ಸಮಾನತೆ ನಿರ್ಮಾಣಕ್ಕೆ ಸಂವಿಧಾನದ ಆಶಯಗಳ ಅನುಷ್ಠಾನ ಅಗತ್ಯ : ಸಚಿವ ಡಾ.ಎಚ್.ಸಿ. ಮಹದೇವಪ್ಪ
ಸಚಿವ ಡಾ.ಎಚ್.ಸಿ. ಮಹದೇವಪ್ಪ
Published on:
Copied
Follow Us
ಮೈಸೂರು: ಜನರ ಬದುಕು ಸುಧಾರಿಸುವ ಸಲುವಾಗಿ ಸಂವಿಧಾನ ರಚನೆಯಾಗಿದೆ. ಆದರೆ, ಸಂವಿಧಾನದ ಆಶಯಗಳ ಅನುಷ್ಠಾನದಲ್ಲಿ ಕಂಡು ಬರುತ್ತಿರುವ ಕೊರತೆಗಳಿಂದ ಸಮಾಜದಲ್ಲಿ ಪೂರ್ಣ ಪ್ರಮಾಣದ ಸಮಾನತೆ ನಿರ್ಮಾಣ ಸಾಧ್ಯವಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಬೇಸರ ವ್ಯಕ್ತಪಡಿಸಿದರು.
ಅಶೋಕಪುರಂ ಯೂತ್ ಅಸೋಸಿಯೇಷನ್ ವತಿಯಿಂದ ನಗರದ ಅಶೋಕ ವೃತ್ತದಲ್ಲಿ ಬುಧವಾರ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವಜನರು ಸಂವಿಧಾನದ ಬಗ್ಗೆ ಹೆಚ್ಚಿನ ಜಾಗೃತಿ ಹೊಂದ ಬೇಕು ಹಾಗೂ ಅದರ ಮೌಲ್ಯಗಳನ್ನು ಪಾಲಿಸುವಲ್ಲಿ ಮುಂಚೂಣಿಯಲ್ಲಿರಬೇಕು. ಆ ಮೂಲಕ ಸಂವಿಧಾನದ ಆಶಯಗಳನ್ನು ಜಾರಿಯಾಗುವಂತೆ ಮಾಡಬೇಕು. ಜನರು ಇಂದಿಗೂ ಸಂವಿಧಾನದ ಮೌಲ್ಯಗಳನ್ನು ಸಂಪೂರ್ಣವಾಗಿ ಅಳವಡಿಸಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಮಾತನಾಡಿ, ಸ್ವಾತಂತ್ರೃ ಪೂರ್ವದಲ್ಲಿ ಮಹಿಳೆಯರು ಹಲವಾರು ಸಂಕೋಲೆಗಳಲ್ಲಿ ಸಿಲುಕಿಕೊಂಡಿದ್ದರು. ಆ ಎಲ್ಲ ಸಂಕೋಲೆಗಳಿಂದ ಮಹಿಳೆಯರನ್ನು ಬಿಡುಗಡೆಗೊಳಿಸಿ ಸ್ವಾತಂತ್ರೃ ಮತ್ತು ಸಮಾನತೆಯನ್ನು ಸಂವಿಧಾನದ ಮೂಲಕ ಅಂಬೇಡ್ಕರ್ ದೊರಕಿಸಿಕೊಟ್ಟರು. ಹಾಗಾಗಿ ಪ್ರತಿ ಮಹಿಳೆಯರು ಅಂಬೇಡ್ಕರ್ ಅವರನ್ನು ಸ್ಮರಿಸಬೇಕು ಎಂದು ಹೇಳಿದರು.
ಮಹಿಳಾ ಸಬಲೀಕರಣಕ್ಕೆ ಡಾ.ಅಂಬೇಡ್ಕರ್ ಅವರ ಕೊಡುಗೆ ಅಪಾರ. ಹೆಣ್ಣು ಶಿಕ್ಷಣ ಪಡೆಯಲು ಹಾಗೂ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ತೋರಲು ಅಂಬೇಡ್ಕರ್ ರಚಿಸಿದ ಸಂವಿಧಾನ ಕಾರಣ. ದೇಶದ ಎಲ್ಲ ಮಹಿಳೆಯರಿಗೂ ಶಿಕ್ಷಣದ ಹಕ್ಕು, ಆಸ್ತಿ ಹಕ್ಕು ಸೇರಿದಂತೆ ಹಲವು ಹಕ್ಕುಗಳನ್ನು ಅವರು ಕೊಡಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು, ಮಾಜಿ ಮೇಯರ್ ಪುರುಷೋತ್ತಮ್, ಕೆಪಿಸಿಸಿ ಸದಸ್ಯ ಭಾಸ್ಕರ್, ಪ್ರಮುಖರಾದ ಆರ್.ಸಿ.ಮಹೇಶ್, ಚೆಲುವರಾಜು, ಕೃಷ್ಣ ಹಾಗೂ ಇತರರು ಇದ್ದರು.