ಮೈಸೂರು ರೇಷ್ಮೆ ಸೀರೆ ಪೂರೈಕೆ ಹೆಚ್ಚಿಸಿ

ಮೈಸೂರು ರೇಷ್ಮೆ ಸೀರೆ
ಮೈಸೂರು ರೇಷ್ಮೆ ಸೀರೆ
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಟಿ.ಎಸ್.ಶ್ರೀವತ್ಸ ಒತ್ತಾಯ
ಮೈಸೂರು: ಪ್ರತಿಷ್ಠಿತ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ(ಕೆಎಸ್‌ಐಸಿ) ಉತ್ಪಾದಿಸುವ ಮೈಸೂರು ರೇಷ್ಮೆ ಸೀರೆಗಳಿಗೆ ಭಾರಿ ಬೇಡಿಕೆಯಿದ್ದು, ಉತ್ಪಾದನೆ ಹೆಚ್ಚಳ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಶಾಸಕ ಟಿ.ಎಸ್.ಶ್ರೀವತ್ಸ ಒತ್ತಾಯಿಸಿದರು. 
ವಿಧಾನಸಭೆಯಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶದಲ್ಲಿ ಸೋಮವಾರ ಚುಕ್ಕೆ ಗುರುತಿನ ಪ್ರಶ್ನೆ ಎತ್ತಿದ ಶಾಸಕರು, ಬೇಡಿಕೆಗೆ ಅನುಗುಣವಾಗಿ ಉತ್ಪಾದನೆ ಹೆಚ್ಚಳ ಮಾಡುವಂತೆ ಸಲಹೆ ನೀಡಿದರು. 
 ಕಾರ್ಖಾನೆ ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿದ್ದು, ಸೀರೆ ಖರೀದಿಗಾಗಿ ಹೊರ ಜಿಲ್ಲೆಗಳಿಂದ ಬರುವ ಸುಮಾರು 500-600 ಜನರು ನಿತ್ಯವೂ ಟೋಕನ್ ಪಡೆಯಲು ಬೆಳಗ್ಗೆ 3 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಲ್ಲುವುದನ್ನು ಗಮನಿಸಿದ್ದು, ಮೈಸೂರು ರೇಷ್ಮೆ ಸೀರೆಗಳಿಗೆ ಎಲ್ಲ ಕಡೆಯಿಂದಲೂ ಬೇಡಿಕೆ ಇದೆ. 
ಸೀರೆ ಕೊಡಿಸಿ ಎಂದು ನನಗೆ ಒತ್ತಡ ಹಾಕುತ್ತಿದ್ದಾರೆ. ಆದರೆ ಪ್ರತಿದಿನ 200 ರಿಂದ 250 ಸೀರೆಗಳನ್ನು ಮಾತ್ರ ಉತ್ಪಾದನೆ ಮಾಡಲಾಗುತ್ತಿದೆ ಎಂದು ಸರ್ಕಾರ ಉತ್ತರ ನೀಡಿದೆ. 
ಮೈಸೂರು ರೇಷ್ಮೆ ಸೀರೆಗಳ ಉತ್ಪಾದನೆ ಲಾಭದಾಯಕ ಉದ್ಯಮ. ರಾಜ್ಯ ಸರ್ಕಾರ ಇನ್ನಷ್ಟು ಬಂಡವಾಳ ಹೂಡಿಕೆ ಮಾಡುವ ಮೂಲಕ ಸೀರೆಗಳ ಉತ್ಪಾದನೆಯನ್ನು ಹೆಚ್ಚಳ ಮಾಡಬೇಕು. ಆ ಮೂಲಕ ಗ್ರಾಹಕರಿಗೆ ತೊಂದರೆ ಆಗದ ರೀತಿಯಲ್ಲಿ ಸೀರೆಗಳನ್ನು ಪೂರೈಕೆ ಮಾಡಬೇಕೆಂದು ಆಗ್ರಹಿಸಿದರು. 
ಇದಕ್ಕೆ ಪ್ರತಿಕ್ರಿಯೆ ನೀಡಿದ ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್, ಮೈಸೂರು ರೇಷ್ಮೆ ಸೀರೆಗಳಿಗೆ ದೊಡ್ಡಮಟ್ಟದ ಬೇಡಿಕೆ ಇದೆ ಎಂಬುದು ಸತ್ಯ. 
ಮೈಸೂರು ರೇಷ್ಮೆ ನೇಯ್ಗೆ ಸಂದರ್ಭದಲ್ಲಿ ಸಣ್ಣಪುಟ್ಟ ಲೋಪವಾದರೂ ಮಹಿಳೆಯರು ಖರೀದಿ ಮಾಡುವುದಿಲ್ಲ. ಆದ್ದರಿಂದ ಅತ್ಯಂತ ಎಚ್ಚರಿಕೆಯಿಂದ ರೇಷ್ಮೆ ಸೀರೆ ತಯಾರಿಸಬೇಕಿದೆ. ಗ್ರಾಹಕರ ಅಗತ್ಯಕ್ಕೆ ತಕ್ಕಷ್ಟು ಸೀರೆ ಉತ್ಪಾದನೆ ಮಾಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು
ಆನ್‌ಲೈನ್ ವಹಿವಾಟು ರದ್ದುಪಡಿಸಿ ಮಳಿಗೆಗಳಲ್ಲಿ ಮಾತ್ರ ರೇಷ್ಮೆ ಸೀರೆಗಳನ್ನು ಮಾರಾಟ ಮಾಡಲು ಸೂಚನೆ ನೀಡಲಾಗುವುದು ಎಂದು ಸದನದಲ್ಲಿ ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net