದ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ)ಯಲ್ಲಿ ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಅಭಿವೃದ್ಧಿಯಲ್ಲಿ ಒಳಗೊಳ್ಳುವಿಕೆ (ಇನ್‌ಕ್ಲೂಸಿವ್ ಗ್ರೋತ್) ಕುರಿತು ಮಾತನಾಡಿದರು.
ಭಾರತ ಹಿಂದಿನಿಂದಲೂ ಸಾಂಬಾರ ಪದಾರ್ಥ, ರೇಷ್ಮೆ ಬಟ್ಟೆ ಇನ್ನಿತರ ವಸ್ತುಗಳ ರಫ್ತಿಗೆ ಹೆಸರುವಾಸಿಯಾಗಿತ್ತು. ಆದರೆ ಬದಲಾದ ಜಾಗತಿಕ ಸನ್ನಿವೇಶದಲ್ಲಿ ಆಮದು ವಸ್ತುಗಳ ಮೇಲೆ ಕೈಗಾರಿಕೆಗಳ ಕಚ್ಚಾವಸ್ತು, ತೈಲ ಸೇರಿದಂತೆ ಇನ್ನಿತರ ವಸ್ತುಗಳ ಮೇಲೆ ನಿಂತಿದೆ ಎಂದು ಹೇಳಿದರು.
ಈಗ ಪಶ್ಚಿಮ-ಏಷ್ಯಾ ದೇಶದಲ್ಲಿ ನಡೆಯುತ್ತಿರುವ ಯುದ್ಧದ ಸನ್ನಿವೇಶದಿಂದ ಆಮದು ವಸ್ತುಗಳ ಅಭಾವ ತಲೆದೋರಿ ಬೆಲೆ ಏರಿಕೆಯಾಗಿ ಹಣದುಬ್ಬರವಾಗುತ್ತಿದೆ. ಇದು ಜಾಗತಿಕ ವಹಿವಾಟಿನ ಮೇಲೆ ಗಂಭೀರ ಪರಿಣಾಮ ಬೀರಿದೆ. ಆದ್ದರಿಂದ ಆಮದು ವಸ್ತುಗಳ ಅವಲಂಬನೆ ಕಡಿಮೆ ಮಾಡಿ, ಸ್ವಾವಲಂಬನೆ ಸಾಧಿಸುವ ಗುರಿಯತ್ತ ದೇಶವು ಹೆಜ್ಜೆ ಇಡಬೇಕು ಎಂದರು.
ಫ್ಲೇವರ್ (ರುಚಿ) ಉದ್ಯಮವು ಸವಾಲುಗಳನ್ನು ಎದುರಿಸುತ್ತಿದ್ದು, ನೈಸರ್ಗಿಕ ಸಂಶ್ಲೇಷಿತ ಅಣು ಮತ್ತು ಕಿಣ್ವಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಯುದ್ಧಗಳು ಸರಕು ಪೂರೈಕೆ ಸರಪಳಿಯನ್ನೇ ತುಂಡರಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವಿಶ್ವದ ಆಹಾರ ಕ್ಷೇತ್ರದಲ್ಲಿ ತಂತ್ರಜ್ಞಾನದ ಆವಿಷ್ಕಾರ ವೇಗವಾಗಿ ಬೆಳೆಯುತ್ತಿದ್ದು, ಆಹಾರಾಭ್ಯಾಸದ ಚಿತ್ರಣವನ್ನೇ ಬದಲಿಸಿದೆ. ಆಹಾರ ರುಚಿ ಮತ್ತು ಸುಗಂಧ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಂದಿದೆ. ರುಚಿಗಳಲ್ಲಿ (ಫ್ಲೇವರ್ಸ್) ಮತ್ತಷ್ಟು ಗುಣಮಟ್ಟ ಹಾಗೂ ಸ್ಥಿರತೆ ಕಾಯ್ದುಕೊಳ್ಳಲು ನೆರವಾಗಿದೆ ಎಂದು ತಿಳಿಸಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಆಹಾರೋತ್ಪನ್ನಗಳು ಸ್ಪರ್ಧೆಯನ್ನು ನೀಡಬೇಕಾದರೆ ನಮ್ಮ ತಂತ್ರಜ್ಞಾನವನ್ನು ಉನ್ನತೀಕರಿಸಬೇಕು. ಇಲ್ಲಿನ ಸ್ವಾದವನ್ನು ತಲುಪಿಸಲು ಆಹಾರ ಸಂಶೋಧನೆ ನಡೆಯಬೇಕು. ಈ ನಿಟ್ಟಿನಲ್ಲಿ ಸಿಎಫ್‌ಟಿಆರ್‌ಐ ದೇಶದ ಎಲ್ಲ ಕಂಪನಿಗಳಿಗೆ ಮಾತೃ ಸಂಸ್ಥೆಯಾಗಿ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಿಎಫ್‌ಟಿಆರ್‌ಐ ನಿರ್ದೇಶಕ ಪ್ರೊ.ಗಿರಿಧರ ಪರ್ವತಂ, ಹಿರಿಯ ವಿಜ್ಞಾನಿ ಅಶುತೋಷ್ ಎ.ಇನಾಂದಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net