ಒಗ್ಗೂಡದಿದ್ದರೆ ಹೆಚ್ಚಾಗಲಿದೆ ನಾಡದ್ರೋಹಿಗಳ ಶಕ್ತಿ

ಕನ್ನಡ
ಕನ್ನಡ
Published on

ಪ್ರಮುಖ ಮುಖ್ಯಾಂಶಗಳು

  • ಕನ್ನಡಾಂಬೆ ರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಬಿ.ರಾಜಶೇಖರ್ ಆತಂಕ
  • ಕನ್ನಡಪರ ಸಂಘಟನೆಗಳ ಮುಖ್ಯಸ್ಥರ ಪೂರ್ವಭಾವಿ ಸಭೆ
ಮೈಸೂರು: ಕನ್ನಡ ನೆಲ, ಜಲ, ಭಾಷೆಯ ಪರವಾಗಿ ಕೆಲಸ ಮಾಡುವ ಎಲ್ಲ ಕನ್ನಡಪರ ಸಂಘಟನೆಗಳು ಒಗ್ಗಟ್ಟಾಗಬೇಕು. ನಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ನಾವು ಒಂದಾಗಬೇಕು. ನಾವು ದೂರ ಉಳಿದಷ್ಟು ನಾಡದ್ರೋಹಿಗಳ ಶಕ್ತಿ ಹೆಚ್ಚಾಗುತ್ತದೆ ಎಂದು ಕನ್ನಡಾಂಬೆ ರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಬಿ.ರಾಜಶೇಖರ್ ಹೇಳಿದರು.
ಡಿ.28ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯದ ಎಲ್ಲ ಕನ್ನಡಪರ ಸಂಘಟನೆಗಳು ಆಯೋಜಿಸಿರುವ ಜನರಾಜ್ಯೋತ್ಸವ ಕಾರ್ಯಕ್ರಮ ಸಂಬಂಧ ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡಪರ ಸಂಘಟನೆಗಳ ಮುಖ್ಯಸ್ಥರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಜನರಾಜ್ಯೋತ್ಸವ ಕೇವಲ ಒಂದು ಕಾರ್ಯಕ್ರಮವಲ್ಲ. ಇದು ಕನ್ನಡಿಗರ ಒಗ್ಗಟ್ಟಿನ ಹೊಸ ಅಧ್ಯಾಯ. ಈ ಒಗ್ಗಟ್ಟನ್ನು ಬರೀ ಮಾತಿನಲ್ಲಿ ಹೇಳುವುದಲ್ಲ, ನಾಡಿನ ಜನರ ಮುಂದೆ ನಾವು ನಡೆದು ತೋರಿಸಬೇಕಾಗಿದೆ. ನಮ್ಮ ಒಗ್ಗಟ್ಟಿನ ಸ್ಪಷ್ಟ ಸಂದೇಶವನ್ನು ನೀಡಿದ್ದೇವೆ. ಕನ್ನಡದ ಕಾಯಕಕ್ಕಾಗಿ ಎಲ್ಲರೂ ಒಂದಾಗಿ ಕಂಕಣಬದ್ಧವಾಗಿ ನಿಲ್ಲೋಣ, ಇದು ನಿಮ್ಮದೇ ಕಾರ್ಯಕ್ರಮ, ನಿಮ್ಮದೇ ಜವಾಬ್ದಾರಿ ಎಂಬ ಭಾವನೆಯೊಂದಿಗೆ ನಾಡಿನ ಭವಿಷ್ಯಕ್ಕಾಗಿ, ಕನ್ನಡದ ಗೌರವಕ್ಕಾಗಿ ಎಲ್ಲ ಸಂಘಟನೆಗಳು ಲಕ್ಷಾಂತರ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಒಗ್ಗಟ್ಟಿನ ಶಕ್ತಿಯನ್ನು ಮತ್ತೊಮ್ಮೆ ಪ್ರದರ್ಶಿಸಬೇಕು ಎಂದು ಹೇಳಿದರು.
ಕನ್ನಡಾಂಬೆ ರಕ್ಷಣಾ ವೇದಿಕೆ, ಕಸ್ತೂರಿ ಕರ್ನಾಟಕ ನ್ಯಾಯಪರ ವೇದಿಕೆ, ಸಮಾಜ ರಕ್ಷಣಾ ವೇದಿಕೆ, ನಮ್ಮ ಜೈ ಕರುನಾಡ ವೇದಿಕೆ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಬೆಂಬಲ ಸೂಚಿಸಿದರು.
ಕಸ್ತೂರಿ ಕರ್ನಾಟಕ ನ್ಯಾಯಪರ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಗಿರೀಶ್ ಶಿವಾರ್ಚಕ, ಕನ್ನಡಾಂಬೆ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ರಾಜಶೇಖರ್, ರಾಜ್ಯ ಖಜಾಂಚಿ ನಂಜುಂಡ, ಪ್ರಮುಖರಾದ ಹೊನ್ನೇಗೌಡ, ಶಿವಕುಮಾರ್, ಕೃಷ್ಣಮೂರ್ತಿ, ಸೋಮಶೇಖರ, ಮಲ್ಲೇಗೌಡ, ಲೂಯಿಸ್, ಅಶ್ವಿನಿ, ಅನಿತಾ, ಸಂತೋಷ್, ಸಿಂಧುವಳ್ಳಿ ಶಿವಕುಮಾರ್, ಹರೀಶ, ಲೋಕೇಶ್ ಜಿ., ಮಂಜುಳಾ, ರವಿಗೌಡ, ನಾಗರಾಜು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net