ಭಾರತ ಇಂದು ವಿಶ್ವದ ಬಲಿಷ್ಠ ರಾಷ್ಟ್ರಗಳಲ್ಲಿ ಒಂದು

History Saved
History Saved
Published on
ಸರ್ಕಾರಗಳು ಮಾತ್ರ ಸಮಾಜದ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ. ಹೀಗಾಗಿ ಸ್ವಯಂ ಸೇವಾ ಸಂಸ್ಥೆಗಳಿಗೂ ಅವಕಾಶ ನೀಡಿ ಸಮಾಜಮುಖಿ ಕಾರ್ಯಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ತುಮಕೂರು ವಿವಿಯ ವಿಶ್ರಾಂತ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಹೇಳಿದರು.
ನಗರದ ಮೇಟಗಳ್ಳಿಯಲ್ಲಿರುವ ರಂಗರಾವ್ ಸ್ಮಾರಕ ವಿಕಲಚೇತನರ ಶಾಲೆಯ ಸೀತಾ ಸಭಾಂಗಣದಲ್ಲಿ ಮೈಸೂರು ಜಿಲ್ಲಾ ಸೇವಾ ಸಂಸ್ಥೆಗಳ ಒಕ್ಕೂಟ(ಮೈತ್ರಿ)ದ ವತಿಯಿಂದ ಶನಿವಾರ ಅಯೋಜಿಸಿದ್ದ ವಿಶ್ವ ಸ್ವಯಂ ಸೇವಾ ಸಂಸ್ಥೆಗಳ ದಿನ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತವು ಇಂದು ವಿಶ್ವದ ಬಲಿಷ್ಠ ರಾಷ್ಟ್ರಗಳಲ್ಲಿ ಒಂದಾಗಿ ಹೊರಹೊಮ್ಮಲು ಸಂವಿಧಾನವೇ ಬುನಾದಿಯಾಗಿದೆ. ಎನ್‌ಜಿಒ ಸಂಸ್ಥೆಗಳು ಸಮಾಜದಲ್ಲಿ ಉತ್ತಮ ಸಂಬಂಧ ಬೆಳೆಸಿ, ಅನೇಕ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಒಡನಾಡಿ ಸಂಸ್ಥೆಯ ನಿರ್ದೇಶಕ ಸ್ಟಾೃನ್ಲಿ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಸ್ವಯಂಸೇವಾ ಸಂಸ್ಥೆಗಳು ಕೇವಲ ಸೇವಾ ಕಾರ್ಯಗಳಿಗೆ ಸೀಮಿತವಾಗದೇ, ಸುಸ್ಥಿರ ಅಭಿವೃದ್ಧಿಯ ದಿಸೆಯಲ್ಲಿ ಸಮಾಜವನ್ನು ಪ್ರಶ್ನಿಸುವ ಮತ್ತು ಜಾಗೃತಿಗೊಳಿಸುವ ಕಾರ್ಯವನ್ನು ಮಾಡಬೇಕಾಗಿದೆ. ದೇಶದಲ್ಲಿ ಹಣವಂತರು ಮತ್ತು ವಂಚಕರು ನಾಯಕರಾಗಿ ಆಡಳಿತ ನಡೆಸುತ್ತಿರುವುದು ಸಮಾಜವನ್ನು ದುಸ್ಥಿತಿಗೆ ತಳ್ಳುತ್ತಿದೆ ಎಂದು ಕಳಕಳ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವದಲ್ಲಿ ನಿರಂಕುಶ ಆಡಳಿತದ ಲಕ್ಷಣಗಳು ಕಾಣಿಸುತ್ತಿವೆ. ಸಮಾಜದ ಬಗ್ಗೆ ಕಾಳಜಿ ಇರುವವರು ರಾಜಕೀಯಕ್ಕೆ ಬರಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರು ಜಾತಿ ಮತ್ತು ಧರ್ಮದ ಕಟ್ಟಳೆಗಳಿಂದ ದೂರ ಉಳಿದು ಜನಸಾಮಾನ್ಯರೊಂದಿಗೆ ಬೆರೆತು ಕೆಲಸ ಮಾಡಬೇಕು ಎಂದರು.
ಆರ್‌ಎಲ್‌ಎಚ್‌ಪಿ ನಿರ್ದೇಶಕಿ ಸರಸ್ವತಿ ಮಾತನಾಡಿ, ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿರುವುದು ಆತಂಕ ಮೂಡಿಸಿದೆ. ನೈತಿಕ ಮೌಲ್ಯಗಳ ಕುಸಿತ, ಮಕ್ಕಳ ಮೇಲಿನ ಹಿಂಸಾಚಾರ ಮತ್ತು ಮಹಿಳೆಯರ ಮೇಲಿನ ಅಪರಾಧಗಳು ಹೆಚ್ಚುತ್ತಿರುವುದು ಸಮಾಜದ ಅಸ್ವಸ್ಥತೆಯನ್ನು ತೋರಿಸುತ್ತದೆ ಎಂದು ಹೇಳಿದರು.
ಎನ್.ಆರ್. ಫೌಂಡೇಷನ್ ಅಧ್ಯಕ್ಷ ಮಹೇಶ್‌ಚಂದ್ರಗುರು ಮಾತನಾಡಿದರು. ಕಾರ್ಯಕ್ರಮವನ್ನು ಪತ್ರಕರ್ತೆ ರಶ್ಮಿ ಕೋಟಿ ಉದ್ಘಾಟಿಸಿದರು. ಪರಿವರ್ತನ ಸಂಸ್ಥೆಯ ಜಿ.ಎಸ್.ರಾಜೇಗೌಡ, ಮಹಿಳಾ ಪರ ಹೋರಾಟಗಾರ್ತಿ ಕೆ.ಎನ್.ಸುನೀತಾ, ಎನ್.ಆರ್.ಸಂಸ್ಥೆಯ ಆರ್.ಹರೀಶ್ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಎನ್.ಆರ್. ನಿಸರ್ಗ ಫೌಂಡೇಶನ್ ನಿರ್ದೇಶಕ ಎಚ್.ಡಿ. ಕೋಟೆ ಪ್ರಭು, ಮೈತ್ರಿ ಅಧ್ಯಕ್ಷ ಡಾ. ಮೋಹನ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net