ಚಾಮುಂಡಿ ಬೆಟ್ಟದಲ್ಲಿ ನಿಯಮಬಾಹಿರವಾಗಿ ಅಭಿವೃದ್ಧಿ

ಚಾಮುಂಡಿ ಬೆಟ್ಟ
ಚಾಮುಂಡಿ ಬೆಟ್ಟ
Published on

ಪ್ರಮುಖ ಮುಖ್ಯಾಂಶಗಳು

  • ಪರಿಸರಕ್ಕಾಗಿ ನಾವು ಸಂಘಟನೆ ಆರೋಪ
  • ಅನಗತ್ಯ ಅಭಿವೃದ್ಧಿ ನೆಪದಲ್ಲಿ ಬೆಟ್ಟಕ್ಕೆ ಅಪಾಯ
  • ಕೇಂದ್ರ ಸರ್ಕಾರದ ‘ಪ್ರಸಾದ’ ಯೋಜನೆ ಇದರಲ್ಲಿ ಅತಿ ದೊಡ್ಡ ಹಾನಿ ಉಂಟು ಮಾಡಲಿದೆ
ಮೈಸೂರು: ‘ಪ್ರಸಾದ’ ಯೋಜನೆ ಅಡಿಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಕೈಗೊಂಡಿರುವ ಕಾಮಗಾರಿಗಳು ನಿಯಮಬಾಹಿರವಾಗಿದ್ದು, ಜಿಲ್ಲಾ ಪಾರಂಪರಿಕ ಸಮಿತಿ, ಭೂವಿಜ್ಞಾನ ಇಲಾಖೆ ಮೊದಲಾದ ಇಲಾಖೆಗಳ ಅನುಮತಿ ಪಡೆಯದೆ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಪರಿಸರಕ್ಕಾಗಿ ನಾವು ಸಂಘಟನೆ ಕಿಡಿಕಾರಿದೆ.
ಇತ್ತೀಚಿನ ವರ್ಷಗಳಲ್ಲಿ ಅನಗತ್ಯ ಅಭಿವೃದ್ಧಿ ನೆಪದಲ್ಲಿ ಬೆಟ್ಟಕ್ಕೆ ಅಪಾಯ ಎದುರಾಗಿದೆ. ಕೇಂದ್ರ ಸರ್ಕಾರದ ‘ಪ್ರಸಾದ’ ಯೋಜನೆ ಇದರಲ್ಲಿ ಅತಿ ದೊಡ್ಡ ಹಾನಿ ಉಂಟು ಮಾಡಲಿದೆ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ ಶನಿವಾರ ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.
ಚಾಮುಂಡಿಬೆಟ್ಟ ಮೈಸೂರಿನ ಹೆಮ್ಮೆಯ ಹೆಗ್ಗುರುತು. ನಾಡ ಅಧಿದೇವತೆ ಚಾಮುಂಡೇಶ್ವರಿಯ ನೆಲೆ ಎಂದು ಲಕ್ಷಾಂತರ ಭಕ್ತರು ನಂಬಿರುವ ಧಾರ್ಮಿಕ ಹಾಗೂ ಪಾರಂಪರಿಕ ತಾಣ. ಇದು ಅರಣ್ಯ ಪ್ರದೇಶವೂ ಆಗಿದ್ದು, ಅಪರೂಪದ ಸಸ್ಯಗಳು, ಪ್ರಾಣಿ, ಪಕ್ಷಿ, ಚಿಟ್ಟೆಗಳಿವೆ. ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜಲಮೂಲವೂ ಆಗಿದೆ ಎಂದು ವಿವರಿಸಿದರು.
ಬೆಟ್ಟದಲ್ಲಿ ಕಳೆದ 25 ವರ್ಷಗಳಿಂದ ವಿಪರೀತ ಸಂಖ್ಯೆಯಲ್ಲಿ ಮನೆಗಳು ಮತ್ತು ಕಟ್ಟಡಗಳನ್ನು ನಿರ್ಮಿಸಲಾಗಿದೆ. ಬೆಟ್ಟದ ಧಾರಣ ಸಾಮರ್ಥ್ಯ ನಿರ್ಲಕ್ಷಿಸಲಾಗಿದೆ. ಬೆಟ್ಟದ ಸಂರಚನೆ ಬಹಳ ಸೂಕ್ಷ್ಮ ಮತ್ತು ದುರ್ಬಲವಾದುದಾಗಿದೆ ಎಂಬ ತಜ್ಞರ ವರದಿ ಅಸಡ್ಡೆ ಮಾಡಲಾಗಿದೆ. ಇದೇ ರೀತಿ ಈಗ ಇಲ್ಲಿ ‘ಪ್ರಸಾದ’ ಯೋಜನೆಗೆ ಮುಂದಾಗಿದ್ದಾರೆ ಎಂದು ಕಿಡಿಕಾರಿದರು.
ಪಾರಂಪರಿಕ ತಜ್ಞ ಪ್ರೊ. ರಂಗರಾಜನ್ ಮಾತನಾಡಿ, ಈ ಯೋಜನೆ ತೀರ್ಥಯಾತ್ರೆ ಮತ್ತು ಆಧ್ಯಾತ್ಮಿಕ, ಪಾರಂಪರಿಕ ಉಪಕ್ರಮವಾಗಿದೆ. ಆದರೆ ಚಾಮುಂಡಿಬೆಟ್ಟಕ್ಕೆ ಇದು ಸೂಕ್ತವಲ್ಲ. 
ಇದು ಈ ಬೆಟ್ಟದ ಆಧ್ಯಾತ್ಮಿಕತೆ ಮತ್ತು ಪಾರಂಪರಿಕ ಮೌಲ್ಯ ಕುಗ್ಗಿಸುವ ಕಾಮಗಾರಿಯಾದ ಪರಿಣಾಮ ಬೀರುತ್ತದೆ. ಸೂಕ್ಷ್ಮ ಹಾಗೂ ದುರ್ಬಲವಾಗಿರುವ ಈ ಬೆಟ್ಟದ ಮೇಲೆ ಕಟ್ಟಡ ಕಟ್ಟಿದರೆ ಭವಿಷ್ಯದಲ್ಲಿ ದೊಡ್ಡ ಅನಾಹುತಗಳಿಗೆ ಕಾರಣವಾಗಲಿದೆ. 
ಇದರ ಬದಲು ಈಗ ಈ ಯೋಜನೆ ಅಡಿಯಲ್ಲಿ ಬರುವ ಹಣವನ್ನು ವಿದ್ಯುತ್ ಚಾಲಿತ ವಾಹನ ಖರೀದಿಸಿ ಬೆಟ್ಟದ ಭಕ್ತರಿಗೆ ಪ್ರಯಾಣ ಸೌಲಭ್ಯ ಒದಗಿಸುವುದು, ಬೆಟ್ಟದ ಮೇಲೆ ಕಸದ ಸಮಸ್ಯೆ, ಪ್ಲಾಸ್ಟಿಕ್ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಬಳಸಬೇಕು. ಬೆಟ್ಟ ಸಂರಕ್ಷಿತ ಅರಣ್ಯ ಪ್ರದೇಶವಾಗಿದ್ದು, ಇದರ ಹಸಿರೀಕರಣಕ್ಕೆ ಮತ್ತು ಇಲ್ಲಿನ ಜೀವ ವೈವಿಧ್ಯತೆ ಹೆಚ್ಚಿಸಲು ಬಳಸಬೇಕು ಎಂದು ಒತ್ತಾಯಿಸಿದರು. 
ಮಾಜಿ ಮೇಯರ್ ಬಿ.ಎಲ್. ಭೈರಪ್ಪ, ನಿವೃತ್ತ ಪ್ರಾಧ್ಯಾಪಕ ಪ್ರೊ.ಕಾಳಚನ್ನೇಗೌಡ, ವಕೀಲರ ರವಿಕುಮಾರ್ ಇನ್ನಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net