ನಾನು ಸಿಎಂ ಆದ್ರೆ ರಾಜ್ಯದಲ್ಲೂ ಬುಲ್ಡೋಜರ್ ಕಾರ್ಯಕ್ರಮ: ಬಸನಗೌಡ ಪಾಟೀಲ್ ಯತ್ನಾಳ್

ಬಸನಗೌಡ ಪಾಟೀಲ್ ಯತ್ನಾಳ್
ಬಸನಗೌಡ ಪಾಟೀಲ್ ಯತ್ನಾಳ್
Published on

ಪ್ರಮುಖ ಮುಖ್ಯಾಂಶಗಳು

  • ಹಿಂದು ಹೆಣ್ಮಕ್ಕಳ ಲವ್ ಜಿಹಾದ್ ಮಾಡುವವರ ವಿರುದ್ಧ ಬುಲ್ಡೋಜರ್ ಕಾರ್ಯಕ್ರಮ
  • ಹಿಂದುಗಳ ರಕ್ಷಣೆ, ಅಭಿವೃದ್ಧಿಗೆ ಯಾವುದೇ ಯೋಜನೆ ಇಲ್ಲದ ಸರ್ಕಾರ
  • ಸಿದ್ದರಾಮಯ್ಯ ಹಿಂದುಗಳ ಪರವಾಗಿ ಎಂದೂ ಮಾತಾಡಲ್ಲ
ಮೈಸೂರು: ನಾನು ಸಿಎಂ ಆದರೆ ದೇಶ ವಿರೋಧಿಗಳು, ಹಿಂದು ಹೆಣ್ಮಕ್ಕಳ ಲವ್ ಜಿಹಾದ್ ಮಾಡುವವರ ವಿರುದ್ಧ ಬುಲ್ಡೋಜರ್ ಕಾರ್ಯಕ್ರಮ ಆರಂಭಿಸುವುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಸರ್ಕಾರ ಮುಸ್ಲಿಂ ಪರವಾಗಿದ್ದು, ಹಿಂದುಗಳ ರಕ್ಷಣೆ, ಹಿಂದುಗಳ ಅಭಿವೃದ್ಧಿಗೆ ಯಾವುದೇ ಯೋಜನೆ ಇಲ್ಲ. ಈ ಹಿನ್ನೆಲೆಯಲ್ಲಿ ಚಾಮರಾಜನಗರದಿಂದ ಬೀದರ್‌ವರೆಗೆ ಹಿಂದುತ್ವದ ಜಾಗೃತಿ ಮಾಡುತ್ತಿದ್ದು, ಹಿಂದುಗಳ ಮೇಲಿನ ಹಲ್ಲೆ, ಇಸ್ಲಾಂ, ಭಯೋತ್ಪಾದಕರಿಂದ ಯಾವ ರೀತಿ ಅಪಾಯವಿದೆ ಎಂಬುದನ್ನು ತಿಳಿಸುತ್ತಿದ್ದೇವೆ ಎಂದರು.
ಸಿದ್ದರಾಮಯ್ಯ ಮುಸ್ಲಿಂ ಪರವಾಗಿ ಮಾತಾಡೋದು ಬಿಟ್ಟರೆ, ಹಿಂದುಗಳ ಪರವಾಗಿ ಎಂದೂ ಮಾತಾಡಲ್ಲ. ಹೀಗಿರುವಾಗ ಅವರು ಜಾತ್ಯತೀತ ನಾಯಕರು ಹೇಗೆ ಆಗುತ್ತಾರೆ? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಸೇರಿದಂತೆ ಇತರರು ಸಂವಿಧಾನಬದ್ಧವಾಗಿ ನಡೆಯುತ್ತಾರೆ ಎಂಬ ವಿಶ್ವಾಸವೂ ಇಲ್ಲ. ಹಾಗಾಗಿ ನಾನು ಮುಖ್ಯಮಂತ್ರಿಯಾದರೆ ಹಿಂದು ಪರವಾದ ಹಾಗೂ ಭ್ರಷ್ಟಾಚಾರಮುಕ್ತ ಆಡಳಿತ ಕೊಡುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಮುಂದೆಯೂ ಅಡ್ಜೆಸ್ಟ್‌ಮೆಂಟ್ ರಾಜಕಾರಣಿಗಳು ಮುಖ್ಯಮಂತ್ರಿಯಾದರೆ ಈಗಿರುವ ಸಿದ್ದರಾಮಯ್ಯ ಸರ್ಕಾರಕ್ಕೂ, ಅದಕ್ಕೂ ವ್ಯತ್ಯಾಸವಿರುವುದಿಲ್ಲ. ಈ ಹಿಂದೆ ಆಡಳಿತ ಮಾಡಿದ ಯಡಿಯೂರಪ್ಪ ಅವರು ಹಿಂದುಗಳ ರಕ್ಷಣೆ ಮಾಡಲಿಲ್ಲ, ಹಿಂದು ಪರ ನಿರ್ಣಯ ತೆಗೆದುಕೊಳ್ಳಲಿಲ್ಲ. ಬದಲಾಗಿ ಭ್ರಷ್ಟಾಚಾರ ಮಾಡಿದರು. ಆ ಎಲ್ಲ ದಾಖಲೆಗಳನ್ನು ಇಟ್ಟುಕೊಂಡು ಈಗ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹೆದರಿಸಿದ್ದಾರೆ ಎಂದು ಕಿಡಿಕಾರಿದರು.
ಈಗ ಯಡಿಯೂರಪ್ಪ ಅವರ ಮಗ ಎರಡು ವರ್ಷಗಳ ಕಾಲ ಶಾಸಕರಾಗಿ ಸರ್ಕಾರದ ವಿರುದ್ಧ ಮಾತನಾಡಲಿಲ್ಲ. ಸಿದ್ದರಾಮಯ್ಯ ಹಿಂದು ವಿರೋಧಿ ಬಜೆಟ್ ಮಂಡಿಸಿದಾಗ ಸುದೀರ್ಘ ಬಜೆಟ್ ನೀಡಿದಿರಿ ಎಂದು ಅಭಿನಂದನೆ ಸಲ್ಲಿಸಿದರು. ಆರ್‌ಸಿಬಿ ಕಾಲ್ತುಳಿತ ವಿಚಾರ ಬಂದಾಗ ಸದನದಲ್ಲಿ ಕೂರಲಿಲ್ಲ ಎಂದು ಪರೋಕ್ಷವಾಗಿ ಬಿ.ವೈ.ವಿಜಯೇಂದ್ರ ವಿರುದ್ಧ ವಾಗ್ದಾಳಿ ಮಾಡಿದರು.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ವಿರುದ್ಧ ಮಾತನಾಡಲಿಲ್ಲ. ಈ ಕಾರಣಕ್ಕೆ ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಬದಲಾಗಬೇಕಿದ್ದು, ಜನರ ಮನಸ್ಸಲ್ಲಿ ವಿಜಯೇಂದ್ರಗೆ ಯಾವ ಅನುಕಂಪವೂ ಇಲ್ಲ ಎಂದು ಟೀಕಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net