ಕಾಂಗ್ರೆಸ್ ಪಕ್ಷವನ್ನು ತೆಗಳುವ ಕೆಲಸ ಮಾಡಿದರೆ ತಕ್ಕ ಪಾಠ

ಏಜಾಜ್ ಪಾಷ
ಏಜಾಜ್ ಪಾಷ
Published on
ಎಚ್.ಡಿ.ಕೋಟೆ : ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರು ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮನವೊಲಿಸುವ ನೆಪದಲ್ಲಿ ಕಾಂಗ್ರೆಸ್ ಪಕ್ಷವನ್ನು ತೆಗಳುವ ಕೆಲಸವನ್ನು ಜೆಡಿಎಸ್ ಪಕ್ಷದ ಕೃಷ್ಣ ನಾಯಕ ಮಾಡಿದ್ದು ಮುಂದಿನ ದಿನಗಳಲ್ಲಿ ಇದೇ ರೀತಿ ಮುಂದುವರಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ಪಕ್ಷದ ತಾಲೂಕು ಅಧ್ಯಕ್ಷ ಏಜಾಜ್ ಪಾಷ ತಿಳಿಸಿದರು.
ಮೂರು ದಿನದ ಹಿಂದೆ ಪಟ್ಟಣದಲ್ಲಿ ನಡೆದ ಜೆಡಿಎಸ್ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಕೃಷ್ಣನಾಯಕ ಕಾಂಗ್ರೆಸ್ ಪಕ್ಷದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಸುಳ್ಳು ಮಾಹಿತಿ ನೀಡಿ ವಾಗ್ದಾಳಿ ನಡೆಸಿರುವುದು ಖಂಡನೀಯ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ತಾಲೂಕಿನ 20 ಗ್ರಾಮಗಳಿಂದ ಸಾವಿರಾರು ಜನ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರುತ್ತಿದ್ದಾರೆ ಎಂದು ಸುಳ್ಳು ಹೇಳಿಕೆ ನೀಡಿರುವುದು ಕೂಡ ಗಮನಕ್ಕೆ ಬಂದಿದೆ, ಇದು ನಮ್ಮ ಪಕ್ಷವನ್ನು ಕುಗ್ಗಿಸುವ ಯತ್ನ ನಡೆದಿದೆ, ಆದರೆ ನಮ್ಮ ಪಕ್ಷಕ್ಕೆ 120 ವರ್ಷಗಳ ಇತಿಹಾಸ ಇದೆ. ಯಾವುದೇ ಕಾರಣಕ್ಕೂ ನಾವು ಕುಗ್ಗುವುದಿಲ್ಲ ಎಂದು ತಿಳಿಸಿದರು.
ಮುಖಂಡ ಎಚ್.ಸಿ. ನರಸಿಂಹಮೂರ್ತಿ ಮಾತನಾಡಿ, ತಾಲೂಕಿನಲ್ಲಿ ಎಲ್ಲ ಗ್ರಾಮಗಳ ಅಭಿವೃದ್ಧಿಗೆ ಏಳು ವರ್ಷಗಳ ಅವಧಿಯಲ್ಲಿ ಏಳು ಸಾವಿರ ಕೋಟಿ ರೂ. ಬಿಡುಗಡೆ ಮಾಡಿ ಅಭಿವೃದ್ಧಿ ಮಾಡಲಾಗಿದೆ. ಪ್ರತಿ ವರ್ಷ 400-500 ಕೋಟಿ ರೂ. ಅಭಿವೃದ್ಧಿಗೆ ಬಿಡುಗಡೆ ಮಾಡಲಾಗಿದೆ ಎಂದರು.
ಶಿಕ್ಷಣ ಇಲಾಖೆಯ ಅಭಿವೃದ್ಧಿಗೆ ಶಾಸಕ ಅನಿಲ್ ಚಿಕ್ಕಮಾದು ಪಣತೊಟ್ಟಿದ್ದು, ನೂರಾರು ಶಾಲಾ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದಾರೆ. ಜತೆಗೆ 23 ಕೋಟಿ ರೂ.ವೆಚ್ಚದಲ್ಲಿ ದುರಸ್ತಿ ಆಗಿದ್ದ ಕಟ್ಟಡಗಳನ್ನು ನವೀಕರಣ ಮಾಡಲಾಗಿದೆ. ಹೊರಗುತ್ತಿಗೆ ಆಧಾರದಲ್ಲಿ ಖಾಲಿ ಇದ್ದ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸಿಕೊಂಡು ಶಿಕ್ಷಕರ ಕೊರತೆಯನ್ನು ನೀಗಿಸಲಾಗಿದೆ ಎಂದರು.
ಕೃಷ್ಣನಾಯಕ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಮೆಚ್ಚಿಸಲು ಹಾಗೂ ವಿಧಾನಸಭಾ ಚುನಾವಣೆಗೆ ಟಿಕೆಟ್ ಪಡೆಯಲು ಅಂಕಿ-ಅಂಶದ ಆಧಾರವಿಲ್ಲದ ಅಭಿವೃದ್ಧಿ ವಿರುದ್ಧದ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದರು.
ಅಕ್ರಮ ಸಕ್ರಮ ಸದಸ್ಯರಾದ ಕೆಂಡಗಣ್ಣೇಗೌಡ, ತಾಯಮ್ಮ, ಸೋಮೆಗೌಡ, ಮುಖಂಡ ಬಾಲಯ್ಯ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net